ತುಮಕೂರು
ಅಸ್ಪೃಶ್ಯತೆಯ ವಿರುದ್ಧ ಹೋರಾಡಿದ ಕ್ರಾಂತಿಕಾರಿ ಸಂತ. ಅವರ ಹೋರಾಟದ ಉದ್ದೇಶಗಳನ್ನು ಅರ್ಥೈಸಿಕೊಂಡು, ಅವರ ಆದರ್ಶಗಳನ್ನು ಪಾಲನೆ ಮಾಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ನಗರದ ಹೋಟೆಲ್ ಟಸೋಸಿಯೇಷನ್ಸ್‍ನ ಸುವರ್ಣ ಸಭಾಂಗಣದಲ್ಲಿ ಶ್ರೀ ಜಗದ್ಗುರು ಶ್ರೀ ನಾರಾಯಣ ಗುರು ಟ್ರಸ್ಟ್‍ನ ವತಿಯಿಂದ ಆಯೋಜಿಸಲಾಗಿದ್ದ ಜಗದ್ಗುರು ಬ್ರಹ್ಮಶ್ರೀ ನಾರಾಯಣಗುರುಗಳ ಜನ್ಮದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಂದಿನ ಕಾಲದಲ್ಲಿದ್ದ ಅಸ್ಪøಶ್ಯತೆಯನ್ನು ಹೋಗಲಾಡಿಸಲು, ದೇವಸ್ಥಾನದಲ್ಲಿ ಪ್ರವೇಶ ಪಡೆಯುವಲ್ಲಿ ಅನೇಕ ಸಹಾಸಗಳನ್ನೇ ಮಾಡಿದ್ದ ಕ್ರಾಂತಿಕಾರಿ ಸಂತರು ಇವರಾಗಿದ್ದು, ಜಾತಿ ಮತ ಎಲ್ಲಾ ಒಂದೇ ಎಂದು ಪ್ರತಿಪಾದಿಸಿದ್ದವರಲ್ಲಿ ಇವರು ಒಬ್ಬರಾಗಿದ್ದರು ಎಂದರು.
ದಕ್ಷಿಣ ಭಾರತಾದ್ಯಂತ ಪ್ರವಾಸ ಮಾಡಿ, ಈ ಜನಾಂಗಕ್ಕೆ ಹೆಚ್ಚಿನ ಆದ್ಯತೆ ನೀಡಿ, ಸಮಾಜಕ್ಕೆ ಗುರಿ, ಧ್ಯೇಯಗಳನ್ನು ತಿಳಿಸಿ ಅವರು ಸಮಾಜದಲ್ಲಿ ನಾವೂ ಇದ್ದೇವೆ ಎಂಬುದನ್ನು ತೋರಿಸಿಕೊಟ್ಟ ಮಹಾನ್ ವ್ಯಕ್ತಿ. ಅಂತಹವರ ಜನ್ಮದಿನಾಚರಣೆಯನ್ನು ಮಾಡುವುದು ನಮ್ಮ ಕರ್ತವ್ಯ. ಅವರ ತೋರಿಸಿಕೊಟ್ಟಂತ ಹಾದಿಯಲ್ಲಿ ಸಾಗುವ ಮೂಲಕ ಸಮಾಜದ ಗೌರವವನ್ನು ಹೆಚ್ಚಿಸಿಕೊಳ್ಳಿ ಎಂದು ಸಲಹೆ ನೀಡಿದರು.
ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ನಾರಾಯಣ ಗುರುಗಳು ಎಲ್ಲರಂತೆ ಕಾವಿ ಧರಿಸಿದೆ, ಬಿಳಿಯ ದ್ಯೋತಿ ಧರಿಸಿ ಭಾರತಾಧ್ಯಂತ ಸಂಚರಿಸಿ ಅಸ್ಪøಶ್ಯತೆ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು. ಅವರು ವಿಶ್ವಮಾನವರಾಗಿದ್ದು, ಅವರ ಜನ್ಮದಿನಾಚರಣೆ ಆಚರಿಸುವುದನ್ನು ಬಂಗಾರಪ್ಪ ಅವರ ಕಾಲದಿಂದ ಪ್ರಾರಂಭಮಾಡಲಾಗಿದೆ. ಅಂದಿನಿಂದ ಇಂದಿನವರೆಗೆ ನಾರಾಯಣ ಗುರುಗಳ ಜನ್ಮದಿನಾಚರಣೆ ಆಚರಿಸುತ್ತಾ ಬರಲಾಗುತ್ತಿದೆ ಎಂದರಲ್ಲದೆ, ಸಮಾಜದ ಅಭಿವೃದ್ಧಿಗೆ ಸರ್ಕಾರ ಎಂದಿಗೂ ಸಿದ್ದವಿದೆ ಎಂದು ತಿಳಿಸಿದರು.
ಇತ್ತೀಚೆಗೆ ಕೈಗಾರಿಕಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಪ್ರಶಸ್ತಿ ಪಡೆದ ಮೈಸೂರು ಡ್ರೈರ್ ಟೆಕ್ ನ ವ್ಯವಸ್ಥಾಪಕ ನಿರ್ದೇಶಕ ಸದಾಶಿವ ಆರ್ ಅಮಿನ್ ಮಾತನಾಡಿ, ಸಮಾಜದಲ್ಲಿ ಹುಟ್ಟಿದ ಮೇಲೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು. ಇಂದು ಕೇವಲ ವಿದ್ಯಾಭ್ಯಾಸ ಪಡೆದು ಒಳ್ಳೆಯ ಉದ್ಯೋಗ ಮಾಡಿ ಶ್ರೀಮಂತನಾಗುತ್ತೇನೆ ಎಂದರೆ ಸಾಲದು ಜೊತೆಗೆ ಸಮಾಜದ ಏಳ್ಗೆಗೆ ಪ್ರಯತ್ನ ಮಾಡಬೇಕು. ಕೇವಲ ನಾರಾಯಣಗುರುಗಳ ಬಗ್ಗೆ ಮಾತನಾಡುತ್ತೇವೆ ಹೊರತು ಅವರ ಆದರ್ಶಗಳನ್ನು ಪಾಲಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ನಾರಾಯಣ ಗುರುಗಳು ಕೇವಲ ಒಂದು ಜಾತಿಗೆ ಸೀಮಿತವಾಗಿಲ್ಲ. ಅವರು ಎಲ್ಲಾ ಜಾತಿ ಒಂದೇ ಎಂದು ಪ್ರತಿಪಾದಿಸಿದ್ದರು. ಆದರೆ ಇಂದು ರಾಜಕೀಯ ಕಾರಣಗಳಿಗೆ ಜಾತಿ, ಅಸ್ಪøಶ್ಯತೆ ಎಂಬುದು ಹೆಚ್ಚಾಗುತ್ತಿದೆ. ಜಾತೀಯತೆ ಬದಿಗೊತ್ತಿ ಸಮಾಜದ ಎಲ್ಲರೂ ಒಗ್ಗೂಡಿ ಕಾರ್ಯಕ್ರಮ ಮಾಡುವಂತಾಗಬೇಕು. ಇಂತಹ ಸಮಾರಂಭಗಳಿಗೆ ಯುವಕರು ಹೆಚ್ಚಾಗಿ ಭಾಗವಹಿಸಬೇಕು. ಯುವ ಪೀಳಿಗೆಯಿಂದ ಸಮಾಜದ ಅಭಿವೃದ್ಧಯಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ಶ್ರೀ ನಾರಾಯಣ ಗುರು ಟ್ರಸ್ಟ್‍ನ ಗೌರವಾಧ್ಯಕ್ಷ ಬಿ.ಕೆ.ಸುವರ್ಣ ಅವರು ಮಾತನಾಡಿದರು. ಪರೀಕ್ಷಾಂಗ ಉಪಕುಸಚಿವ ಡಾ.ರಮೇಶ್ ಸಾಲಿಯಾನ, ಟ್ರಸ್ಟ್‍ನ ಅಧ್ಯಕ್ಷ ಮಾಧವನ್, ಕಾರ್ಯದರ್ಶಿ ಬಿ.ಪಿ.ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ