ಬೆಂಗಳೂರು
ಮಳೆಗಾಲದ ವೇಳೆ ವಿದ್ಯುತ್ ಪೂರೈಕೆಯಿಂದ ಉಂಟಾಗುವ ಅನಾಹುತಗಳನ್ನು ತಪ್ಪಿಸಲು ನಗರದಲ್ಲಿ ಸಂಪೂರ್ಣವಾಗಿ ಭೂಗತವಾಗಿ ವಿದ್ಯುತ್ ಕೇಬಲ್‍ಗಳನ್ನು ಅಳವಡಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ತಿಳಿಸಿದ್ದಾರೆ.
ಕಳೆದ 2 ದಿನಗಳಿಂದ ಮಳೆ ಹಾನಿಗೆ ಒಳಗಾದ ವಿಜಯನಗರ, ಮಲ್ಲೇಶ್ವರಂ, ವೆಸ್ಟ್ ಆಫ್ ಕಾರ್ಡ್ ರಸ್ತೆಗಳಿಗೆ ಭೇಟಿ ನೀಡಿ ಮಳೆ ಅನಾಹುತಗಳ ಬಗ್ಗೆ ಪರಿಶೀಲನೆ ನಡೆಸಿದ ಬೆಂಗಳೂರು ನಗರ ಅಭಿವೃದ್ಧಿ ಸಚಿವರೂ ಆಗಿರುವ ಪರಮೇಶ್ವರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ನಗರದಲ್ಲಿ 5,000 ಕೋಟಿ ರೂಪಾಯಿ ವೆಚ್ಚದಲ್ಲಿ ನಗರದ ವಿದ್ಯುತ್ ವ್ಯವಸ್ಥೆ ಕೇಬಲ್ ಗಳನ್ನು ನೆಲದ ಅಡಿಯಲ್ಲಿ ಅಳವಡಿಸುವ ಕಾರ್ಯ ಈಗಾಗಲೇ ಆರಂಭವಾಗಿದೆ ಎಂದು ತಿಳಿಸಿದರು.
ಬೆಸ್ಕಾಂನ ಸಹಾಯವಾಣಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಉಪ ಮುಖ್ಯಮಂತ್ರಿಗಳು ಬೆಸ್ಕಾಂ ಅಡಿಯಲ್ಲಿ 50 ಸಹಾಯವಾಣಿಗಳು (1912) ಕಾರ್ಯ ನಿರ್ವಹಿಸುತ್ತಿವೆ. ಹೆಚ್ಚುವರಿಯಾಗಿ ಇನ್ನೂ 25 ಸಹಾಯವಾಣಿಗಳು ಸೇರ್ಪಡೆಯಾಗಲಿವೆ ಎಂದು ತಿಳಿಸಿದರು.
ನಗರದಲ್ಲಿ ಮನೆ ಮಾಲೀಕರು ಅಕ್ರಮವಾಗಿ ವಿದ್ಯುತ್‍ನ್ನು ಅಳವಡಿಸಿಕೊಳ್ಳುತ್ತಾರೆ. ಹಾಗಾಗಿ ಅವರ ಮನೆ ಸಮೀಪದಲ್ಲೇ ಕೈಗೆ ಎಟುಕುವಷ್ಟು ವಿದ್ಯುತ್ ತಂತಿಗಳು ಹಾದು ಹೋಗುತ್ತವೆ ಎಂದು ಅವರು ಅಸಮಾದಾನ ವ್ಯಕ್ತಪಡಿಸಿದರು.ನಗರದಲ್ಲಿ ಬಿದ್ದ ಮರಗಳು ಹಾಗೂ ರೆಂಬೆಕೊಂಬೆಗಳು ವಿದ್ಯುತ್ ತಂತಿಗಳನ್ನು ಸಂಜೆಯೊಳಗೆ ತೆರವುಗೊಳಿಸಲಾಗುವುದು. 2 ತಿಂಗಳಲ್ಲಿ ಎಲ್ಲಾ ಕೇಬಲ್ ಲೈನ್ ಗಳನ್ನು ನೆಲದ ಅಡಿಯಲ್ಲಿ ಅಳವಡಿಸಲಾಗುವುದು ಎಂದು ಅವರು ತಿಳಿಸಿದರು.
ಬಿಬಿಎಂಪಿ ಮತ್ತು ಬೆಸ್ಕಾ ಸಮನ್ವಯತೆಯಿಂದ ಕಾರ್ಯ ನಿರ್ವಹಿಸುತ್ತಿವೆ. ಬಿಬಿಎಂಪಿ ಕಂಟ್ರೋಲ್ ರೂಮ್, ಪಾಲಿಕೆ ಆಪ್, ಮತ್ತು ಬೆಸ್ಕಾಂ ಸಹಾಯವಾಣಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ದೂರಿನ ಬಗ್ಗೆ ಪರಿಶೀಲಿಸುವುದಾಗಿ ಅವರು ಭರವಸೆ ನೀಡಿದರು.
500 ಮರಗಳಿಗೆ ಹಾನಿ
ಕಳೆದ ಎರಡು ದಿನದಿಂದ ನಗರದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, 500 ಕ್ಕೂ ಹೆಚ್ಚು ಮರಗಳು ಹಾನಿಯಾಗಿದೆ. 100 ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿದೆ. ರಾಜ್ಯದ ಕೆಲವೆಡೆ 120 ಮೀ.ಮೀ ಗೂ ಅಧಿಕ ಮಳೆಯಾಗಿದೆ. ಬಿರುಗಾಳಿ ಇದ್ದ ಕಾರಣ ಹೆಚ್ಚು ಮರ ನೆಲಕ್ಕುರುಳಿದೆ. ಮರಗಳ ತೆರವು, ವಿದ್ಯುತ್ ಲೈನ್ ಸರಿಪಡಿಸುವುದು ಸೇರಿ ಇತರೆ ಮಳೆ ಹಾನಿ ಸರಿಪಡಿಸಲು ಬಿಬಿಎಂಪಿ, ಬೆಸ್ಕಾಂ ಸೇರಿ ಇತರೆ ಇಲಾಖೆಗಳ 61 ತಂಡಗಳು ಕೆಲಸ ಮಾಡುತ್ತಿವೆ . ಜೊತೆಗೆ ಬಿಬಿಎಂಪಿ ಸಹಾಯ ವಾಣಿ ಸಹಿತ ಇರುವುದರಿಂದ ಸಮಸ್ಯೆಗಳು ಕೂಡಲೇ ತಿಳಿದು ಬರುತ್ತಿದೆ ಎಂದರು.