ಹಾವೇರಿ
ಮುಂಗಾರು ಹಂಗಾಮಿನ ಬೆಳೆ ಮಾಹಿತಿ ಹಾಗೂ ಕೃಷಿ ತಾಂತ್ರಿಕತೆ ಕುರಿತಂತೆ ಜಿಲ್ಲೆಯ ರೈತರಿಗೆ ಮಾಹಿತಿ ನೀಡಲು ಕೃಷಿ ಇಲಾಖೆ ಆಯೋಜಿಸಿರುವ ಮುಂಗಾರು ಸಮಗ್ರ ಕೃಷಿ ಅಭಿಯಾನ ಜಾಗೃತಿ ಪ್ರಚಾರ ವಾಹನಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಚಾಲನೆ ನೀಡಿದರು.
ಇಂದಿನಿಂದ ಮೂರು ದಿನಗಳ ಕಾಲ “ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ”ಎಂಬ ಶೀರ್ಷಿಕೆಯಡಿ ಜಿಲ್ಲೆಯ ಎಲ್ಲ ಗ್ರಾಮಗಳಿಗೂ ಭೇಟಿ ನೀಡಿ ಕೃಷಿ ಮುಂಗಾರು ಬಿತ್ತನೆ, ಬೀಜದ ಸಮಗ್ರ ನಿರ್ವಹಣೆ, ಬೆಳಗಳ ಸಮಗ್ರ ಕೀಟದ ನಿರ್ವಹಣೆ, ನೀರು ನಿರ್ವಹಣೆ, ಬೆಳೆ ನಿರ್ವಹಣೆ ಹಾಗೂ ವಿವಿಧ ಕೃಷಿ ಯೋಜನೆಗಳ ಕುರಿತಂತೆ ಗ್ರಾಮಗಳಿಗೆ ತೆರಳಿ ವಿಡಿಯೋ ಪ್ರದರ್ಶನ, ಕೃಷಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಹಾಗೂ ವಿವಿಧ ಕೃಷಿ ಯೋಜನೆಗಳ ಕರಪತ್ರಗಳನ್ನು ರೈತರ ಮನೆ ಬಾಗಿಲೆಗೆ ತಲುಪಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಮೊದಲೆರಡು ದಿನ ಪ್ರಚಾರ, ಕೊನೆಯ ದಿನ ಅಲ್ಲಲ್ಲಿ ವೇದಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರೈತರಿಗೆ ವಿಶೇಷ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಈ ಉದ್ದೇಶದಿಂದ ಪ್ರತಿ ತಾಲೂಕಿಗೆ ಒಂದಂತೆ ವಿಶೇಷ ವಿನ್ಯಾಸಗೊಳಿಸಿದ ವಾಹನವನ್ನು ಸಿದ್ಧಪಡಿಸಲಾಗಿದೆ.
ಗ್ರಾಮಗಳಿಗೆ ಸಂಚಾರ ಮಾಡುವ ವಾಹನಗಳು ಹಳ್ಳಿ ಹಳ್ಳಿಗಳಿಗೂ ಕೃಷಿ ಇಲಾಖೆ ಯೋಜನೆಗಳಾದ ಕೃಷಿ ಭಾಗ್ಯ ಯೋಜನೆ, ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆ, ಕೃಷಿ ಅಭಿಯಾನ ಯೋಜನೆ, ಕೃಷಿ ಯಂತ್ರಧಾರೆ ಯೋಜನೆ, ಪ್ರಮಾಣಿತ ಗುಣಮಟ್ಟದ ಬಿತ್ತನೆ ಬೀಜ, ಕೃಷಿ ಯಾಂತ್ರೀಕರಣ ಯೋಜನೆ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ರಾಷ್ಟ್ರೀಯ ಆಹಾರ ಭದ್ರತೆ ಯೋಜನೆ, ಪ್ರದಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಪರಂಪರಾಗತ ಕೃಷಿ ವಿಕಾಸ ಯೋಜನೆ, ಮಣ್ಣು ಆರೋಗ್ಯ ಅಭಿಯಾನ, ಸಾವಯವ ಭಾಗ್ಯ, ಕೃಷಿ ಉತ್ಪನ್ನಗಳ ಸಂಸ್ಕರಣೆ, ಆತ್ಮಾ, ಕೃಷಿ ಉತ್ಪನ್ನಗಳ ಯೋಜನೆ ಮಾಹಿತಿ ಯನ್ನು ತಲುಪಿಸಲಿವೆ.
ಜಿಲ್ಲೆಯ ರಾಣೇಬೆನ್ನೂರು, ರಟ್ಟೀಹಳ್ಳಿ, ಹಿರೇಕೆರೂರು, ಬ್ಯಾಡಗಿ, ಹಾನಗಲ್, ಶಿಗ್ಗಾಂವ, ಸವಣೂರ ಹಾಗೂ ಹಾವೇರಿ ತಾಲೂಕಿಗೆ ಪ್ರತ್ಯೇಕ ವಾಹನಗಳನ್ನು ವಿನ್ಯಾಸಗೊಳಿಸಿ ಜಾಗೃತಿ ಮೂಡಿಸಲು ಸಜ್ಜಾಗಿದೆ. ಇದರೊಂದಿಗೆ ಕೃಷಿ ಅಧಿಕಾರಿಗಳು ತೆರಳಿ ರೈತರಿಗೆ ಮಾಹಿತಿ ನೀಡುವ ಕೆಲಸ ಮಾಡಲಿವೆ. ಇದೇ ಸಂದರ್ಭದಲ್ಲಿ ವಿವಿಧ ಯೋಜನೆಗಳ ಕರಪತ್ರಗಳನ್ನು ಬಿಡುಗೊಳಿಸಲಾಯಿತು.ಕಾರ್ಯಕ್ರಮದಲ್ಲಿ ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಕೆ.ಲೀಲಾವತಿ , ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್ ಹಾಗೂ ಇತರ ಕೃಷಿ ಅಧಿಕಾರಿಗಳು ಭಾಗವಹಿಸಿದ್ದರು.