ಮೈಸೂರು
ರಾಜ್ಯದ ಸಾಂಸ್ಕೃತಿಕ ರಾಜಧಾನಿಯಾದ ಮೈಸೂರು ರೇಷ್ಮೆಗೂಡು ಮಾರುಕಟ್ಟೆ ಮೈಸೂರು ಪ್ರಾಂತ್ಯದಲ್ಲಿ ಪರ್ಯಾಯ ಕಾರ್ಯಸಾಧು ಮಾರುಕಟ್ಟೆಯಾಗುವತ್ತ ಹೆಜ್ಜೆ ಇಡುತ್ತಿದೆ.ಮೈಸೂರು ರೇಷ್ಮೆಗೂಡು ಮಾರುಕಟ್ಟೆ ಕಾರ್ಯಸಾಧುವಂತಾಗಲು ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮ (ಕೆಎಸ್‍ಐಸಿ) ಅಗತ್ಯತೆಗಳನ್ನು ಪೂರೈಸುವುದರ ಮೂಲಕ ನೆರವು ಒದಗಿಸುತ್ತಿದೆ.
ಮೈಸೂರು ಮಾರುಕಟ್ಟೆ ಎರಡು ತಿಂಗಳ ಹಿಂದೆ ಆರಂಭವಾದಾಗಿನಿಂದ, ಒಂದು ಶತಮಾನಕ್ಕೂ ಹಳೆಯ ನೇಯ್ಗೆ ಕಾರ್ಖಾನೆಯಾದ ಕೆಎಸ್‍ಐಸಿ, ರಾಜ್ಯದ ಇತರ ಮಾರುಕಟ್ಟೆಗಳಿಗಿಂತ ಹೆಚ್ಚಾಗಿ ಇದೇ ಮಾರುಕಟ್ಟೆಯನ್ನು ಆಯ್ಕೆ ಮಾಡಿಕೊಳ್ಳುತ್ತಿದೆ.
ಕರ್ನಾಟಕದ ವಿವಿಧ ಭಾಗಗಳಿಂದ ಮಾತ್ರವಲ್ಲದೆ ನೆರೆಯ ಆಂಧ್ರಪ್ರದೇಶ ಮತ್ತು ತಮಿಳುನಾಡುನಿಂದಲೂ ರೇಷ್ಮೆಗೂಡು ಆಕರ್ಷಿಸುತ್ತಿರುವ ರಾಮನಗರ ಮಾರುಕಟ್ಟೆಯಲ್ಲಿರುವ ವ್ಯಾಪಾರಸ್ಥರೊಂದಿಗೂ ಮೈಸೂರಿನ ರೇಷ್ಮೆ ಕೃಷಿ ರೈತರು ಸಂಪರ್ಕ ಹೊಂದಿದ್ದಾರೆ. ಸದ್ಯದ ರೇಷ್ಮೆಗೂಡು ದರ ಮತ್ತು ನೂಲು ಬಿಚ್ಚುವವರಿಂದ ಸಿಗುವ ಬೇಡಿಕೆಯನ್ನು ರೈತರು ತಿಳಿಯುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸುಮಾರು 5,000 ಎಕರೆ ಜಮೀನಿನಲ್ಲಿ ಹಿಪ್ಪುನೇರಳೆ ಬೆಳೆಯಲಾಗುತ್ತಿದೆ. ರೇಷ್ಮೆ ಕೃಷಿ ಚಟುವಟಿಕೆಗಳಲ್ಲಿ 3,300 ಕ್ಕೂ ಹೆಚ್ಚು ರೈತರು ತೊಡಗಿಸಿಕೊಂಡಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಪ್ರತಿ ತಿಂಗಳು 70,000 ದಿಂದ 75,000 ಕೆ.ಜಿ. ರೇಷ್ಮೆಗೂಡು ಉತ್ಪಾದಿಸಲಾಗುತ್ತಿದೆ.
ಮೈಸೂರು ಮಾರುಕಟ್ಟೆ ಹೆಚ್ಚು ರೇಷ್ಮೆಗೂಡು ಆಕರ್ಷಿಸಲು ಉತ್ತಮ ಅವಕಾಶಗಳಿವೆ ಎಂದಿರುವ ಅಧಿಕಾರಿಗಳು, ಕೊಳ್ಳೆಗಾಲದ ಅನೇಕ ರೇಷ್ಮೆಗೂಡು ವ್ಯಾಪಾರಿಗಳು ಉತ್ತಮ ದರದ ಭರವಸೆಯೊಂದಿಗೆ ರೈತರನ್ನು ಅದೇ ಮಾರುಕಟ್ಟೆಗೆ ಸೆಳೆಯುತ್ತಿದ್ದಾರೆ. ಮೈಸೂರಿಗೆ ಪ್ರಯಾಣಿಸುವ ಬದಲು ಕೊಳ್ಳೇಗಾಲದಲ್ಲಿಯೇ ಮಾರಾಟ ಮಾಡಲು ರೈತರನ್ನು ವ್ಯಾಪಾರಿಗಳು ಉತ್ತೇಜಿಸುತ್ತಿದ್ದಾರೆ.
ಆದರೆ, ಮೈಸೂರು ಮಾರುಕಟ್ಟೆಯಲ್ಲೇ ಮಾರಾಟ ಮಾಡಿದರೆ, ಸಾಗಾಣಿಕೆ ವೆಚ್ಚ ಉಳಿಯುತ್ತದೆ ಎಂದು ರೇಷ್ಮೆ ಇಲಾಖೆ ಅಧಿಕಾರಿಗಳು ರೈತರ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ.
ರೇಷ್ಮೆಗೂಡು ಮಾರುಕಟ್ಟೆ ಕಾರ್ಯಸಾಧುವಾಗಲು ನೂಲು ಬಿಚ್ಚುವವರು ಪ್ರಮುಖ ಪಾತ್ರ ವಹಿಸುತ್ತಿದ್ದು, ಮೈಸೂರಿನಲ್ಲಿ ನೂಲು ಬಿಚ್ಚುವ ಚಟುವಟಿಕೆಗಳಲ್ಲಿ ಹೆಚ್ಚು ಜನರು ತೊಡಗಿಸಿಕೊಳ್ಳಲು ರೇಷ್ಮೆ ಕೃಷಿ ಅಧಿಕಾರಿಗಳು ಉತ್ತೇಜಿಸುತ್ತಿದ್ದಾರೆ.
ಮೈಸೂರಿನಲ್ಲಿ ನೂಲು ಬಿಚ್ಚುವ ಘಟಕಗಳನ್ನು ಸ್ಥಾಪಿಸಲು ಮುಂದಾಗುವ ಜನರಿಗೆ ರೇಷ್ಮೆಗೂಡು ಖರೀದಿಸಲು ಹೆಚ್ಚು ಪರವಾನಿಗೆಗಳನ್ನು ನೀಡಲು ಇಲಾಖೆ ಉದ್ದೇಶಿಸಿದೆ ಎಂದು ರೇಷ್ಮೆ ಇಲಾಖೆ ಉಪ ನಿರ್ದೇಶಕ ಜವರೇಗೌಡ ತಿಳಿಸಿದ್ದಾರೆ.ಮೈಸೂರು ಪ್ರಾಂತ್ಯದಲ್ಲಿ ಬನ್ನೂರು ಮತ್ತು ಕಡಕೋಳದಲ್ಲಿ ದೊಡ್ಡ ನೂಲು ಬಿಚ್ಚುವ ಘಟಕಗಳಿವೆ.ಮೈಸೂರಿನ ಮಾರುಕಟ್ಟೆಯಲ್ಲಿ ರೇಷ್ಮೆಗೂಡು ಹರಾಜಿನಲ್ಲಿ ಈ ಪ್ರಾಂತ್ಯದ ನೂಲು ಬಿಚ್ಚುವವರು ಪಾಲ್ಗೊಂಡರೂ, ರಾಮನಗರ ಮತ್ತು ಕೊಳ್ಳೇಗಾಲದ ನೂಲು ಬಿಚ್ಚುವವರೇ ಆದ ವ್ಯಾಪಾರಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮೈಸೂರಿನ ರೇಷ್ಮೆ ಮಾರುಕಟ್ಟೆ ಕಾರ್ಯಸಾಧುವಾಗಲು ಈ ಪ್ರಾಂತ್ಯದಲ್ಲಿ ರೇಷ್ಮೆ ಚಟುವಟಿಕೆ ಉತ್ತೇಜಿಸಬೇಕಾದ ಅಗತ್ಯವಿದೆ.
ಪ್ರತಿದಿನ ಈ ಮಾರುಕಟ್ಟೆಯಲ್ಲಿ 500ರಿಂದ 1,500 ಕೆ.ಜಿ ರೇಷ್ಮೆಗೂಡು ವಹಿವಾಟು ನಡೆಯುತ್ತಿದೆ. ತಿಂಗಳಿಗೆ ಸರಾಸರಿ 25,000ದಿಂದ 30,000 ಕೆ.ಜಿ. ರೇಷ್ಮೆಗೂಡು ಮಾರಾಟವಾಗುತ್ತಿದೆ ಎಂದು ಜವರೇಗೌಡ ತಿಳಿಸಿದ್ದಾರೆ.ರೈತರು ಉತ್ತಮ ಗುಣಮಟ್ಟದ ಬೈವೋಲ್ಟಿನ್ ರೇಷ್ಮೆಗೂಡಿಗೆ ಕೆ.ಜಿಗೆ 330ರಿಂದ 350ರೂ. ಪಡೆಯುತ್ತಿದ್ದಾರೆ.ಆದರೂ, ಮೈಸೂರು ರೇಷ್ಮೆಗೂಡು ಮಾರುಕಟ್ಟೆ, ರಾಮನಗರ, ಕೊಳ್ಳೆಗಾಲ, ಮಳವಳ್ಳಿ, ಟಿ. ನರಸೀಪುರ, ಸಂತೆಮರಹಳ್ಳಿ ಮಾರುಕಟ್ಟೆಗಳೊಂದಿಗೆ ಸ್ಪರ್ಧಿಸಬೇಕಿದೆ. ರೇಷ್ಮೆ ಇಲಾಖೆಯ ಅಧಿಕಾರಿಗಳು ರಾಮನಗರ ಮತ್ತು ಕೊಳ್ಳೆಗಾಲ ಸೇರಿದಂತೆ ರಾಜ್ಯ ವಿವಿಧ ಭಾಗಗಳ ರೇಷ್ಮೆ ವ್ಯಾಪಾರಿಗಳನ್ನು ದೂರವಾಣಿ ಮೂಲಕ ಮಾರುಕಟ್ಟೆಗೆ ಆಗಾಗ್ಗೆ ಆಹ್ವಾನಿಸುತ್ತಾರೆ.