ಬುಕ್ಕಾಪಟ್ಟಣ
ಶಿರಾ ತಾಲ್ಲೂಕಿನ ಅತಿದೊಡ್ಡ ಹೋಬಳಿಯಾಗಿರುವ ಬುಕ್ಕಾಪಟ್ಟಣ ನಾಡಕಚೇರಿ ವ್ಯಾಪ್ತಿಯಲ್ಲಿ ಏಳು ಗ್ರಾಮ ಪಂಚಾಯಿತಿ, ಸುಮಾರು 70 ಹಳ್ಳಿಗಳಿದ್ದು, ಕೇವಲ ಎಂಟು-ಹತ್ತು ಗ್ರಾಮ ಲೆಕ್ಕಾಧಿಕಾರಿಗಳಿದ್ದಾರೆ. ಹಾಗಿದ್ದೂ ಯಾರೂ ಕೂಡ ಹೋಬಳಿ ಮಿತಿಯಲ್ಲಿ ವಾಸ ಇರುವುದಿಲ್ಲ.
ಎಲ್ಲಾ ರೀತಿಯ ಆನ್‍ಲೈನ್ ವ್ಯವಹಾರ ಎಂದರೆ ಜಾತಿ, ಆದಾಯ, ವಾಸಸ್ಥಳ, ವಂಶವೃಕ್ಷ, ಪಹಣಿ, ಸರ್ವೇ, ವಿಧವಾ ವೇತನ, ವೃದ್ದಾಪ್ಯ ವೇತನ, ಅಂಗವಿಕಲ ವೇತನ ಸೇರಿದಂತೆ ಇತರೆ ಎಲ್ಲಾ ಸೇವೆಗಳಿಗೂ ಒಂದೇ ಗಣಕಯಂತ್ರ ಇದ್ದು, ನಾಡಕಚೇರಿ ಆಪರೇಟರ್ ಕೂಡ ಒಬ್ಬರೇ ಇರುತ್ತಾರೆ.
ಒಂದೇ ಬಾರಿಗೆ ತಪ್ಮ್ಪಗಳಿಲ್ಲದೆ ಯಾವುದೇ ದಾಖಲಾತಿಯನ್ನು ನೀಡುವುದಿಲ್ಲ. ಹಲವು ಬಾರಿ ತಪ್ಪು ಮಾಹಿತಿ ನಮೂದಿಸುತ್ತಾರೆ ಉದಾಹರಣೆ ಜಾತಿ, ವಿಳಾಸ, ಸಂಬಂಧ ಇತ್ಯಾದಿ ತಪ್ಪುಗಳಿರುತ್ತವೆ. ಬುಕ್ಕಾಪಟ್ಟಣ ಹೋಬಳಿ ಮಟ್ಟದಲ್ಲಿ ಎಲ್ಲಿಯೂ ಆಧಾರ್ ಕಾರ್ಡ್ ನೋಂದಣಿ ಕೇಂದ್ರ ಇರುವುದಿಲ್ಲ. ನಾಡಕಚೇರಿಯಲ್ಲಿ ಅದರ ವ್ಯವಸ್ಥೆಯಿದ್ದರೂ ಬಳಸುತ್ತಿಲ್ಲ.ಯಾವುದೇ ಪ್ರಮಾಣಪತ್ರ ನೀಡಲು ನಿರ್ದಿಷ್ಟ ದಾಖಲಾತಿಗಳನ್ನು ತಿಳಿಸುವಂತೆ ನಾಮಫಲಕಗಳಿಲ್ಲ. ಇದರಿಂದ ರೈತರಿಗೆ ಬಹಳ ತೊಂದರೆಯಾಗುತ್ತಿದೆ.
ಇಡೀ ಹೋಬಳಿಯಲ್ಲಿರುವ ಗ್ರಾಮ ಲೆಕ್ಕಾಧಿಕಾರಿಗಳು ಅವರದೇ ಆದ ಪ್ರತ್ಯೇಕ ಕಾನೂನುಗಳನ್ನು ಮಾಡಿಕೊಂಡು, ಜನತೆಯ ನೋವುಗಳಿಗೆ, ಸಮಸ್ಯೆಗಳಿಗೆ ಸ್ಪಂದಿಸುವ ಮಾನವೀಯತೆಯನ್ನೆ ಕಳೆದುಕೊಂಡಿದ್ದಾರೆ. ಇದರ ಬಗ್ಗೆ ಕೇಳಿದರೆ ಅವರುಗಳು ಯಾರೂ ಕೂಡ ತಲೆ ಕೆಡಿಸಿಕೊಳ್ಳುವುದಿಲ್ಲ.
ಸದಾಕಾಲ ಒಂದೇ ಸಮಸ್ಯೆ ಹೇಳುತ್ತಲೇ ಇರುತ್ತಾರೆ. ಉದಾಹರಣೆ ನೆಟ್‍ವರ್ಕ್ ಇಲ್ಲ, ಸರ್ವರ್ ಸರಿ ಇಲ್ಲ, ದಾಖಲಾತಿ ಸರಿಯಿಲ್ಲ ಇತ್ಯಾದಿ. ಯಾರೊಬ್ಬ ಅಧಿಕಾರಿಯೂ ಕೂಡ ಸರಿಯಾದ ಸಮಯಕ್ಕೆ ಹಾಜರಾಗುವುದಿಲ್ಲ. ಯಾರೊಬ್ಬ ಅಧಿಕಾರಿಗಳಿಗೂ ವಾಸ ಅಥವಾ ಸ್ಥಾನಿಕ ಕೇಂದ್ರ ಇರುವುದಿಲ್ಲ. ಯಾರೊಬ್ಬರೂ ಕೂಡ ರೈತರಿಗೆ ನೇರವಾಗಿ ಸಂಪರ್ಕಕ್ಕೆ ಸರಿಯಾದ ಸಮಯಕ್ಕೆ ಸಿಗುವುದಿಲ್ಲ. ಕೇವಲ ಗ್ರಾಮ ಸಹಾಯಕರ ಮಾತಿನ ಮೇಲೆ ಕೆಲಸ ಕಾರ್ಯ ನಿರ್ವಹಿಸುತ್ತಿರುತ್ತಾರೆ.ಯಾವ ಪ್ರಮಾಣ ಪತ್ರಕ್ಕೆ ಯಾವ ದಾಖಲಾತಿ ಬೇಕೆಂಬುದರ ಬಗ್ಗೆ ಯಾರೂ ಅಧಿಕಾರಿಗಳು ಸರಿಯಾಗಿ ಮಾಹಿತಿ ಕೊಡುವುದಿಲ್ಲ.
ಯಾವ ಕೆಲಸವು ಕೂಡ ಪಾರದರ್ಶಕವಾಗಿಲ್ಲ. ಎಲ್ಲಾ ಹಣದ ಆಮಿಷ. ಮೇಲ್ವರ್ಗದ ಜನರಿಗೆ ಮತ್ತು ರಾಜಕಾರಣಿಗಳಿಗೆ ಆಪ್ತರಿಗೆ ಮಾತ್ರ ಕೆಲಸ ಮಾಡಿಕೊಂಡು ಮುಂದೆ ಬರುತ್ತಾರೆ. ಹೀಗಾದರೆ ಸಾಮಾನ್ಯ ಜನತೆಯ ಗತಿಯೇನು? ಜನಸಾಮಾನ್ಯರಿಗೆ ಸರಿಯಾದ ಸಮಯಕ್ಕೆ ಕೆಲಸ ಆಗುವುದು ಯಾವಾಗ? ಈ ಅಮಾನುಷತೆಗೆ ಕೊನೆಯೆ ಇಲ್ಲವೆ?