ದಾವಣಗೆರೆ:
ರಾಜ್ಯದಲ್ಲಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಅಸ್ತಿರಗೊಳಿಸಲು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವ್ಯವಸ್ಥಿತ ಪಿತೂರಿ ನಡೆಸಿದ್ದಾರೆಂದು ಕೆಎಸ್‍ಐಸಿ ಮಾಜಿ ಅಧ್ಯಕ್ಷ ಡಿ.ಬಸವರಾಜ್ ಆರೋಪಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏನಾದರೂ ಮಾಡಿ ಕರ್ನಾಟಕದಲ್ಲಿ ಅಧಿಕಾರ ಹಿಡಿಯಬೇಕೆಂಬ ಹಪಾಹಪಿಯಿಂದ ಬಿಜೆಪಿ ನಾಯಕರು, ರಫೆಲ್ ಹಗರಣದಲ್ಲಿ ಪಡೆದಿರುವ ಲಂಚದ ಹಣದಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಶಾಸಕರನ್ನು ಕುರಿ, ಕೋಳಿಗಳಂತೆ ಖರೀದಿಸಿ, ಆಪರೇಷನ್ ಕಮಲ ನಡೆಸಲು ಹವಣಿಸುತ್ತಿದ್ದಾರೆ. ಇದಕ್ಕೆ ಸಂಸದ ತೇಜಸ್ವಿ ಸೂರ್ಯ ಸಂಸತ್‍ನಲ್ಲಿ ಆಡಿದ ಮಾತುಗಳೇ ಪುಷ್ಟಿ ನೀಡುತ್ತವೆ ಎಂದು ಆರೋಪಿಸಿದರು.
2008ರಲ್ಲಿ ಆಪರೇಷನ್ ಕಮಲದ ಮೂಲಕವೇ ರಾಜ್ಯದಲ್ಲಿ ಅಧಿಕಾರ ಪಡೆದ ಬಿಜೆಪಿ, ಅಧಿಕಾರ ಸಿಕ್ಕ ಬಳಿಕ ಆಪರೇಷನ್ ಕಮಲಕ್ಕೆ ಒಳಗಾಗಿ, ಅಧಿಕಾರ ಹಿಡಿಯಲು ಸಹಕರಿಸಿದ ಶಾಸಕರ ಸದಸ್ಯತ್ವವನ್ನೇ ರದ್ದು ಪಡಿಸಿ, ಮೋಸ ಮಾಡಿತ್ತು. ಇದೇರೀತಿಯ ಮೋಸವನ್ನು ಈಗ ಆಪರೇಷನ್ ಕಮಲಕ್ಕೆ ಬಲಿಯಾಗುವ ಶಾಸಕರಿಗೂ ಮಾಡುವ ಸಂಭವವಿದೆ. ಹೀಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಯಾವ ಶಾಸಕರು ಆಪರೇಷನ್ ಕಮಲದ ಗಾಳಕ್ಕೆ ಬಲಿಯಾಗಬಾರದು ಎಂದು ಮನವಿ ಮಾಡಿದರು.
ಕೇಂದ್ರ ಸರ್ಕಾರವು ರಾಜ್ಯಕ್ಕೆ ನೀಡುವ ಅನುದಾನ ಹಾಗೂ ಯೋಜನೆಗಳ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದರೂ ಸಹ ಒಮ್ಮೆಯೂ ಬಿಜೆಪಿಯ 105 ಜನ ಶಾಸಕರು ಕೇಂದ್ರದ ತಾರತಮ್ಯದ ವಿರುದ್ಧ ಚಕಾರ ಎತ್ತಿಲ್ಲ. ಬದಲಿಗೆ, ಬಿ.ಎಸ್.ಯಡಿಯೂರಪ್ಪ ನವರಾದಿಯಾಗಿ ಎಲ್ಲರೂ ಆಪರೇಷನ್ ಕಮಲ ನಡೆಸಿ, ಅಧಿಕಾರ ಪಡೆದು ರಾಜ್ಯವನ್ನು ಕೊಳ್ಳೆ ಹೊಡೆಯಬೇಕೆಂಬ ಪ್ರಯತ್ನದಲ್ಲಿಯೇ ನಿರತರಾಗಿದ್ದಾರೆ.
ಇದಕ್ಕೆ ದೇವದುರ್ಗದ ಪ್ರವಾಸಿ ಮಂದಿರದಲ್ಲಿ ಶಾಸಕರೊಬ್ಬರನ್ನು ಖರೀದಿಸಲು ಹೋಗಿ, ಖುದ್ದು ಯಡಿಯೂರಪ್ಪನವರೇ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದು, ರಾಜಕೀಯವಾಗಿ ಬೆತ್ತಲಾಗಿರುವುದೇ ತಾಜಾ ಉದಾಹರಣೆಯಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ಸಂಸತ್‍ನಲ್ಲಿ ಮೋದಿಯವರ ಹುಳುಕನ್ನು ಎತ್ತಿ ಹಿಡಿಯುತ್ತಿದ್ದ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಸೋಲಿಸಬೇಕೆಂಬ ಕಾರಣಕ್ಕೆ ಮೋದಿ ಹಾಗೂ ಅಮಿತ್ ಶಾ ಆರು ತಿಂಗಳ ಪೈಲಟ್ ಪ್ರಾಜೆಕ್ಟ್ ರೂಪಿಸಿ, ಯಶಸ್ವಿಯೂ ಆಗಿದ್ದಾರೆ.
ಇದೇ ರೀತಿಯಲ್ಲಿ ದೇಶದ ಅತ್ಯುತ್ತಮ ಸಂಸದೀಯ ಪಟುಗಳನ್ನು ಕುತಂತ್ರದಿಂದ ಸೋಲಿಸಿದ ಮೋದಿ, ತನ್ನ ವಿರುದ್ಧ ಮಾತನಾಡುವವರನ್ನು ರಾಜಕೀಯವಾಗಿ ಮುಗಿಸುವ ಸಂಚು ರೂಪಿಸುವ ಮೂಲಕ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆಂದು ಆಪಾದಿಸಿದರು.
ದೇಶಾದ್ಯಂತ ಮನೆ ಮಾಡಿರುವ ಆಡಳಿತ ವಿರೋಧಿ ಅಲೆಯ ವಿರುದ್ಧ ಅನುಕಂಪ ಗಿಟ್ಟಿಸಿಕೊಳ್ಳಲಿಕ್ಕಾಗಿಯೇ ಕಳೆದ ಅವಧಿಯಲ್ಲಿ ಮೋದಿ ಸರ್ಕಾರವು, ಸೇನೆಯ ಕೋರಿಕೆಯಂತೆ ಹೆಲಿಕ್ಯಾಪ್ಟರ್ ನೀಡದೇ, ಪುಲ್ವಾಮಾ ದಾಳಿಗೆ ಕಾರಣವಾಯಿತು. ಇದಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರ ಉಗ್ರರ ಅಡಗು ತಾಣಗಳ ಮೇಲೆ ಏರ್‍ಸ್ಟ್ರೈಕ್ ನಡೆಸಿ, ಅನುಕಂಪ ಗಿಟ್ಟಿಸಿಕೊಂಡು, ಚುನಾವಣೆ ಎದುರಿಸಿ, ಮೋದಿ ಸೈನಿಕರ ಸಮಾಧಿಗಳ ಮೇಲೆ ಪಟ್ಟಾಭಿಷೇಕ ಮಾಡಿಕೊಂಡಿದ್ದಾರೆಂದು ಟೀಕಿಸಿದರು.
ಮರ್ಯಾದ ಪುರುಷ ರಾಮನ ಹೆಸರು ಹೇಳಿಕೊಂಡು, ಸಂಘಪರಿವಾರ ಮೋದಿಯ ನೆರಳಿನಲ್ಲಿ ಅಮಾಯಕರ ಹತ್ಯೆ ಮಾಡುತ್ತಿದೆ. ಅಲ್ಲದೇ, ಗಾಂಧಿಯನ್ನು ಕೊಂದ ಗೋಡ್ಸೆಯನ್ನು ಸಮರ್ಥಿಸಿಕೊಳ್ಳುವ ಪ್ರಗ್ಯಾಸಿಂಗ್ ಠಾಕೂರ್ ಸೇರಿದಂತೆ ಹಲವರನ್ನು ಬಿಜೆಪಿ ಗೆಲ್ಲಿಸಿ ಕೊಂಡು ಬಂದಿದ್ದು, ರಾಷ್ಟ್ರ ಧ್ವಜ ಒಪ್ಪದ, ಗಾಂಧಿಯನ್ನು ಗೌರವಿಸದ, ಆರ್‍ಎಸ್‍ಎಸ್ ಅಧಿಕಾರದಲ್ಲಿ ಮೂಗು ತೂರಿಸುವ ಮೂಲಕ ದೇಶವನ್ನು ತುಂಡರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರುಗಳಾದ ಅಲ್ಲಾವಲಿ ಘಾಜಿಖಾನ್, ಕೆ.ಜಿ. ರಹಮತ್‍ವುಲ್ಲಾ, ಎಸ್.ಎಂ. ಜಯಪ್ರಕಾಶ್, ಹರೀಶ್ ಈರಣ್ಣ, ಲಿಯಾಖತ್ ಅಲಿ, ಎ. ಅಬ್ದುಲ್ ಜಬ್ಬಾರ್, ಡಿ. ಶಿವಕುಮಾರ್, ಹೆಚ್. ಹರೀಶ್ ಹಾಜರಿದ್ದರು.