ನಗರಸಭೆ ಸಾಮಾನ್ಯ ಸಭೆ

ಹರಿಹರ

      ನಗರದಲ್ಲಿ ನಡೆದಿರುವ ಯುಜಿಡಿ ಕೆಲಸವೆಲ್ಲಾ ಬೋಗಸ್ ಆಗಿದೆ, ಸಮಪರ್ಕವಾಗಿ ಕೆಲಸ ಆಗಿಲ್ಲ ಕೆಎಂಆರ್‍ಪಿ, ಕೆಐಯುಡಿಎಫ್‍ಸಿ ಗುತ್ತಿಗೆದಾರರಿಗೆ ಬಿಲ್ಲು ನೀಡಬೇಡಿರಿ…

      ನಗರಸಭೆ ಸಭಾಂಗಣದಲ್ಲಿ ನಗರಸಭಾಧ್ಯಕ್ಷೆ ಸುಜಾತಾ ರೇವಣಸಿದ್ದಪ್ಪ ಅವರ ಅಧ್ಯಕ್ಷಯತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಹತ್ತಾರು ಸದಸ್ಯರು ಪೌರಾಯುಕ್ತೆ ಎಸ್.ಲಕ್ಷ್ಮಿಯವರಿಗೆ ಹೀಗೆ ತಾಕೀತು ಮಾಡಿದರು.

      ಹಿರಿಯ ಸದಸ್ಯ ಸೈಯದ್ ಏಜಾಜ್ ಮಾತನಾಡಿ, ಇಡೀ ನಗರದಲ್ಲಿ ಪೈಪ್ ಅಳವಡಿಕೆ ಕೆಲಸ ಆಗಿದೆ ಎಂದು ವರದಿ ತಯಾರಿಸಲಾಗಿದೆ. ನೀವೂ ಅದಕ್ಕೆ ಅನುಮೋದನೆ ನೀಡುತ್ತಿದ್ದೀರಿ. ಇವರು ಬಿಲ್ ಪಡೆದು ಪರಾರಿಯಾಗುತ್ತಾರೆ. ಆಮೇಲೆ ನಾವು ಯಾರಿಂದ ಕೆಲಸ ಮಾಡಿಸಿಕೊಳ್ಳಬೇಕು.

      ನನ್ನ ಹಾಗೂ ಅಕ್ಕಪಕ್ಕದ ವಾರ್ಡ್‍ಗಳಲ್ಲೆ ಇನ್ನೂ ಚೆಂಬರ್‍ಗಳ ನಿರ್ಮಾಣವಾಗಿಲ್ಲ. ಚೆಂಬರ್‍ಗಳ ನಿರ್ಮಾಣ ಬಾಕಿ ಇರುವಾಗ ಪೈಪ್ ಅಳವಡಿಕೆ ಕಾರ್ಯ ಶೇ.100ರಷ್ಟು ಆಗಿದೆ ಎಂದು ಹೇಗೆ ವರದಿ ಸಿದ್ಧಗೊಳಿಸಲಾಯಿತು. ಉಸ್ತುವಾರಿ ಮಾಡುವ ಸಂಸ್ಥೆಯವರು, ನಗರಸಭೆ ಅಧಿಕಾರಿಗಳು ಏನು ಪರಿಶೀಲನೆ ಮಾಡುತ್ತಿದ್ದಾರೆ.

       ಜನರು ತೆರಿಗೆ ಮೂಲಕ ಪಾವತಿಸಿದ ಕೋಟ್ಯಾಂತರ ರೂ. ಅನುದಾನವು ನಮ್ಮ ಕಣ್ಣ ಮುಂದೆಯೆ ದುರುಪಯೋಗವಾಗುತ್ತಿದೆ. ಒಟ್ಟಾರೆ ಈ ಕಾಮಗಾರಿಯೆ ಬೋಗಸ್ ಆಗಿದೆ. ಈ ಬಗ್ಗೆ ಮಾತನಾಡೋಣ ಎಂದರೆ ಕೆಎಂಆರ್‍ಪಿ, ಕೆಐಯುಡಿಎಫ್‍ಸಿ ಹಿರಿಯ ಅಧಿಕಾರಿಗಳು ಕೈಗೆ ಸಿಗುವುದಿಲ್ಲ ಎಂದು ಚಾಟಿ ಬೀಸಿದರು.

      ಇವರ ಮಾತಿಗೆ ಸದಸ್ಯರಾದ ಅಲ್ತಾಫ್, ಬಿ.ರೇವಣಸಿದ್ದಪ್ಪ, ಹಬೀಬ್‍ಉಲ್ಲಾ, ಎ.ವಾಮನಮೂರ್ತಿ, ಪ್ರತಿಭಾ ಪಾಟೀಲ್ ಬೆಂಬಲ ಸೂಚಿಸಿ, ಪೈಪ್ ಅಳವಡಿಕೆ ಮಾಡಿದ ರಸ್ತೆಗಳನ್ನು ಸುಸ್ಥಿತಿಗೆ ತಂದಿಲ್ಲ. ಜಲಸಿರಿಗಾಗಿ ಮತ್ತೆ ರಸ್ತೆ ಬೇಕಾಬಿಟ್ಟಿಯಾಗಿ ಅಗೆಯಲಾಗುತ್ತಿದೆ ಎಂದು ಪೌರಾಯುಕ್ತರು ಹಾಗೂ ಯುಜಿಡಿ ಇಂಜಿನಿಯರ್ ತಮ್ಮಣ್ಣೆಗೌಡರಿಗೆ ಚಾಟಿ ಬೀಸಿದರು.

      ಕೊನೆಗೆ ಹಿರಿಯ ಸದಸ್ಯ ಶಂಕರ್ ಖಟಾವ್‍ಕರ್ ಮಧ್ಯ ಪ್ರವೇಶಿಸಿ, ಯುಜಿಡಿ ಕೊರತೆಗಳ ಬಗ್ಗೆ ಚರ್ಚಿಸಲು ಪ್ರತ್ಯೇಕ ಸಭೆ ಕರೆಯೋಣ ಎಂದಾಗ ಸಭೆ ಒಪ್ಪಿಗೆ ಸೂಚಿಸಿತು.

      ಜಲಸಿರಿ ಅಯೋಮಯ: 24 ಗಂಟೆ ನೀರು ಒದಗಿಸುವ ಜಲಸಿರಿ ಕಾಮಗಾರಿಯೂ ಕಳಪೆಯಾಗಿದೆ. ನದಿ ಒಣಗಿದಾಗ ನೀರೆಲ್ಲಿಂದ ಕೊಡುತ್ತೀರಿ ಎಂಬ ಪ್ರಶ್ನೆಗೆ ಜಲಸಿರಿ, ನಗರಸಭೆ ಅಧಿಕಾರಿಗಳ ಬಳಿ ಉತ್ತರವಿಲ್ಲ. ಮೊದಲು ನದಿಗೆ ಬ್ಯಾರೇಜ್ ನಿರ್ಮಿಸಿ ನಂತರ ಯೋಜನೆ ಕಾಮಗಾರಿ ಕೈಗೊಳ್ಳಿ ಎಂದು ಸೈಯದ್ ಏಜಾಜ್ ಹೇಳಿದ್ದಕ್ಕೆ ಸಭೆ ಒಪ್ಪಿಗೆ ಸೂಚಿಸಿತು.

       ದೂಡಾದಿಂದ ನಿರ್ಲಕ್ಷ್ಯ: ಹಿರಿಯ ಸದಸ್ಯ ಬಿ.ಮೊಹ್ಮದ್ ಸಿಗ್ಬತ್‍ಉಲ್ಲಾ ಮಾತನಾಡಿ, ದೂಡಾದವರು ಹರಿಹರದವರನ್ನು ಕೇವಲ ವಿವಿಧ ಶುಲ್ಕ ಪಾವತಿಗೆ ಮಾತ್ರ ಉಪಯೋಗಿಸಿಕೊಳ್ಳುತ್ತಿದ್ದಾರೆ, ನಗರದಲ್ಲಿ ಒಂದೂ ಅಭಿವೃದ್ಧಿ ಕಾಮಗಾರಿ ಮಾಡಿಸಿಲ್ಲ. ದೊಡ್ಡಬಾತಿಯಂತಹ ಗ್ರಾಮದಲ್ಲೆ ಹಳೆ ಪಿ.ಬಿ.ರಸ್ತೆಗೆ ದೀಪಗಳನ್ನು ಅಳವಡಿಸಲಾಗಿದೆ.

        ಹರಿಹರದವರು ದೂಡಾಕ್ಕೆ ಏನು ದ್ರೋಹ ಮಾಡಿದ್ದಾರೆ. ಅವರೇಕೆ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಒಂದು ಬಿಲ್ಡಿಂಗ್ ಲೈಸೆನ್ಸ್, ಏಕ ನಿವೇಶನ ಯಾವುದೆ ಕೆಲಸಕ್ಕೆ ಹೋದರೂ ತಕರಾರು, ಅಸಹಕಾರ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಹಾಜರಿದ್ದ ದೂಡಾ ಇಂಜಿನಿಯರ್ ನಾಗರಾಜ್ ಮಾತನಾಡಿ, ನಿಯಮಾವಳಿಗಳನ್ನು ಪಾಲನೆ ಮಾಡಬೇಕಿದೆ. ಇಲ್ಲಿ ಅಭಿವೃದ್ಧಿ ಕೆಲಸ ಮಾಡಬಾರದೆಂದು ಇಲ್ಲ. ಸಭೆಯಲ್ಲಿ ವಿಷಯ ಇಟ್ಟು ಅನುಮೋದನೆ ಪಡೆದು ಪ್ರಸ್ತಾವನೆ ಸಲ್ಲಿಸಿದರೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸಹಾಯಕವಾಗುತ್ತದೆ ಎಂದರು.

       ಹಿರಿಯ ಸದಸ್ಯ ಡಿ.ಜಿ.ರಘುನಾಥ್ ಮಾತನಾಡಿ, ಮಂದಿರ, ಮಸೀದಿ, ಚರ್ಚ್, ಮಠಗಳಂತೆ ಚಾರಿಟೇಬಲ್ ಟ್ರಸ್ಟ್‍ಗಳಡಿ ನಡೆಯುತ್ತಿರುವ ಶಿಕ್ಷಣ ಸಂಸ್ಥೆಗಳಿಗೂ ಕಂದಾಯ ರಿಯಾಯಿತಿ ನೀಡಿರಿ ಎಂದು ಆಗ್ರಹಿಸಿದರು. ಈ ಕುರಿತು ಪರಿಶೀಲನೆ ನಡೆಸಲಾಗುವುದೆಂದು ಪೌರಾಯುಕ್ತರು ಭರವಸೆ ನೀಡಿದರು.

       ಸಭೆಯಲಿ ಶಾಸಕ ಎಸ್.ರಾಮಪ್ಪ, ಉಪಾಧ್ಯಕ್ಷೆ ಅಂಜಿನಮ್ಮ ಬೇಡರ್, ಸದಸ್ಯರಾದ ಕೆ.ಮರಿದೇವ, ಎಸ್.ಎಂ.ವಸಂತ್, ನಾಗರಾಜ್ ರೋಖಡೆ, ನಾಗರಾಜ್ ಮೆಹರ್ವಾಡೆ, ವಿರುಪಾಕ್ಷಪ್ಪ, ನಿಂಬಕ್ಕ ಚಂದಾಪೂರ್, ಮಂಜುಳಾ ಅಜೇಯ, ಡಿ.ಉಜ್ಜೇಶ್, ಸೈಯದ್ ಜಹೀರ್ ಅಲ್ತಮಶ್ ಇತರರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link