ಮುಂದಿನ 3 ವರ್ಷಗಳಲ್ಲಿ ಅಂತರ್ಜಲ ಮಟ್ಟ ವೃದ್ಧಿ –ಚಂಡೋಲಿಯಾ

ತುಮಕೂರು

     ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನೀರು ಸಂರಕ್ಷಣಾ ಕಾರ್ಯಗಳನ್ನು ಕೈಗೊಂಡಿರುವುದರಿಂದ ಮುಂದಿನ 3 ವರ್ಷಗಳಲ್ಲಿ ಅಂತರ್ಜಲ ಮಟ್ಟ ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ ಎಂದು ಕೇಂದ್ರ ಜಲಶಕ್ತಿ ಅಭಿಯಾನ ತಂಡದ ಮುಖ್ಯಸ್ಥ ಹಾಗೂ ಜಿಲ್ಲಾ ನೋಡಲ್ ಅಧಿಕಾರಿ ಆರ್.ಕೆ. ಚಂಡೋಲಿಯಾ ಅಭಿಪ್ರಾಯಪಟ್ಟರು.

      ಮಧುಗಿರಿ ತಾಲ್ಲೂಕು ದಬ್ಬೇಘಟ್ಟ ಗ್ರಾಮಪಂಚಾಯತಿ ವ್ಯಾಪ್ತಿ ಹರಿಹರ ಗ್ರಾಮದಲ್ಲಿಂದು ಪಂಚಾಯತ್ ರಾಜ್ ಇಲಾಖೆಯಿಂದ 2016-17ರಲ್ಲಿ 5.7ಲಕ್ಷ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿರುವ ಚೆಕ್‍ಡ್ಯಾಂ ಅನ್ನು ವೀಕ್ಷಿಸುತ್ತಾ ಮಾತನಾಡಿದ ಅವರು, ಜಿಲ್ಲೆಯಲ್ಲಿ ತೀವ್ರ ಅಂತರ್ಜಲ ಕುಸಿತಗೊಂಡ ಪ್ರದೇಶಗಳಲ್ಲಿ ನೀರು ಸಂರಕ್ಷಣಾ ಕಾಮಗಾರಿಗಳ ಬಗ್ಗೆ ಅಧ್ಯಯನ ಮಾಡಲು ಭಾರತ ಸರ್ಕಾರದಿಂದ ತಂಡಗಳನ್ನು ನೇಮಿಸಿದ್ದು, ತಂಡವು ದೇಶದ ಎಲ್ಲಾ ರಾಜ್ಯಗಳ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ನೀರು ಸಂರಕ್ಷಣಾ ಕಾಮಗಾರಿಗಳ ಬಗ್ಗೆ ಕೂಲಂಕುಷವಾಗಿ ಮಾಹಿತಿ ಪಡೆಯಲಿದೆ.

      ಅಲ್ಲದೆ ಕಳೆದ 5 ವರ್ಷಗಳ ಅವಧಿಯಲ್ಲಿ ಇಲಾಖೆಗಳು ಅನುಷ್ಟಾನ ಮಾಡಿರುವ ಹಾಗೂ ಮುಂದಿನ 5 ವರ್ಷಗಳಲ್ಲಿ ಯೋಜಿಸಿರುವ ನೀರು ಸಂರಕ್ಷಣಾ ಕಾಮಗಾರಿಗಳ ಬಗ್ಗೆ ಮಾಹಿತಿ ಕ್ರೋಢೀಕರಿಸಿ ಕೇಂದ್ರಕ್ಕೆ ವರದಿ ಸಲ್ಲಿಸಲಾಗುವುದು. ನೀರಿನ ಬರವನ್ನು ತಗ್ಗಿಸಲು ಕೈಗೊಳ್ಳಬಹುದಾದ ಸೂಕ್ತ ಕ್ರಮಗಳ ಬಗ್ಗೆ ಕೇಂದ್ರದಲ್ಲಿ ನಿರ್ಣಯ ತೆಗೆದುಕೊಳ್ಳಲು ಈ ವರದಿ ನೆರವಾಗಲಿದೆ ಎಂದು ತಿಳಿಸಿದರು.

      ಮಧುಗಿರಿ ತಾಲ್ಲೂಕಿನ ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸುರೇಶ್ ಮಾತನಾಡಿ, ಈ ಚೆಕ್‍ಡ್ಯಾಮನ್ನು 2016-17ರಲ್ಲಿ ನಿರ್ಮಿಸಲಾಗಿದ್ದು, 1550 ಕ್ಯುಬಿಕ್ ಮೀಟರ್ಸ್ ನೀರಿನ ಸಾಮಥ್ರ್ಯ ಹೊಂದಿದೆ. ಚೆಕ್‍ಡ್ಯಾಂ ನಿರ್ಮಾಣದಿಂದ ಬತ್ತಿ ಹೋಗಿದ್ದ ಸುತ್ತಮುತ್ತಲಿನ ಸುಮಾರು ಏಳೆಂಟು ಕೊಳವೆ ಬಾವಿಗಳಿಗೆ ಮರುಜೀವ ಬಂದು ನೀರು ಸಂಗ್ರಹವಾಗಿದೆ.

       ಮಳೆ ಬಂದಾಗ ನೀರು ನಿಲ್ಲುವುದರಿಂದ ಕೃಷಿ ಚಟುವಟಿಕೆಗಳಿಗೂ ಪ್ರಯೋಜನವಾಗುವುದು ಎಂದು ಕೇಂದ್ರ ತಂಡಕ್ಕೆ ಮಾಹಿತಿ ನೀಡಿದರು. ಸ್ಥಳೀಯ ರೈತ ತಿಮ್ಮೇಗೌಡ ಮಾತನಾಡಿ, ಈ ಚೆಕ್‍ಡ್ಯಾಂ ಕಟ್ಟಿದ ಮೇಲೆ ತಮ್ಮ ಹೊಲದಲ್ಲಿ ಒಣಗಿ ಹೋಗಿದ್ದ ತೆರೆದ ಬಾವಿಯಲ್ಲಿ 25 ಅಡಿ ಆಳದಲ್ಲಿ ಸದಾ ನೀರು ದೊರೆಯುವಂತಾಗಿದೆ. ಇದರಿಂದ ಕುಡಿಯುವ ನೀರಿಗೆ ಉಪಯೋಗವಾಗಿದೆ ಎಂದು ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

      ನಂತರ ದೊಡ್ಡೇರಿ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯ ವಿಶೇಷ ಅನುದಾನದಡಿ ಸ್ಥಳೀಯ ರೈತರ ಜಮೀನಿನಲ್ಲಿ ನೆಟ್ಟಿರುವ ಸುಮಾರು 1500 ಹುಣಸೇ ಗಿಡಗಳನ್ನು ವೀಕ್ಷಿಸಿದ ಚಂಡೋಲಿಯಾ ಅವರು, ಅರಣ್ಯ ಅಧಿಕಾರಿ ಚಂದ್ರಪ್ಪ ಅವರಿಂದ ಮಾಹಿತಿ ಪಡೆದರು.

       ಮಾಹಿತಿ ನೀಡಿದ ಚಂದ್ರಪ್ಪ ಅವರು ಇಲಾಖೆಯಿಂದ ಹುಣಸೆ ಗಿಡಗಳನ್ನು ರೈತರ ಜಮೀನಿನಲ್ಲಿ ಉಚಿತವಾಗಿ ನೆಡಲಾಗಿದೆ. ಅಲ್ಲದೆ ಈ ಗಿಡಗಳ ಮಾಲೀಕತ್ವವನ್ನು ಜಮೀನಿನ ರೈತರಿಗೆ ನೀಡಲಾಗಿದ್ದು, ಮುಂದಿನ 7-8 ವರ್ಷಗಳಲ್ಲಿ ಗಿಡ ಬೆಳೆದು ಫಸಲು ಬಂದಾಗ ರೈತರಿಗೆ ವಾರ್ಷಿಕ 50,000 ರೂ.ಗಳ ಆದಾಯ ಬರಲಿದೆ. ಹುಣಸೆ ಗಿಡಗಳು ಮಳೆ ನೀರನ್ನು ಹೆಚ್ಚಾಗಿ ಹೀರಿಕೊಳ್ಳುವ ಶಕ್ತಿ ಇರುವುದರಿಂದ ಭೂಮಿಯಲ್ಲಿ ನೀರು ಸುಲಭವಾಗಿ ಇಂಗುತ್ತದೆ. ಇದರಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ವೃದ್ಧಿಯಾಗಲು ನೆರವಾಗುತ್ತದೆ ಎಂದು ಮಾಹಿತಿ ನೀಡಿದರು.

       ನಂತರ ಮಧುಗಿರಿ ತಾಲ್ಲೂಕು ಪಂಚಾಯತಿ ಕಟ್ಟಡ ಮೇಲ್ಛಾವಣಿಯಿಂದ ಮಳೆ ನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿ ಕಟ್ಟಡದ ಪಕ್ಕದಲ್ಲೆ ಇರುವ ಕಲ್ಯಾಣಿಯಲ್ಲಿ ಇಂಗಿಸಲು ಮಾಡಿರುವ ವ್ಯವಸ್ಥೆಯನ್ನು ವೀಕ್ಷಿಸಿದ ತಂಡ ಪ್ರಶಂಸೆ ವ್ಯಕ್ತಪಡಿಸಿತು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ದೊಡ್ಡರಂಗಯ್ಯ ತಂಡಕ್ಕೆ ಮಾಹಿತಿ ನೀಡುತ್ತಾ ಸುಮಾರು 1671ರಲ್ಲಿ ರಾಜರ ಕಾಲದಲ್ಲಿ ನಿರ್ಮಾಣಗೊಂಡಿದ್ದ ಈ ಕಲ್ಯಾಣಿಯು ಕಸಕಡ್ಡಿಗಳಿಂದ ಮುಚ್ಚಿಹೋಗಿತ್ತು. ಸುಮಾರು 10ಲಕ್ಷ ರೂ. ವೆಚ್ಚದಲ್ಲಿ ಕಲ್ಯಾಣಿಯ ಹೂಳನ್ನು ಎತ್ತಿ ಸ್ವಚ್ಛಗೊಳಿಸಿ ಇಂಗು ಗುಂಡಿಯಾಗಿ ಪರಿವರ್ತಿಸಲಾಗಿದೆ ಎಂದು ತಿಳಿಸಿದರು.

        ನಂತರ ಮಧುಗಿರಿ ಪುರಸಭೆ ಕಚೇರಿಯಲ್ಲಿ ಆರ್.ಓ.ಪ್ಲಾಂಟ್(ವಾಟರ್ ಡಾಕ್ಟರ್)ನಿಂದ ವ್ಯರ್ಥವಾಗುತ್ತಿರುವ ನೀರ(1.5ಕೋಟಿ ಲೀ. ನೀರು)ನ್ನು ಇಂಗಿಸಲು 80 ಸಾವಿರ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಇಂಗು ಗುಂಡಿಗಳನ್ನು ವೀಕ್ಷಿಸಲು ತಂಡ ಭೇಟಿ ನೀಡಿದ ಸಂದರ್ಭದಲ್ಲಿ ಮಾಹಿತಿ ನೀಡಿದ ಪುರಸಭೆ ಮುಖ್ಯಾಧಿಕಾರಿ ಲೋಹಿತ್ ಅವರು ಪುರಸಭೆ ವ್ಯಾಪ್ತಿಯಲ್ಲಿ ಇದೇ ರೀತಿ ಇನ್ನೂ 3 ಇಂಗು ಗುಂಡಿಗಳನ್ನು ನಿರ್ಮಿಸಲಾಗಿದೆ. ಸುಮಾರು 25 ಖಾಸಗಿ ಮನೆಗಳಲ್ಲಿ ತಲಾ ಕೇವಲ 10 ಸಾವಿರ ರೂ. ಖರ್ಚಿನಲ್ಲಿ ಮಳೆ ನೀರು ಕೊಯ್ಲು ಪದ್ಧತಿಯನ್ನು ಅಳವಡಿಸಲಾಗಿದೆ.

        ಮಧುಗಿರಿ ಬೆಟ್ಟದ ಮೇಲಿನಿಂದ ಬರುವ ನೀರನ್ನು ಇಂಗಿಸಲು ಕುಂಬಾರಕಟ್ಟೆಯಲ್ಲಿ 7 ಕೋಟಿ ಲೀ. ನೀರು ಇಂಗುವ ಗುಂಡಿಯನ್ನು ನಿರ್ಮಿಸಲಾಗಿದೆ. ಈ ಇಂಗು ಗುಂಡಿಗಳಿಂದ ಪುರಸಭೆ ವ್ಯಾಪ್ತಿಯಲ್ಲಿ ಜಲಮರುಪೂರಣ ವಾಗುತ್ತಿದೆಯಲ್ಲದೆ ಪ್ರತಿನಿತ್ಯ ಆರ್.ಓ. ಪ್ಲಾಂಟ್‍ಗಳಿಂದ ಸುಮಾರು 25000 ಲೀ. ನೀರು ಹಾಗೂ ವಾರ್ಷಿಕ 91ಲಕ್ಷ ಲೀ. ನೀರು ವ್ಯರ್ಥವಾಗುವುದನ್ನು ಸದ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರಲ್ಲದೆ ಪುರಸಭೆ ವ್ಯಾಪ್ತಿಯ ಎಲ್ಲಾ ಹೊಸ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡುವಾಗ ಮಳೆ ನೀರು ಕೊಯ್ಲು ಪದ್ಧತಿಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ಮಾಹಿತಿ ನೀಡಿದರು.

       ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಚಂಡೋಳಿಯ ಅವರು, ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾಡಳಿತದಿಂದ ನೀರು ಸಂರಕ್ಷಣಾ ಕಾರ್ಯಗಳನ್ನು ಅಭೂತಪೂರ್ವವಾಗಿ ಕೈಗೊಳ್ಳುವ ಮೂಲಕ ಇತರೆ ಜಿಲ್ಲೆಗಳಿಗೆ ಮಾದರಿಯಾಗಿದೆ. ಕೇಂದ್ರವು ಹೊಸದಾಗಿ ಜಲಶಕ್ತಿ ಆಯೋಗ ಇಲಾಖೆಯನ್ನು ಸೃಜಿಸಿದ್ದು, ಜಲಶಕ್ತಿ ಯೋಜನೆಯನ್ನು ಜಾರಿಗೆ ತಂದಿದೆ. ಆಯೋಗವು ಅಧಿಕಾರಿಗಳ ತಂಡವನ್ನು ರಚಿಸಿ ದೇಶದಲ್ಲಿರುವ ಸುಮಾರು 560 ಜಿಲ್ಲೆಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಲು ನಿಯೋಜಿಸಿದೆ.

       ತಮ್ಮ ನೇತೃತ್ವದ ತಂಡವು ಪ್ರವಾಸ ಕೈಗೊಂಡು ಜಿಲ್ಲೆಯಲ್ಲಿ ಕೈಗೊಂಡಿರುವ ನೀರನ್ನು ಇಂಗಿಸುವ, ಚೆಕ್‍ಡ್ಯಾಂ ನಿರ್ಮಾಣ, ಮಳೆ ನೀರು ಕೊಯ್ಲು ಅಳವಡಿಕೆ, ಗೋಕಟ್ಟೆ ನಿರ್ಮಾಣ, ಕೃಷಿ ಹೊಂಡ, ಗಿಡ ನೆಡುವ ಕಾರ್ಯಕ್ರಮ ಸೇರಿದಂತೆ ನೀರು ಸಂರಕ್ಷಣೆಗಾಗಿ ರಾಜ್ಯ ಸರ್ಕಾರ ಕೈಗೊಂಡಿರುವ ಚಟುವಟಿಕೆಗಳನ್ನು ಅಧ್ಯಯನ ಮಾಡಲಿದೆ ಎಂದು ತಿಳಿಸಿದರು.

       ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ (ಅಭಿವೃದ್ಧಿ) ಟಿ.ಕೆ.ರಮೇಶ್ ಮಾತನಾಡಿ, ಜೀವಜಲವನ್ನು ಸಂರಕ್ಷಿಸಲು ರಾಜ್ಯ ಸರ್ಕಾರದ ಜಲಾಮೃತ ಯೋಜನೆಯಂತೆ ಕೇಂದ್ರದಿಂದ ಜಲಶಕ್ತಿ ಎಂಬ ಯೋಜನೆಯನ್ನು ಜಾರಿಗೆ ತರಲಾಗಿದೆ. ಮಳೆ ಇಲ್ಲದೆ ಅಂತರ್ಜಲ ಮಟ್ಟ ಕುಸಿದು, ನೀರಿನ ಬವಣೆ ಹೆಚ್ಚುತ್ತಿರುವುದರಿಂದ ಇಲ್ಲಿನ ಜನ-ಜಾನುವಾರುಗಳಿಗೆ ನೀರಿನ ಕೊರತೆ ಎಷ್ಟಿದೆ ಎಂದು ಅಧ್ಯಯನದಿಂದ ತಿಳಿಯುವ ಉದ್ದೇಶ ಈ ಯೋಜನೆಯದ್ದಾಗಿದೆ. ನೀರಿನ ಕೊರತೆ/ ಬೇಡಿಕೆ ಆಧಾರದ ಮೇಲೆ ಮುಂದೆ ಕೈಗೊಳ್ಳಬಹುದಾದ ಯೋಜನೆಗಳ ಬಗ್ಗೆ ಚಿಂತನೆ ನಡೆಸಲು ಅಧ್ಯಯನ ಪ್ರಯೋಜನವಾಗಲಿದೆ ಎಂದು ಮಾಹಿತಿ ನೀಡಿದರು.

      ನರೇಗಾ ಯೋಜನೆಯಡಿ ಕೈಗೊಂಡಿರುವ ಎಲ್ಲಾ ನೀರು ಸಂರಕ್ಷಣಾ ಕಾಮಗಾರಿಗಳು ಸದ್ಬಳಕೆಯಾಗುತ್ತಿದೆ. ನೀರನ್ನು ಮಿತವಾಗಿ ಬಳಸಿ ಸದ್ಭಳಕೆ ಮಾಡಿ ಸಂರಕ್ಷಿಸುವುದರಿಂದ ಜನ-ಜಾನುವಾರು, ಮರ-ಗಿಡ, ಪಕ್ಷಿ ಸಂಕುಲ ಸೇರಿ ಸಕಲ ಜೀವರಾಶಿಗಳಿಗೆ ಉಪಯೋಗವಾಗಲಿದೆ ಎಂದು ತಿಳಿಸಿದರು.

      ಜಲಶಕ್ತಿ ಅಧ್ಯಯನ ತಂಡದ ಬಿ.ಪಿ.ಬಿಮಲ್, ಕೆ.ಎ. ನಾಯ್ಡು, ದೊಡ್ಡೇರಿ ಗ್ರಾಮಪಂಚಾಯತಿ ಪಿಡಿಓ ಶಿಲ್ಪ, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು. ನಂತರ ತಂಡವು ಮಧುಗಿರಿ ಪುರಸಭೆ ವ್ಯಾಪ್ತಿಯಲ್ಲಿ ಇಂದಿರಾಕ್ಯಾಂಟೀನ್‍ನಲ್ಲಿ ಅಳವಡಿಸಲಾಗಿರುವ ಮಳೆ ನೀರು ಕೊಯ್ಲು ಹಾಗೂ ಕೊರಟಗೆರೆ ತಾಲ್ಲೂಕು ವಡ್ಡಗೆರೆ ಮತ್ತಿತರ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ನೀರು ಸಂರಕ್ಷಣಾ ಕಾರ್ಯಗಳನ್ನು ವೀಕ್ಷಿಸಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap