ತುಮಕೂರು

ಕೇಂದ್ರದಲ್ಲಿ ಆಳ್ವಿಕೆ ನಡೆಸುತ್ತಿರುವ ಮೋದಿ ನೇತೃತ್ವದ ಎನ್‍ಡಿಎ ಸರಕಾರ ತಮ್ಮ ಕಾರ್ಯಕ್ರಮಗಳನ್ನು ಜಾಹಿರಾತುಗಳ ಮೂಲಕ ಜನರಿಗೆ ತಲುಪಿಸುತ್ತಿದ್ದಾರೆ ಹೊರತು ನೇರವಾಗಿ ಜನರಿಗೆ ಯೋಜನೆಗಳು ತಲುಪುತ್ತಿಲ್ಲ. ಶಿಕ್ಷಣ, ಉದ್ಯೋಗ, ಮಹಿಳೆಯರ ಹಕ್ಕುಗಳ ಬಗ್ಗೆ ಕಾಳಜಿ ತೋರುತ್ತಿಲ್ಲ. ನಿರಂತರವಾದ ಆರ್ಥಿಕ ಕುಸಿತ, ನಿರುದ್ಯೋಗ ಸಮಸ್ಯೆ ಸೇರಿದಂತೆ ಇನ್ನಿತರ ರಂಗಗಳು ಖಾಸಗೀಕರಣವಾಗುತ್ತಿವೆ.
ಇದರ ವಿರುದ್ಧ ಜ.8ರಂದು ದೇಶವ್ಯಾಪಿ ಮುಷ್ಕರಕ್ಕೆ ನೀಡಲಾದ ಕರೆಗೆ ವಿದ್ಯಾರ್ಥಿ ಸಂಘಟನೆಗಳು ಬೆಂಬಲ ನೀಡುತ್ತಿವೆ ಎಂದು ವಿವಿಧ ವಿದ್ಯಾರ್ಥಿ ಹೋರಾಟ ಸಂಘಟನಾಕಾರರು ತಿಳಿಸಿದ್ದಾರೆ.ಖಾಸಗಿ ಹೋಟೆಲ್‍ನ ಸಭಾಂಗಣದಲ್ಲಿ ವಿವಿಧ ಸಂಘಟನೆಗಳ ಮುಖ್ಯಸ್ಥರು, ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಎಸ್‍ಎಫ್‍ಐ ಸಂಘಟನೆಯ ಶಿವಣ್ಣ ಮಾತನಾಡಿ, ಕೇಂದ್ರ ಸರಕಾರದ ಜನ ವಿರೋಧಿ ನೀತಿಗಳ ವಿರುದ್ದ ಕಾರ್ಮಿಕರು ಜನವರಿ 08ರಂದು ನಡೆಸುತ್ತಿರುವ ಅಖಿಲ ಭಾರತ ಮುಷ್ಕರದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ (ಎ.ಐ.ಎಸ್.ಎಫ್), ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ), ಆಲ್ ಇಂಡಿಯಾ ಡೆಮಕ್ರಟಿಕ್ ಸ್ಟೂಡೆಂಟ್ ಆರ್ಗನೈಸೇಸನ್ (ಎ.ಐ.ಡಿ.ಎಸ್.ಓ), ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿ.ವೈ.ಎಫ್.ಐ), ಆಲ್ ಇಂಡಿಯಾ ಡೆಮಾಕ್ರೋಟಿಕ್ ಯೂತ್ ಆರ್ಗನೈಸೇಸನ್ (ಎ.ಐ.ಡಿ.ವೈ.ಓ), ಅಖಿಲ ಭಾರತ ಮಹಿಳಾ ಸಾಂಸ್ಕøತಿಕ ಸಂಘಟನೆಗಳು (ಎ.ಐ.ಎಂ.ಎಸ್‍ಎಸ್) ಬೆಂಬಲಿಸಿ ಭಾಗವಹಿಸುತ್ತಿವೆ ಎಂದು ತಿಳಿಸಿದರು.
ದೇಶದ ಜನಸಂಖ್ಯೆಯಲ್ಲಿ ಅರ್ದದಷ್ಟು ಯುವ ಜನರಿದ್ದಾರೆ. ಈ ಯುವಕ ಯುವತಿಯರಿಗೆ ಉದ್ಯೋಗವಕಾಶಗಳನ್ನು ಒದಗಿಸುವ ಮೂಲಕ ವಿವಿಧ ಕ್ಷೇತ್ರಗಳಲ್ಲಿನ ಅವರ ಜ್ಞಾನ ಮತ್ತು ಶ್ರಮದ ಶಕ್ತಿಯನ್ನು ಬೆಳೆಸಿದರೆ ದೇಶ ಅಭಿವೃದ್ದಿಯಾಗುತ್ತದೆ. ಜೊತೆಯಲ್ಲಿ ಶಿಕ್ಷಣ, ಆರೋಗ್ಯ, ಕಾರ್ಮಿಕರಿಗೆ ಆದ್ಯತೆ ನೀಡಿದಲ್ಲಿ ಪ್ರಗತಿಯನ್ನು ಕಾಣಲು ಸಾಧ್ಯ. ಆದರೆ ಆಳುವ ಸರಕಾರಗಳು ಆ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿದ ಕಾರಣ ಯುವ ಜನತೆಯ ಭವಿಷ್ಯ ಚಿಂತಾಜನಕ ಸ್ಥಿತಿಯಲ್ಲಿದೆ ಎಂದು ವಿಷಾದ ವ್ಯಕ್ತ ಪಡಿಸಿದರು.
ಎಐಡಿಎಸ್‍ಒನ ಅಶ್ವಿನಿ ಮಾತನಾಡಿ, ಕೇಂದ್ರದಲ್ಲಿ ಇತ್ತೀಚೆಗೆ ನಡೆದ ನೇಮಕಾತಿ ಪ್ರಕ್ರಿಯೆಗಳಲ್ಲಿ ಕೋಟ್ಯಂತರ ಯುವ ಜನರು ಅರ್ಜಿ ಹಾಕಿದ್ದು ನಿರುದ್ಯೋಗದ ಕರಾಳ ವಾಸ್ತವ ಕಣ್ಣಿಗೆ ರಾಚುವಂತೆ ತೋರುತ್ತಿದೆ. ಆರ್ಥಿಕ ಮುಗ್ಗಟ್ಟಿನಿಂದಾಗಿ ಅನೇಕ ಕಂಪನಿಗಳು ಮುಚ್ಚಿಕೊಂಡು ಉದ್ಯೋಗ ಇಲ್ಲದಂತಾಗುತ್ತಿದೆ. ದಿನ ನಿತ್ಯ ಸಾವಿರಾರು ಕಾರ್ಮಿಕರನ್ನು ಕೆಲಸದಿಂದ ಕಿತ್ತು ಹಾಕಲಾಗುತ್ತಿದೆ. ಮುಖ್ಯವಾಗಿ ದೇಶದಲ್ಲಿ ಕಲಿಕೆ, ಉದ್ಯೋಗ ಮತ್ತು ಸಾಮಾಜಿಕ ವಿಶ್ವಾಸವನ್ನು ಮೂಡಿಸುವ ಮೂಲಕ ಸಾಮಾನ್ಯ ಜನರನ್ನು ಸಬಲೀಕರಣ ಮಾಡಬೇಕಿದೆ ಎಂದರು.
ಎಐಎಂಎಸ್‍ಎಸ್‍ನ ಕಲ್ಯಾಣಿ ಮಾತನಾಡಿ, ಭೇಟಿ ಬಚಾವ್ ಭೇಟಿ ಪಡಾವ್ ಎಂಬಿತ್ಯಾದಿ ಆಕರ್ಷಕ ಘೋಷಣೆಗಳನ್ನು ಕೊಟ್ಟ ಸರಕಾರ ಅದಕ್ಕೆ ಅಗತ್ಯವಾದ ಉದ್ಯೋಗವಕಾಶ ಕಲ್ಪಿಸುವಲ್ಲಿ ವಿಫಲವಾಗಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಗೆ ಬದಲಾಗಿ ಉದ್ಯೋಗಗಳ ಕಡಿತವಾಗುತ್ತಿದೆ. ಹಾಗೆಯೇ ಮಹಿಳಾ ನಿರುದ್ಯೋಗಿಗಳ ಪ್ರಮಾಣ ಏರಿಕೆಯಾಗುತ್ತಿದೆ. ಆಳುವ ಸರಕಾರಗಳ ನಿರ್ಲಕ್ಷವೇ ಇದಕ್ಕೆ ಕಾರಣವಾಗಿದೆ.
ಮನುವಾದಿ ಮತ್ತು ಬಂಡವಾಳಶಾಹಿ ಶಕ್ತಿಗಳಲ್ಲಿ ಬಂಧಿಯಾಗಿರುವ ಕೇಂದ್ರ ಸರಕಾರ ಶಿಕ್ಷಣವನ್ನು ಖಾಸಗೀಕರಣ ಮಾಡಿವೆ. ಅದಕ್ಕಾಗಿ ಯುಜಿಸಿಯನ್ನು ಮುಚ್ಚಿ ಎಚ್‍ಇಸಿಐ ಮಸೂದೆಯನ್ನು ಜಾರಿ ಮಾಡಲು ಹೊರಟಿವೆ. ಇದು ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡುವ ಮಸೂದೆಯಾಗಿದ್ದು, ಇದರಿಂದ ಫೆಲೋಶಿಫ್ ಕಡಿತವಾಗುತ್ತದೆ. ಹಾಸ್ಟೆಲ್ ಸೌಲಭ್ಯ ದೊರೆಯುವುದಿಲ್ಲ ಇನ್ನು ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಐಎಸ್‍ಎಫ್‍ನ ವಿದ್ಯಾ, ಎಸ್‍ಎಫ್‍ಐನ ನಿತ್ಯಾ, ಎಐಡಿಎಸ್‍ಒನ ಲಕ್ಕಪ್ಪ, ನವೀನ್, ರತ್ನಮ್ಮ, ಅಮೃತ, ನಿಖಿತ ಮತ್ತಿತರರು ಉಪಸ್ಥಿತರಿದ್ದರು.
