ಹತ್ಯೆಮಾಡಿ ಕಾರು ದೋಚಿದ ಆರೋಪಿಗಳ ಬಂಧನ..!!

ಬೆಂಗಳೂರು

     ಸಾಲ ಮಾಡಿ ಕಾರು ಖರೀದಿಸಿದ್ದ ಮಾಲೀಕ ಕಂ ಚಾಲಕನನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಸುಟ್ಟು ಹಾಕಿ ಇನೋವಾ ಕಾರು ದೋಚಿದ್ದ ಇಬ್ಬರು ಕುಖ್ಯಾತ ಸುಲಿಗೆಕೋರರ ಕಾಲಿಗೆ ಗುಂಡು ಹೊಡೆದು ನೆಲಮಂಗಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

     ಮಂಗಳವಾರ ಮುಂಜಾನೆ ಪೊಲೀಸರ ಗುಂಡೇಟು ತಗುಲಿ ಬಲಗಾಲಿಗೆ ಗಾಯಗೊಂಡಿರುವ ನೆಲಮಂಗಲದ ವಿನೋದ್ ಕುಮಾರ್ (26) ಹಾಗೂ ಬೊಮ್ಮಸಂದ್ರದ ಹೇಮಂತ್ ಸಾಗರ್ (23) ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

      ಬಂಧಿಸಲು ಬೆನ್ನಟ್ಟಿಹೋದ ನೆಲಮಂಗಲ ನಗರ ಠಾಣೆ ಸಬ್‍ಇನ್ಸ್‍ಪೆಕ್ಟರ್ ನವೀನ್ ಕುಮಾರ್‍ಗೆ ಬೆನ್ನಿಗೆ ಆರೋಪಿಗಳು ಡ್ಯಾಗರ್‍ನಿಂದ ಇರಿದಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಡಾ. ರಾಮ್ ನಿವಾಸ್ ಸೆಪಟ್ ಅವರು ತಿಳಿಸಿದ್ದಾರೆ.

     ಕಳೆದ ಭಾನುವಾರ ಖಾಸಗಿ ಕಂಪನಿಗೆ ಕಾರು ಬಿಟ್ಟಿದ್ದ ಹೆಬ್ಬಗೋಡಿಯ ಕಾರು ಚಾಲಕ ಕಂ ಮಾಲೀಕ ತುಮಕೂರು ಮೂಲದ ಕೆಂಪೇಗೌಡ (38) ಅವರ ಇನೋವಾ ಕಾರನ್ನು ಊಟಿಗೆ ಬುಕ್ ಮಾಡಿ ಕರೆಸಿಕೊಂಡಿದ್ದ ದುಷ್ಕರ್ಮಿಗಳು ಕಾರಿನಲ್ಲಿ ಹೋಗುವಾಗ ಮಾರ್ಗಮಧ್ಯೆ ನೆಲಮಂಗಲದ ಮಲ್ಲರಬಾಣವಾಡಿಯಲ್ಲಿ ಉಸಿರುಗಟ್ಟಿಸಿ ಪ್ರಜ್ಞೆ ತಪ್ಪಿದ ಅವರನ್ನು ಕೆಳಗೆ ನೂಕಿ ಕಾರಿನಲ್ಲಿದ್ದ ಪೆಟ್ರೋಲ್ ತೆಗೆದುಕೊಂಡು ಜೀವಂತವಾಗಿ ಸುಟ್ಟು ಪರಾರಿಯಾಗಿದ್ದರು.

 ನಸುಕಿನ ಕಾರ್ಯಾಚರಣೆ

      ಈ ಸಂಬಂಧ ನೆಲಮಂಗಲ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿದ್ದರು. ಆರೋಪಿಗಳು ಕಾರನ್ನು ಬಿಟ್ಟು, ಬೈಕ್‍ನಲ್ಲಿ ನೆಲಮಂಗಲ ಗ್ರಾಮಾಂತರ ಪ್ರದೇಶದಲ್ಲಿ ಇಂದು ನಸುಕಿನ 3ರ ವೇಳೆ ಹೋಗುತ್ತಿರುವ ಖಚಿತ ಮಾಹಿತಿ ನೆಲಮಂಗಲ ಪೊಲೀಸ್ ಇನ್ಸ್‍ಪೆಕ್ಟರ್ ಅನಿಲ್ ಕುಮಾರ್ ತಕ್ಷಣವೇ ಕಾರ್ಯಾಚರಣೆಗೆ ಇಳಿದರು.

      ಸಿಬ್ಬಂದಿಗಳ ಜೊತೆ ಬೈಕ್‍ನಲ್ಲಿ ಹೋಗುತ್ತಿದ್ದ ಆರೋಪಿಗಳನ್ನು ಅಡ್ಡಗಟ್ಟಿದಾಗ ಕೆಳಗಿಳಿದ ಹೇಮಂತ್ ಸಾಗರ್ ಬಂಧಿಸಲು ಬಂದ ಸಬ್‍ಇನ್ಸ್‍ಪೆಕ್ಟರ್ ನವೀನ್ ಕುಮಾರ್ ಅವರಿಗೆ ಚಾಕುವಿನಿಂದ ಇರಿದು ಓಡಿಹೋಗಿದ್ದಾನೆ. ಆತನ ಹಿಂದೆ ವಿನೋದ್ ಕುಮಾರ್ ಕೂಡ ತಪ್ಪಿಸಿಕೊಳ್ಳಲು ಓಡಿದ್ದು, ಅವರನ್ನು ಬೆನ್ನಟ್ಟಿದ ಅನಿಲ್ ಕುಮಾರ್ ಶರಣಾಗುವಂತೆ ಎಚ್ಚರಿಕೆ ನೀಡಿದ್ದಾರೆ.

ಗ್ಯಾಂಗ್ ಕಟ್ಟಿ ಸುಲಿಗೆ

      ಆದರೂ ಆರೋಪಿಗಳು ಚಾಕು ಹಿಡಿದು ಪೊಲೀಸರತ್ತ ನುಗ್ಗಿದ್ದರಿಂದ ಆತ್ಮರಕ್ಷಣೆಗಾಗಿ ಗಾಳಿಯಲ್ಲಿ ಮೂರು ಸೇರಿ ಐದು ಸುತ್ತು ಗುಂಡು ಹಾರಿಸಿದ್ದು, ಅದರಲ್ಲಿ ಮೂರು ಗಾಳಿಯಲ್ಲಿ ಹಾರಿದರೆ, ಇನ್ನೆರಡು ಇಬ್ಬರು ಆರೋಪಿಗಳ ಬಲಗಾಲಿಗೆ ತಗುಲಿ ಕುಸಿದುಬಿದ್ದಿದ್ದಾರೆ.

       ಕೂಡಲೇ ಅವರನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಧಿತ ಆರೋಪಿಗಳು ರಾಮನಗರ, ಮಂಡ್ಯ, ತಾವರೆಕೆರೆ, ಎಲೆಕ್ಟ್ರಾನಿಕ್ ಸಿಟಿ, ಟಿ. ನರಸಿಪುರ, ಬ್ಯಾಡರಹಳ್ಳಿ, ಬೊಮ್ಮಸಂದ್ರ, ಇನ್ನಿತರ ಕಡೆಗಳಲ್ಲಿ ಗ್ಯಾಂಗ್ ಕಟ್ಟಿಕೊಂಡು ಸುಲಿಗೆ, ವಾಹನ ಕಳವು, ಇನ್ನಿತರ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು.
ಆರೋಪಿಗಳು ಶೋಕಿ ಮಾಡಲು ಇನೋವಾ ಕಾರು ಬುಕ್ ಮಾಡಿ, ಸಾಲ ಮಾಡಿ ಕಾರು ಖರೀದಿಸಿದ್ದ ಕೆಂಪೇಗೌಡನನ್ನು ಕೊಲೆಗೈದು ಕಾರು ದೋಚಿ ಪರಾರಿಯಾಗಿದ್ದರು ಎಂದು ರಾಮ್ ನಿವಾಸ್ ಸಪೆಟ್ ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link