ಕಲುಷಿತಗೊಂಡಿರುವ ರಾಜಕಾರಣ ಸ್ವಚ್ಛಗೊಳಿಸಬೇಕಿದೆ

ತುಮಕೂರು:

ಪರ್ಯಾಯ ರಾಜಕೀಯ ಶಕ್ತಿಗಾಗಿ ಕೆಆರ್‍ಎಸ್, ಜೆಡಿಯು, ರೈತಸಂಘ ಸಂಯುಕ್ತ ಹೋರಾಟ

      ಕರ್ನಾಟಕ ರಾಷ್ಟ್ರ ಸಮಿತಿ, ಸಂಯುಕ್ತ ಜನತಾದಳ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಸಂಯುಕ್ತವಾಗಿ ರಾಜ್ಯದಲ್ಲಿ ಪರ್ಯಾಯ ರಾಜಕೀಯ ಶಕ್ತಿಯನ್ನು ಹುಟ್ಟಿ ಹಾಕಲು ಮುಂದಾಗಿದ್ದು, ಪಾರದರ್ಶಕ ರಾಜಕಾರಣಕ್ಕೋಸ್ಕರ ಪ್ರಸ್ತುತ ನಡೆಯುತ್ತಿರುವ ವಿಧಾನಪರಿಷತ್ ಚುನಾವಣೆಯಲ್ಲಿ ಶಿವಮೊಗ್ಗ ಹಾಗೂ ತುಮಕೂರಿನಲ್ಲಿ ಪರಸ್ಪರ ಬೆಂಬಲಿಸಲು ತೀರ್ಮಾನಿಸಿರುವುದಾಗಿ ಜೆಡಿಯು ರಾಜ್ಯಾಧ್ಯಕ್ಷ ಮಹಿಮಾಪಟೇಲ್ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೆಸಿಬಿ(ಜೆಡಿಎಸ್, ಕಾಂಗ್ರೆಸ್, ಬಿಜೆಪಿ) ಪಕ್ಷಗಳ ಸರ್ಕಾರಗಳು ನಡೆಸಿದ ದುರಾಡಳಿತವನ್ನು ಕಂಡು ರಾಜ್ಯದ ಜನತೆ ಭ್ರಮ ನಿರಸನ ಗೊಂಡಿದ್ದಾರೆ. ಕಲುಷಿತಗೊಂಡಿರುವ ರಾಜಕಾರಣವನ್ನು ಸ್ವಚ್ಛಗೊಳಿಸಲು ನಿಜವಾದ ಜನಸೇವೆಯ ಮೌಲ್ಯ ಪರ್ಯಾಯ ರಾಜಕೀಯ ಶಕ್ತಿಯ ಉದಯಕ್ಕಾಗಿ ಕಾಯುತ್ತಿದ್ದಾರೆ.

ಕರ್ನಾಟಕದಲ್ಲಿ ಸ್ವಚ್ಛ, ಪ್ರಾಮಾಣಿಕ, ಜನಪರ ಮೌಲ್ಯಾಧಾರಿತ ರಾಜಕಾರಣ ಕ್ಕಾಗಿ ಜೆ.ಸಿ.ಬಿ (ಜೆಡಿಎಸ್, ಕಾಂಗ್ರೆಸ್, ಬಿಜೆಪಿ) ಪಕ್ಷಗಳನ್ನು ಹೊರತುಪಡಿಸಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುವ ಅನಿವಾರ್ಯತೆ ಎದುರಾಗಿದ್ದು, ಮೊದಲ ಹೆಜ್ಜೆಯಾಗಿ ವಿಧಾನಪರಿಷತ್ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾಧ್ಯಕ್ಷ ಗಜೇಂದ್ರ ಕುಮಾರ್‍ಗೌಡರನ್ನು ಹಾಗೂ ಶಿವಮೊಗ್ಗದಲ್ಲಿ ಜೆಡಿಯು ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲಿಸಲು ಸಂಯುಕ್ತ ಹೋರಾಟ ಮಾಡುತ್ತಿದ್ದೇವೆ.ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದ 224 ಕ್ಚೇತ್ರದಲ್ಲೂ ಸ್ಪರ್ಧಿಸುವುದಾಗಿ ತಿಳಿಸಿದರು.

ಕರ್ನಾಟಕ ರಾಷ್ಟ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಅಕಾಲಿಕ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಲೆ ನಷ್ಟವಾಗಿದೆ. ಸಾವಿರಾರು ಮನೆಗಳು ಕುಸಿದಿವೆ. ಇದರಿಂದಾಗಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಈ ಬಗ್ಗೆ ಗಮನಹರಿಸಿ ತುರ್ತು ಕ್ರಮ ಕೈಗೊಳ್ಳುತ್ತಿಲ್ಲ. ರಾಜ್ಯದಲ್ಲಿ ಜೆಸಿಬಿ ಪಕ್ಷಗಳನ್ನು ಹೊರತುಪಡಿಸಿ ಸಮಾನ ಮನಸ್ಕ ಪಕ್ಷ, ರೈತ ಸಂಘಟನೆಗಳು ಜೊತೆಗೂಡಿದ್ದು ಸಾತ್ವಿಕ, ಮೌಲ್ಯಯುತ ರಾಜಕಾರಣಕ್ಕಾಗಿ ನಮ್ಮ ಜೊತೆ ಇತರೆ ಸಂಘಟನೆಗಳು ಕೈಜೋಡಿಸಬೇಕಿದೆ.

ಪ್ರೊ.ಎಂ.ಡಿ. ನಂಜುಂಡಸ್ವಾಮಿ ಸ್ಥಾಪಿತ ರೈತ ಸಂಘದ ರಾಜ್ಯಾಧ್ಯಕ್ಷ ಲಕ್ಷ್ಮೀ ನಾರಾಯಣಗೌಡ ಮಾತನಾಡಿ ರೈತ ಸಂಘ ಹಿಂದೆ ಮತದಾರರ ವೇದಿಕೆ ಮೂಲಕ ಪರ್ಯಾಯ ರಾಜಕೀಯ ಶಕ್ತಿಗೆ ನಾಂದಿ ಹಾಡಿತ್ತು. ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ನಂತರ ರಾಜಕಾರಣ ವ್ಯವಸ್ಥೆಯ ತೀವ್ರ ಭ್ರಷ್ಟಗೊಂಡಿದ್ದು ಮತ್ತೆ ರೈತ ಸಂಘ ಚುನಾವಣಾ ಅಖಾಡಕ್ಕೆ ಧುಮುಕಲು ತೀರ್ಮಾನಿಸಿದೆ ಎಂದರು.

ವಿಧಾನಪರಿಷತ್‍ಗೆ ಸ್ಪರ್ಧಿಸಿರುವ ಅಭ್ಯರ್ಥಿ ಗಜೇಂದ್ರಕುಮಾರ್‍ಗೌಡ ಮಾತನಾಡಿ ನನ ಸ್ಪರ್ಧೆ ಮೌಲ್ಯಯುತ ರಾಜಕಾರಣದ ಉಳಿವಿಗಾಗಿ ಆಗಿದ್ದು, ಗ್ರಾಪಂ ಮತದಾರರು ಭ್ರಷ್ಟ ಆಡಳಿತ ವ್ಯವಸ್ಥೆಯನ್ನು ಸುಧಾರಿಸಲು ನನಗೆ ಮತಹಾಕಬೇಕೆಂದರು.
ಜೆಡಿಯು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ಎಲ್.ರವಿ, ಮುಖಂಡರಾದ ಧನಂಜಯ, ಲಕ್ಷ್ಮಿ, ನಾರಾಯಣರೆಡ್ಡಿ, ಮಂಜುನಾಥರೆಡ್ಡಿ, ಕಲ್ಪನಾ ಹಾಜರಿದ್ದರು.

ಜನಪ್ರತಿನಿಧಿಗಳನ್ನು ಭ್ರಷ್ಟ ಮಾಡುತ್ತಿರುವ ಎಂಎಲ್ಸಿ ಚುನಾವಣೆ:

ಜಿಲ್ಲೆಯಲ್ಲಿ ನಡೆಯುತ್ತಿರುವ ವಿಧಾನಪರಿಷತ್ ಚುನಾವಣೆಯಲ್ಲಿ ಗ್ರಾಮ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಸದ್ಯ ಮತದಾರರಾಗಿದ್ದು, ಜಿಪಂ ತಾಪಂ ಸದಸ್ಯರನ್ನು ಬಿಟ್ಟು ಚುನಾವಣೆ ನಡೆಸುತ್ತಿರುವುದೇ ಅಕ್ಷಮ್ಯ ಅಪರಾಧ.

ಈ ಚುನಾವಣೆಯಲ್ಲಿಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳು ಜನಪ್ರತಿನಿಧಿಗಳನ್ನು ಭ್ರಷ್ಟರನ್ನಾಗಿಸಲು ಹೊರಟ್ಟಿದ್ದು, ಗ್ರಾಪಂ ಸದಸ್ಯರು ಪಕ್ಷಾತೀತವಾಗಿ ಆಯ್ಕೆಯಾಗಿರುವುದರಿಂದ ಯಾರ ಆಮಿಷಕ್ಕೂ ಒಳಗಾಗದೇ ಜವಾಬ್ದಾರಿಯುತ ಮತದಾನದ ಮೂಲಕ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುವಂತೆ ರವಿಕೃಷ್ಣಾರೆಡ್ಡಿ ಮನವಿ ಮಾಡಿದರು.

ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಜೆಡಿಯು ರಾಜ್ಯ ಅಧ್ಯಕ್ಷ ಮಹಿಮಾಪಟೇಲ್ ಮಾತನಾಡಿದರು. ಕೆಆರ್‍ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ, ರೈತ ಸಂಘದ ಮುಖಂಡ ಲಕ್ಷ್ಮೀನಾರಾಯಣಗೌಡ,ಕೆ.ಜಿ.ಎಲ್, ರವಿ, ವಿಧಾನಪರಿಷತ್ ಕೆಆರ್‍ಎಸ್ ಅಭ್ಯರ್ಥಿ ಗಜೇಂದ್ರಕುಮಾರ್ ಗೌಡ ಇತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap