ಮುಸುಕಿದ ಮೋಡ : ವಿಪರೀತ ಗಾಳಿ

ತುಮಕೂರು:

     ಜೂನ್ 6 ರಿಂದ ರಾಜ್ಯಕ್ಕೆ ಮುಂಗಾರು ಪ್ರವೇಶವಾಗಲಿದೆ ಎಂದು ಹವಾಮಾನ ಇಲಾಖೆಯು ಮೇ ತಿಂಗಳಿನಲ್ಲಿ ವರದಿ ಮಾಡಿತ್ತು. ಜೂ.10 ಮುಗಿದರೂ ರಾಜ್ಯದಲ್ಲಿ ಮಳೆಯಾಗಿಲ್ಲ. ಬದಲಿಗೆ ಕಳೆದ ಎರಡು ಮೂರು ದಿನಗಳಿಂದ ಕಪ್ಪು ಮೋಡಗಳು ಆವರಿಸಿಕೊಳ್ಳುತ್ತಿದ್ದು, ವಿಪರೀತ ಗಾಳಿ ಬೀಸತೊಡಗಿದೆ.

      ಈ ಬಾರಿ ಮುಂಗಾರು ಉತ್ತಮವಾಗಿರಲಿದೆ. ಆದರೆ ತಡವಾಗಿ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿತ್ತು. ಜೂ.3 ರ ನಂತರ ಮಳೆಯಾಗಲಿದೆ ಎಂಬ ವರದಿ ಹಿನ್ನೆಲೆಯಲ್ಲಿ ರೈತಾಪಿ ಜನ ಆಸೆಯ ಕಣ್ಣುಗಳಿಂದಲೇ ನೋಡುತ್ತಾ ಬಂದಿದ್ದಾರೆ. ತುಮಕೂರು ಜಿಲ್ಲೆಯ ಕೆಲವು ಭಾಗಗಳಲ್ಲಿ ಸ್ವಲ್ಪ ಪ್ರಮಾಣದ ಮಳೆಯಾಗಿರುವುದಾದರೂ ಕೆರೆಕಟ್ಟೆಗಳಿಗೆ ನೀರು ತುಂಬುವಂತಹ ಮಳೆಯಾಗಿಲ್ಲ.

       ಜೂ.6 ರ ನಂತರ ಮುಂಗಾರು ರಾಜ್ಯಕ್ಕೆ ಪ್ರವೇಶಿಸಲಿದೆ ಎಂಬ ಹವಾಮಾನ ಇಲಾಖೆಯ ವರದಿಯನ್ನೇ ನಂಬಿಕೊಂಡು ಜನತೆ ಕಾಯುತ್ತಿದ್ದಾರೆ. ಹವಾಮಾನ ಇಲಾಖೆಯ ವರದಿಯಂತೆ ಮುಂಗಾರು ಮಾರುತ ಕೇರಳ ಪ್ರವೇಶಿಸಿದೆ. ಆದರೆ ರಾಜ್ಯದಲ್ಲಿ ಅಷ್ಟಾಗಿ ಮಳೆ ಕಾಣುತ್ತಿಲ್ಲ. ಅರಬ್ಬಿ ಸಮುದ್ರದ ಆಗ್ನೇಯ ಭಾಗದ ಲಕ್ಷ ದ್ವೀಪದ ಬಳಿ ವಾಯುಭಾರ ಕುಸಿತ ಉಂಟಾಗಿದ್ದು, ಕೇರಳ ಮತ್ತು ಕರ್ನಾಟಕದ ಹಲವೆಡೆ ಇಂದು ಮತ್ತು ನಾಳೆ ಭಾರಿ ಮಳೆಯಾಗಲಿದೆ ಎಂದೂ ಸಹ ಕಳೆದ ಎರಡು ದಿನಗಳ ಹಿಂದೆ ಹವಾಮಾನ ಇಲಾಖೆ ವರದಿ ತಿಳಿಸಿತ್ತು.

     ಈ ವರದಿಯ ಪ್ರಕಾರ ಕರಾವಳಿಯಲ್ಲಿ 5 ದಿನಗಳ ಕಾಲ ಮತ್ತು ದಕ್ಷಿಣ ಒಳನಾಡಿನಲ್ಲಿ ಎರಡು ದಿನಗಳ ಕಾಲ ಭಾರಿ ಮಳೆ ಬೀಳುವ ಸಂಭವವಿದೆ ಎಂದೇ ಹೇಳಲಾಗುತ್ತಿದೆ. ಬೆಳಗಿನಿಂದ ರಾತ್ರಿಯವರೆಗೂ ಮೋಡಗಳು ಕಟ್ಟುತ್ತಲೇ ಇವೆ. ವಿಪರೀತ ಗಾಳಿ ಬೀಸುತ್ತಲೇ ಇದೆ. ಗಾಳಿಯ ರಭಸಕ್ಕೆ ಮೋಡಗಳು ತೇಲಿ ಹೋಗುತ್ತಿವೆ. ಮಳೆರಾಯ ಬರುವನೋ ಇಲ್ಲ ಕಳೆದ ಬಾರಿಯಂತೆಯೇ ಈ ಬಾರಿಯೂ ಮೋಡ ಮುಸುಕಿದ ವಾತಾವರಣವೇ ಇರಲಿದೆಯೋ ಎಂಬ ಆತಂಕ ರೈತಾಪಿ ವರ್ಗದಲ್ಲಿ ಶುರುವಾಗಿದೆ.

        ಹವಾಮಾನ ಇಲಾಖೆಯ ವರದಿ ಅನ್ವಯ ಇನ್ನೆರಡು ದಿನಗಳ ಕಾಲ ಮಳೆಯಾಗಬೇಕು. ಭೂಮಿಯನ್ನು ಹದ ಮಾಡಿಕೊಂಡಿರುವ ರೈತರು ಮಳೆಗಾಗಿ ಕಾಯುತ್ತಿದ್ದಾರೆ. ಮುಂಗಾರು ಬಿತ್ತನೆ ಸಾಧ್ಯವಾಗದೇ ಹೋದರೂ ಇನ್ನು ಮುಂದಿನ ಬೀಜ ಬಿತ್ತನೆ ಮಾಡುವತ್ತ ರೈತರು ಉತ್ಸುಕರಾಗಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link