ಬೆಂಗಳೂರು
ವಾಹನ ನಿಲುಗಡೆ ಪ್ರದೇಶಗಳಲ್ಲಿ ಮನೆಗಳ ಮುಂಭಾಗ ನಿಲ್ಲಿಸುವ ಬೈಕ್‍ಗಳನ್ನು ನಕಲಿ ಕೀ ಬಳಸಿ ಹ್ಯಾಂಡಲ್ ಮುರಿದು ಕಳ್ಳತನ ಮಾಡು ತ್ತಿದ್ದ ಕೃತ್ಯಗಳನ್ನು ಕೇಳಿದ್ದೇವೆ ಆದರೆ ಐನಾತಿ ಖದೀಮನೊಬ್ಬ ಓಎಲ್‍ಎಕ್ಸ್‍ನಲ್ಲಿ ಬೈಕ್‍ಗಳ ಮಾರಾಟದ ಜಾಹೀರಾತಿನ ಮಾಲೀಕರನ್ನು ಸಂಪರ್ಕಿಸಿ ಬೈಕ್‍ನ್ನು ಪರೀಕ್ಷಾರ್ಥ (ಟೆಸ್ಟ್ ಡ್ರೈವ್) ಚಾಲನೆ ಮಾಡುವುದಾಗಿ ಹೇಳಿ ದೋಚಿಕೊಂಡು ಪರಾರಿಯಾಗಿ ಕೊನೆಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರ ಅತಿಥಿಯಾಗಿದ್ದಾನೆ.
ಪ್ರತಿಬಾರಿ ಕಳವು ಮಾಡುವಾಗ ವಾಹನ ಮಾಲೀಕರನ್ನು ಸಂಪರ್ಕಿಸಲು ಹಲವು ಸಿಮ್‍ಗಳನ್ನು ಖರೀದಿಸಿ ಅವುಗಳಲ್ಲಿ 1 ಸಿಮ್‍ನ್ನು ಮಾತ್ರ ಒಬ್ಬರಿಗೆ ಉಪಯೋಗಿಸಿ ಅದನ್ನು ಬೇರೆ ಯಾರಿಗೂ ಬಳಸದೆ ಬಿಸಾಡಿ ಪೊಲೀಸರ ಕಣ್ತಪ್ಪಿಸಿ ಮತ್ತೊಂದು ಬೈಕ್ ಕಳವಿಗೆ ಸಂಚು ರೂಪಿಸುತ್ತಿದ ಸುಂಕದಕಟ್ಟೆಯ ಮುನೇಶ್ವರ ಲೇಔಟ್‍ನ ಮಂಜುನಾಥ ಹೆಗಡೆ (20) ಬಂಧಿತ ಆರೋಪಿಯಾಗಿದ್ದಾನೆ.
ಬಂಧಿತನಿಂದ 12 ಲಕ್ಷ ಮೌಲ್ಯದ 6 ದುಬಾರಿ ಕೆಟಿಎಂ, ರಾಯಲ್ ಎನ್‍ಫೀಲ್ಡ್ ಬೈಕ್‍ಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಡಾ. ಬೋರಲಿಂಗಯ್ಯ ತಿಳಿಸಿದ್ದಾರೆ.
ಕಳವು ಮಾಡಿದ ಬೈಕ್‍ಗಳನ್ನು ಬೇರೆಡೆ ಮಾರಾಟ ಮಾಡಿ ಮೋಜಿನ ಜೀವನ ನಡೆಸುತ್ತಿದ್ದ. ಎಲೆಕ್ಟ್ರಾನಿಕ್ ಸಿಟಿಯ ಯುವಕರೊಬ್ಬರು ಒಎಲ್‍ಎಕ್ಸ್‍ನಲ್ಲಿ ತಮ್ಮ ಬೈಕ್‍ನ್ನು ಮಾರಾಟ ಮಾಡುವುದಾಗಿ ಜಾಹೀರಾತು ನೀಡಿದ್ದರು. ಅದನ್ನು ನೋಡಿ ಆರೋಪಿಯು ಪರೀಕ್ಷಾರ್ಥ ಚಾಲನೆ ಮಾಡುವುದಾಗಿ ಹೇಳಿ ದೋಚಿಕೊಂಡು ಪರಾರಿಯಾಗಿದ್ದ.ಈ ಸಂಬಂಧ ನೀಡಿದ್ದ ದೂರು ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
