ಕೊರಟಗೆರೆ :
ಮರಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಯುವಕನೋರ್ವ ಜೀವನದಲ್ಲಿ ಜುಗುಪ್ಸೆಗೊಂಡು ಕೆರೆಗೆ ಹಾರಿ ಪ್ರಾಣ ಕಳೆದುಕೊಂಡಿರುವ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ತಾಲ್ಲೂಕಿನ ಎಲೆರಾಂಪುರ ಕೆರೆಯಲ್ಲಿ ಈ ದುರ್ಘಟನೆ ಜರುಗಿದ್ದು, ಇರಕಸಂದ್ರ ಕಾಲನಿ ಬಳಿಯ ಸಂಕೇನಹಳ್ಳಿ ಗ್ರಾಮದ ಲೇಟ್ ಗಂಗಹನುಮಪ್ಪನ ಮಗ ಕೆಂಪರಾಜು (28) ಸಾವಿಗೀಡಾದ ದುರ್ದೈವಿ ಎನ್ನಲಾಗಿದೆ.
ಮೃತ ಕೆಂಪರಾಜು ಮೂಲತಃ ಡಾಬಸ್‍ಪೇಟೆ-ತ್ಯಾಮಗೊಂಡ್ಲು ಬಳಿಯ ಓಬಳಾಪುರ ಗ್ರಾಮದವರಾಗಿದ್ದು, ಇತ್ತೀಚೆಗೆ ಕೆಲವು ವರ್ಷಗಳಿಂದ ಸಂಕೇನಹಳ್ಳಿ ಗ್ರಾಮದಲ್ಲಿ ವಾಸವಿದ್ದರು ಎನ್ನಲಾಗಿದೆ.
ಮೃತ ಕೆಂಪರಾಜು ಮುಂಗೋಪಿಯಾಗಿದ್ದು, ಮಾನಸಿಕ ಅಸ್ವಸ್ಥ ರೀತಿಯಲ್ಲಿ ವರ್ತಿಸುತ್ತಿದ್ದರು ಎನ್ನಲಾಗುತ್ತಿದೆ. ಈತ ಮಾನಸಿಕ ಸಮತೋಲನವಿಲ್ಲದೆ ಮಾನಸಿಕವಾಗಿ ನೊಂದು ದುಡುಕಿ ಕೆರೆಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಸಿದ್ದರಾಮೇಶ್ವರ ಹಾಗೂ ಕೋಳಾಲ ಪಿಎಸ್‍ಐ ನವೀನ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
–
