ಹೊಸ ಲೇಔಟ್: ಪಾಲಿಕೆ ದೃಢೀಕರಣ ಅಗತ್ಯ

ತುಮಕೂರು
    ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಹೊಸ ಲೇಔಟ್ ಸಿದ್ಧಗೊಂಡಾಗ ಅದಕ್ಕೆ ಪಾಲಿಕೆಯ ದೃಢೀಕರಣ ಪಡೆಯುವುದು ಅಗತ್ಯವೆಂದು ಪಾಲಿಕೆಯ ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿಯು ಇತ್ತೀಚೆಗೆ ನಿರ್ಣಯವೊಂದನ್ನು ಕೈಗೊಂಡಿದೆ.
     ಸಮಿತಿಯ ಹಿಂದಿನ ಅಧ್ಯಕ್ಷ ಲಕ್ಷ್ಮೀನರಸಿಂಹರಾಜು (3ನೇ ವಾರ್ಡ್- ಅರಳಿಮರದ ಪಾಳ್ಯ- ಜೆಡಿಎಸ್) ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಏರ್ಪಟ್ಟಿದ್ದ ಸಮಿತಿ ಸಭೆಯಲ್ಲಿ ಈ ವಿಷಯವಾಗಿ (ವಿಷಯ ಸಂಖ್ಯೆ:16) ಸುದೀರ್ಘವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ.
    ಪಾಲಿಕೆ ವ್ಯಾಪ್ತಿಯ ನಗರದ ಹೊರಗಿನ ಬಡಾವಣೆಗಳಲ್ಲಿ ಹೊಸ-ಹೊಸ ಲೇಔಟ್‍ಗಳಾಗುತ್ತಿವೆ. ನಿಯಮಾನುಸಾರ ಲೇಔಟ್ ಅಂತಿಮಗೊಂಡ ನಂತರ ಮುಂದಿನ 5 ವರ್ಷಗಳ ಕಾಲ ಆ ಲೇಔಟ್ ಮಾಲೀಕರೇ ಅಲ್ಲಿ ಮೂಲಭೂತ ಸೌಲಭ್ಯಗಳನ್ನು ನಿರ್ವಹಿಸಬೇಕು. ಆದರೆ ಅನೇಕ ಲೇಔಟ್‍ಗಳಲ್ಲಿ ಈ ನಿಯಮವನ್ನು ಪಾಲಿಸುತ್ತಿಲ್ಲ. ಹೀಗಾಗಿ ಲೇಔಟ್‍ನಲ್ಲಿ ಒಂದೆರಡು ಮನೆ ನಿರ್ಮಾಣಗೊಳ್ಳುತ್ತಿದ್ದಂತೆಯೇ ನೀರು, ರಸ್ತೆ, ಬೀದಿದೀಪ, ಚರಂಡಿ ಮೊದಲಾದ ಮೂಲಸೌಕರ್ಯಗಳ ಬಗ್ಗೆ ತಕ್ಷಣವೇ ಪಾಲಿಕೆಯ ಸದಸ್ಯರ ಮೇಲೆ ಒತ್ತಡ ಹಾಕುವ ಸಂದರ್ಭಗಳು ಹೆಚ್ಚುತ್ತಿವೆ. ಇದು ಪಾಲಿಕೆಗೆ ಹಾಗೂ ಪಾಲಿಕೆ ಸದಸ್ಯರಿಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ ಎಂದು ಸಭೆಯಲ್ಲಿ ಲಕ್ಷ್ಮೀನರಸಿಂಹರಾಜು ಮತ್ತು ಇತರೆ ಸದಸ್ಯರುಗಳು ಚರ್ಚೆ ಮಾಡಿದರು. 
     ಲೇಔಟ್‍ಗಳನ್ನು ಮಹಾನಗರ ಪಾಲಿಕೆಯ ಸುಪರ್ದಿಗೆ ನೀಡುವಾಗ ಮೊದಲಿಗೆ ಸಂಬಂಧಿಸಿದ ಅಧಿಕಾರಿಗಳು, ಆಯಾ ವಾರ್ಡ್ ಕಾರ್ಪೊರೇಟರ್ ಮತ್ತು ಪಾಲಿಕೆಯ ಮೇಯರ್ ಅವರಿಂದ ಗುಣಮಟ್ಟದ ದೃಢೀಕರಣ ಪಡೆಯುವುದು ಕಡ್ಡಾಯವಾಗಬೇಕೆಂದು ಸಭೆಯಲ್ಲಿ ಎಲ್ಲ ಸದಸ್ಯರುಗಳು ಅಭಿಪ್ರಾಯಪಟ್ಟ ಹಿನ್ನೆಲೆಯಲ್ಲಿ ಅದರಂತೆಯೇ ನಿರ್ಣಯ ಕೈಗೊಳ್ಳಲಾಗಿದೆ.
    ಲೇಔಟ್‍ಗಳಿಗೆ ಸಂಬಂಧಿಸಿದಂತೆ ನಿರ್ವಹಣಾ ಶುಲ್ಕವನ್ನು 3 ವರ್ಷಗಳ ಅವಧಿಗೆ ಪಾಲಿಕೆಗೆ ಠೇವಣಿಯಾಗಿ ಪಾವತಿಸಬೇಕು. ನಿಗದಿತ ಕಾಲಾವಧಿಯಲ್ಲಿ ಮೂಲ ಸೌಕರ್ಯ ಒದಗಿಸದಿದ್ದಲ್ಲಿ ಸದರಿ ಠೇವಣಿಯ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದೂ ತೀರ್ಮಾನಿಸಲಾಗಿದೆ.
ಸರ್ಕಾರಿ ಶಾಲೆಗೆ ಜಾಗ
    ತುಮಕೂರು ನಗರದ 32 ನೇ ವಾರ್ಡ್ ವ್ಯಾಪ್ತಿಯ ಬಡ್ಡಿಹಳ್ಳಿಯಲ್ಲಿ ಇರುವ ಗ್ರಾಮಠಾಣಾ ಜಾಗವನ್ನು ಬಡ್ಡಿಹಳ್ಳಿಯ ಸರ್ಕಾರಿ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಹಸ್ತಾಂತರಿಸಲು ಸಭೆಯಲ್ಲಿ ಸಮ್ಮತಿ ನೀಡಲಾಗಿದೆ.
ಪಾಲಿಕೆ ಸ್ವತ್ತು ವಶಕ್ಕೆ
    ಜೆಡಿಎಸ್ ಸದಸ್ಯ ಧರಣೇಂದ್ರ ಕುಮಾರ್ (28 ನೇ ವಾರ್ಡ್- ಸದಾಶಿವನಗರ) ಮಾತನಾಡಿ, ತಮ್ಮ ವಾರ್ಡ್ ವ್ಯಾಪ್ತಿಯ ಸ.ನಂ. 87 ರ ಪಾಲಿಕೆಗೆ ಸೇರಿದ ಜಾಗದ ಬಗ್ಗೆ ಮಾಹಿತಿ ನೀಡುವಂತೆ ಕೋರಿದರು. ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು, ಅಂತಿಮವಾಗಿ ಸದರಿ ಜಾಗವು ಪಾಲಿಕೆಯ ಸ್ವತ್ತಾಗಿರುವುದರಿಂದ ಅದನ್ನು ಪಾಲಿಕೆಯ ವಶಕ್ಕೆ ತೆಗೆದುಕೊಳ್ಳಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link