ಮಧುಗಿರಿ: ಮೈತ್ರಿ `ಧರ್ಮ’ ಪಾಲನೆಯ `ರಾಜ’ಕಾರಣ

ಮಧುಗಿರಿ

        ಮಾಜಿ ಪ್ರಧಾನಿಗಳ ಸ್ಪರ್ಧೆಯಿಂದಾಗಿ ಈ ಕ್ಷೇತ್ರ ಹೈ ವೋಲ್ಟೇಜ್ ಕ್ಷೇತ್ರವೆನಿಸಿದೆ. ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಮೈತ್ರಿ ಧರ್ಮಪಾಲನೆಯು ಬೂದಿ ಮುಚ್ಚಿರುವ ಕೆಂಡದಂತಿದ್ದು, ತಣ್ಣಗೆ ಮಾಡುವ ಪ್ರಯತ್ನಗಳು ನಡೆದಿವೆ. ಆದರೂ ಎರಡು ಪಕ್ಷಗಳ ಕಾರ್ಯಕರ್ತರಲ್ಲಿ ಸಹಮತ ಕಾಣದೆ ಇರುವುದು ಅಲ್ಲಲ್ಲಿ ಕಂಡುಬರುತ್ತಿದೆ.

       ಈ ಹಿಂದೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಎಸ್. ಪಿ. ಮುದ್ದಹನುಮೆಗೌಡ ಲೋಕಸಭೆಗೆ ಆಯ್ಕೆಯಾಗಿದ್ದರು. ಆದರೆ ಈಗ ಎರಡು ಪಕ್ಷಗಳ ಮೈತ್ರಿಯಿಂದಾಗಿ ಮಾಜಿ ಪ್ರಧಾನಿ ದೇವೆಗೌಡ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣಾ ಅಖಾಡದಲ್ಲಿದ್ದಾರೆ. ಕಾಂಗ್ರೆಸ್‍ನ ಹೈಕಮಾಂಡ್ ನಿರ್ದೇಶನದ ಒತ್ತಾಯದಿಂದ ಸ್ಪರ್ಧೆಯಿಂದ ತಮ್ಮ ಉಮೇದುವಾರಿಕೆಯನ್ನು ಕೆಎನ್‍ಆರ್ ಮತ್ತು ಎಸ್‍ಪಿಎಂ ವಾಪಸ್ಸು ಪಡೆದುಕೊಂಡಿದ್ದಾರೆ. ಆದರೆ ಕಾರ್ಯಕರ್ತರಿಂದ ನಾಯಕರೆ ಹೊರತು, ಜನಪ್ರತಿನಿಧಿಗಳಿಂದ ಕಾರ್ಯಕರ್ತರಲ್ಲ ಎಂಬುದು ಜನ ನಾಯಕರಿಗೆ ಈಗಾಗಲೇ ಅರ್ಥವಾಗಿದೆ.

        ಮಾಜಿ ಶಾಸಕ ಕೆ.ಎನ್.ರಾಜಣ್ಣರವರು ಸದಾಕಾಲ ಕ್ಷೇತ್ರದ ಜನರ ನಿರಂತರ ಸಂಪರ್ಕದಲ್ಲಿರುವುದರಿಂದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಚೈತನ್ಯ ಮಾಸಿಲ್ಲ. ಕಳೆದ ವಿಧಾನಸಭೆಯ ಚುನಾವಣೆಯ ನಂತರವೂ ಕ್ಷೇತ್ರದಲ್ಲಿ ಚಟುವಟಿಕೆಯಿಂದಿದ್ದಾರೆ. ಮುದ್ದಹನುಮೆಗೌಡರಿಗೆ ಟಿಕೆಟ್ ಸಿಗದೇ ಇದ್ದಾಗ ಅಸಮಾಧಾನಗೊಂಡು ಇವರೂ ಸಹ ನಾಮಪತ್ರ ಸಲ್ಲಿಸಿದರು. ನಂತರ ವಾಪಸ್ ಪಡೆದರು. ಇದಾದ ನಂತರ ಮಧುಗಿರಿಯಲ್ಲಿ ಏ. 8 ರಂದು ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಚರ್ಚಿಸಿದರು.

       ತಾಲ್ಲೂಕಿನಲ್ಲಿ ಕೆಎನ್‍ರಾಜಣ್ಣ ಹಾಗೂ ಎಂ.ವಿ.ವೀರಭದ್ರಯ್ಯ ಮಾಜಿ ಪ್ರಧಾನಿಗಳ ಪರ ಜೊತೆಯಲ್ಲಿ ಮತಯಾಚನೆ ಮಾಡುವುದು ಹೇಗೆ ಸಾಧ್ಯ ಎಂಬ ಪ್ರಶ್ನೆಗಳನ್ನು ಇಲ್ಲಿ ಬಹಳಷ್ಟು ಜನ ಕೇಳುತ್ತಲೇ ಬಂದಿದ್ದಾರೆ. ಅದಕ್ಕೆ ಕೆ.ಎನ್.ಆರ್. ಉತ್ತರವನ್ನೂ ನೀಡಿದ್ದಾರೆ. ಜಿಪಂ, ತಾಪಂಗಳು ಸೇರಿದಂತೆ ಈ ಹಿಂದೆ ನಡೆದ ಮತ್ತಿತರ ಚುನಾವಣೆಗಳಲ್ಲಿ ಆಯ್ಕೆಯಾದವರು ಹಾಗೂ ಪರಾಭವಗೊಂಡವರು ನಾವೇಕೆ ನಮ್ಮ ವಿರೋಧ ಪಕ್ಷದ ಜೊತೆ ಕೈಜೋಡಿಸಬೇಕು? ಯಾವ ಮೈತ್ರಿ ಧರ್ಮ ಇದ್ದರೂ ಬೇಕಾದವರು ಪಾಲನೆ ಮಾಡಿಕೊಳ್ಳಲಿ.

         ಮೈತ್ರಿ ಏನೇ ಇದ್ದರೂ ಕೇವಲ ವಿಧಾನ ಸೌಧಕ್ಕೆ ಮಾತ್ರ ಸೀಮಿತ. ಇಲ್ಲೆಲ್ಲಾ ಮೈತ್ರಿ ಪಾಲನೆಗೆ ನಾವು ಸಿದ್ಧರಿಲ್ಲ ಎಂಬ ಸಿದ್ಧ ಉತ್ತರ ಮತದಾರನದಾಗಿದೆ. ಮಧುಗಿರಿಯಲ್ಲಿ ಜೆಡಿಎಸ್‍ನಿಂದ ಶಾಸಕರಾಗಿ ಆಯ್ಕೆಯಾಗಿರುವ ವೀರಭದ್ರಯ್ಯನವರು ದೇವೆಗೌಡರ ದತ್ತು ಪುತ್ರನೆಂದು ಜನರಿಂದ ಬಿಂಬಿಸಿಕೊಂಡಿದ್ದಾರೆ.

          ಆದರೆ ಮಾಜಿ ಪ್ರಧಾನಿಗಳು ಉಮೇದುವಾರಿಕೆ ಸಲ್ಲಿಸಿದಾಗಿನಿಂದ ಮಧುಗಿರಿ ಕ್ಷೇತ್ರದಲ್ಲಿ ಕಾರ್ಯಕರ್ತರರೊಂದಿಗೆ ಏಪ್ರಿಲ್ 10 ರವರೆಗೂ ಬಹಿರಂಗವಾಗಿ ಕಾಣಿಸಿಕೊಳ್ಳಲಿಲ್ಲ. ಚುನಾವಣಾ ಪ್ರಚಾರದ ಚಟುವಟಿಕೆಗಳು ಏಪ್ರಿಲ್ 10 ರವರೆವಿಗೂ ಸಕ್ರಿಯವಾಗಿರಲಿಲ್ಲ ಎಂದೇ ಹೇಳಬಹುದು. ಎರಡು ಪಕ್ಷಗಳ ಮತ ಬೇಕೆಂದರೆ ತಾಲ್ಲೂಕಿನಲ್ಲಿ ಕೆಎನ್‍ಆರ್ ಅವಶ್ಯಕತೆಯೂ ಇದೆ.

         ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿ ಸುಮಾರು 55000, ಕುಂಚಿಟಿಗರು 33000, ಪರಿಶಿಷ್ಟ ವರ್ಗ 20000, ಗೊಲ್ಲರು (ಯಾದವರು) 18000, ಕುರುಬರು 15000, ಸಾದರು ಹಾಗೂ ವೀರಶೈವರು 12000, ಮುಸ್ಲಿಂ 12000, ರೆಡಿ,್ಡ ಹಳ್ಳಿಕಾರರು, ರೊದ್ದರು ಉಪ್ಪಿನ ಕೊಳಗ 10000, ಮಡಿವಾಳ 4000, ಉಪ್ಪಾರು 4000, ತಿಗಳರು 4000, ಸಣ್ಣ ಪುಟ್ಟ ಸಮುದಾಯಗಳಾದ ಜೈನರು, ಬ್ರಾಹ್ಮಣ, ವೈಶ್ಯ, ದೇವಾಂಗ ಮತ್ತಿತರರು ಸೇರಿದಂತೆ ಒಟ್ಟು 2 ಲಕ್ಷ ಮತದಾರರನ್ನು ತಾಲ್ಲೂಕು ಹೊಂದಿದೆ.

         ಎರಡು ಪಕ್ಷಗಳನ್ನು ಗಮನಿಸಿದರೆ ಮೈತ್ರಿಗಿಂತ ಹೆಚ್ಚಾಗಿ ಚುನಾವಣಾ ಪ್ರಚಾರ ಕಾರ್ಯವನ್ನು ಭಾಜಪ ಪಕ್ಷದ ಅಭ್ಯರ್ಥಿ ಮಾಜಿ ಸಂಸದ ಜಿ.ಎಸ್. ಬಸವರಾಜು ಆರಂಭಿಸಿದ್ದಾರೆ. ಈಗಾಗಲೇ ತಾಲ್ಲೂಕು ಕೇಂದ್ರದಲ್ಲಿ ಒಂದು ಸುತ್ತು ಪ್ರದಕ್ಷಿಣೆ ಹಾಕಿದ್ದಾರೆ. ಈ ಹಿಂದೆ ಇಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಅನಿತಾ ಕುಮಾರಸ್ವಾಮಿ ಹಾಗೂ ಹಾಲಿ ಶಾಸಕ ವೀರಭದ್ರಯ್ಯರವರುಗಳ ಕಾರ್ಯವೈಖರಿ ಬಗ್ಗೆ ಟೀಕಾ ಪ್ರಹಾರ ನಡೆಸುತ್ತಿದ್ದಾರೆ.

           ಮಾಜಿ ಪ್ರಧಾನಿಗಳ ಸ್ಪರ್ಧೆಗೆ ಗಂಗೆ ಹಾಗೂ ಕುಟುಂಬ ರಾಜಕಾರಣವೇ ಜಿಲ್ಲೆಯ ಮತದಾರನ ಶಾಪ ಎನ್ನುತ್ತಾ ಹಾಲಿ ಪ್ರಧಾನಿ ನರೇಂದ್ರ ಮೋದಿಯವರ ಅಲೆಯಲ್ಲಿ ಬಿಜೆಪಿ ಪಕ್ಷ ಮತಬೇಟೆಯನ್ನು ಆರಂಭಿಸಿದ್ದಾರೆ. ಏನೇ ಆಗಲಿ ತಾಲ್ಲೂಕಿನಲ್ಲಿ ಈ ಹಿಂದೆ ಕೆ. ಎನ್. ರಾಜಣ್ಣನವರು ಶಾಸಕರಾಗಿದ್ದಾಗ ಕಾಂಗ್ರೆಸ್ ಪಕ್ಷ ಪ್ರಚಂಡ ಬಹುಮತವನ್ನು ಪಡೆದುಕೊಂಡಿತ್ತು.

         ಈ ಬಾರಿಯ ಮೈತ್ರಿ ಹಿನ್ನೆಲೆಯಲ್ಲಿ ಲೋಕ ಸಭಾ ಚುನಾವಣೆಯ ಬ್ಯಾಲೆಟ್ ಯಂತ್ರದಲ್ಲಿ 10 ಬಾರಿ ಜಯ ಸಾಧಿಸಿದ್ದ ಕೈ ಚಿಹ್ನೆ ಇಲ್ಲದಿರುವುದು ಸೋಜಿಗದ ಸಂಗತಿಯಾಗಿದ್ದು, ಜಿಲ್ಲಾ ಯುವ ಮತದಾರರು ಹಾಗೂ ಕೈ ಪಕ್ಷದ ಕಾರ್ಯಕರ್ತರು ತಮ್ಮ ಕೈಯಲ್ಲಿ ಕಮಲ ಹಿಡಿಯುತ್ತಾರಾ ಅಥವಾ ತೆನೆ ಹೊರುತ್ತಾರೆಯೆ? ನೋಟಾ ಪರ ಟಂಕಿಸುತ್ತಾರೆಯೆ? ತಾಲ್ಲೂಕಿನ ಪ್ರತಿಯೊಬ್ಬ ಮತದಾರರು ಮತದಾನದಲ್ಲಿ ಭಾಗವಹಿಸಿ ದೇಶದ ಅಭಿವೃದ್ಧಿಗೆ ಕೈ ಜೋಡಿಸುತ್ತಾರೆಯೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap