ಕಲ್ಲಿನಿಂದ ಜಜ್ಜಿ ಕೊಲೆ

ಬೆಂಗಳೂರು

        ವ್ಯಕ್ತಿಯೊಬ್ಬರ ತಲೆಯನ್ನು ಕಲ್ಲಿನಿಂದ ಜಜ್ಜಿ ಗುರುತು ಸಿಗದಂತೆ ಬರ್ಬರವಾಗಿ ಕೊಲೆ ಮಾಡಿರುವ ದುಷ್ಕರ್ಮಿಗಳು ಪರಾರಿಯಾಗಿರುವ ದುರ್ಘಟನೆ ನಗರದ ಹೊರವಲಯದ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

         ಕೊಲೆಯಾಗಿರುವ ವ್ಯಕ್ತಿಯ ಹೆಸರು ವಿಳಾಸ ಸದ್ಯಕ್ಕೆ ತಿಳಿದುಬಂದಿಲ್ಲ, ಸುಮಾರು 35 ವರ್ಷದ ವ್ಯಕ್ತಿಯ ಗುರುತು ಸಿಗದಂತೆ ಮುಖವನ್ನು ಜಜ್ಜಿ ಕೊಲೆ ಮಾಡಿ ಯಡವನಹಳ್ಳಿಯ ಸರ್ಕಾರಿ ಶಾಲೆಯ ಆವರಣದ ಹುಲ್ಲಿನ ಮಧ್ಯೆ ಮೃತದೇಹ ಎಸೆದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

         ಶನಿವಾರ ಮುಂಜಾನೆ ವಾಯುವಿಹಾರಕ್ಕೆ ಹೋಗಿದ್ದವರು ಮೃತದೇಹವು ಬಿದ್ದಿರುವುದನ್ನು ಕಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ತಲೆಯಲ್ಲಿ ರಕ್ತಗಾಯಗಳಿಂದ ಕೂಡಿದ್ದು ಸಹಚರರೊಡನೆ ಜಗಳ ತೆಗೆದು ಕೊಲೆಯಾಗಿರಬಹುದು ಎಂಬ ಶಂಕೆ ಸ್ಥಳ ಪರಿಶೀಲನೆಯ ವೇಳೆ ಮೇಲ್ನೋಟಕ್ಕೆ ತಿಳಿದು ಬಂದಿದೆ. ತಡರಾತ್ರಿಯಲ್ಲಿ ಜಗಳ ಆದ ಜಾಗದಲ್ಲಿ ಏರುಧ್ವನಿ ಕೇಳಿಸುತ್ತಿತ್ತು ಎಂದು ಹತ್ತಿರದ ಮನೆಯವರು ತಿಳಿಸಿದ್ದಾರೆ.

        ಯಾರೋ ಕುಡಿದ ಅಮಲಿನಲ್ಲಿ ಕೂಗಾಡುತ್ತಿದ್ದಾರೆಂದು ಸುಮ್ಮನಾಗಿದ್ದೆವು ಎಂದು ಪೊಲೀಸರಿಗೆ ಮಾಹಿತಿಯನ್ನು ಗ್ರಾಮಸ್ಥರು ತಿಳಿಸಿದ್ದಾರೆ. ಕೊಲೆಯಾದ ವ್ಯಕ್ತಿಯ ಮೇಲ್ನೋಟದ ಚಹರೆ ಸುತ್ತಲ ಗ್ರಾಮಸ್ಥರಿಗೆ ಹೊಸದಾಗಿ ಕಂಡಿದ್ದರಿಂದ ಪರಿಚಯ ಸಿಗದೆ ಪೊಲೀಸರು ವ್ಯಕ್ತಿಯ ಫೋಟೋದೊಂದಿಗೆ ಹುಡುಕಾಟ ಆರಂಭಿಸಿದ್ದಾರೆ. ಸ್ಥಳಕ್ಕೆ ಧಾವಿಸಿರುವ ಅತ್ತಿಬೆಲೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮತ್ತೊಂದು ಕೃತ್ಯ ಪತ್ತೆ

         ಜೈಲಿನಲ್ಲಿದ್ದ ಕುಖ್ಯಾತ ಓಜಿಕುಪ್ಪಂ ಗ್ಯಾಂಗ್‍ನ ಐವರು ಆರೋಪಿಗಳನ್ನು ವಶಕ್ಕೆ ಪಡೆದು ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಗಮನ ಬೇರೆಡೆ ಸೆಳೆದು 1 ಲಕ್ಷ ನಗದು ದೋಚಿದ್ದ ಪ್ರಕರಣವನ್ನು ಪಶ್ಚಿಮ ವಿಭಾಗದ ಪೊಲೀಸರು ಪತ್ತೆಹಚ್ಚಿದ್ದಾರೆ.

        ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕಪ್ಪರಾಳತಿಪ್ಪದ ಪ್ರವೀಣ್ (27), ರಮೇಶ್ ಮೋಜಸ್ ಗೋಕುಲ (34), ಕಾರ್ತಿಕ್ ಅಲಿಯಾಸ್ ಕಾರ್ತಿ (29), ಚಿತ್ತೂರು ಜಿಲ್ಲೆಯ ಅಂಕಯ್ಯ (29) ಹಾಗೂ ಚೆನ್ನೈ ನೆಹರೂ ನಗರದ ರಾಜು ಅಲಿಯಾಸ್ ಜೀವನ್ (21) ವಶಕ್ಕೆ ತೆಗೆದುಕೊಂಡು 1 ಲಕ್ಷ ನಗದು ವಶಪಡಿಸಿಕೊಂಡು ಚಂದ್ರಾಲೇಔಟ್‍ನಲ್ಲಿ ನಡೆದಿದ್ದ ಗಮನ ಬೇರೆಡೆ ಸೆಳೆದು ಕಳವು ಮಾಡಿದ್ದ ಪ್ರಕರಣವನ್ನು ಬೇಧಿಸಲಾಗಿದೆ

        ಕೋಣನಕುಂಟೆ ಠಾಣೆಯಲ್ಲಿ ಗಮನ ಬೇರೆಡೆ ಸೆಳೆದು ಕಳವು ಮಾಡುತ್ತಿದ್ದ ಓಜಿಕುಪ್ಪಂನ ಗ್ಯಾಂಗ್‍ನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದು, ಗ್ಯಾಂಗ್‍ನ ಆರೋಪಿಗಳ ಫೋಟೊ ನೋಡಿದ ದೂರುದಾರರು ನೀಡಿದ ಮಾಹಿತಿಯಾಧರಿಸಿ ಆರೋಪಿಗಳನ್ನು ಪೊಲೀಸ್ ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ರವಿಚೆನ್ನಣ್ಣನವರ್ ತಿಳಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link