ತುರುವೇಕೆರೆ
ಕಾರ್ಮಿಕರ ಕಾಯ್ದೆ, ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಸಂಘ, ಸಿಐಟಿಯು, ಕ.ರ.ವೇ, ಕಾಂಗ್ರೆಸ್ ಸೇರಿದಂತೆ ಹಲವು ಸಂಘಟನೆಗಳು ಕೆರೆ ನೀಡಿದ್ದ ಬಂದ್‍ಗೆ ತುರುವೇಕೆರೆ ಪಟ್ಟಣದ ಬಂದ್ ಭಾಗಶಃ ಯಶಸ್ವಿಯಾಯಿತು.
ಪಟ್ಟಣದಲ್ಲಿ ಬೆಳಗ್ಗೆಯಿಂದಲೇ ಎಲ್ಲ ಬಾರ್, ರೆಸ್ಟೋರೆಂಟ್, ಹೋಟಲ್, ತರಕಾರಿ, ಹಣ್ಣು, ಬೀದಿ ಬದಿ ವ್ಯಾಪಾರಿಗಳು, ದಿನಸಿ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತರಾಗಿ ಮುಚ್ಚಿದ್ದರು. ಮೆಡಿಕಲ್ ಶಾಪ್, ಆಸ್ಪತ್ರೆ, ಹಾಲಿನ ಅಂಗಡಿ ಎಂದಿನಂತೆ ತೆರೆದಿದ್ದವು. ಸರ್ಕಾರಿ ಸಾರಿಗೆ ಬಸ್ ಸಂಚಾರ ವಿರಳವಾಗಿತ್ತು. ಖಾಸಗಿ ವಾಹನ ಸವಾರರು ಎಂದಿನಂತೆ ಸಂಚಾರ ನಡೆಸಿದರು. ಅಂಚೆ ಕಚೆರಿ, ಸರ್ಕಾರಿ ಕಚೆರಿ, ಬ್ಯಾಂಕ್‍ಗಳು ಎಂದಿನಂತೆ ಕೆಲಸ ನಿರ್ವಹಿಸಿದವು. ಬೆಳಗ್ಗೆಯಿಂದಲೇ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಶ್ರೀನಿವಾಸ್‍ಗೌಡ ನೇತೃತ್ವದಲ್ಲಿ ಹಲವು ಸಂಘಟನೆಯ ನೂರಾರು ಕಾರ್ಯಕರ್ತರು ಪಟ್ಟಣದಲ್ಲಿ ಜಮಾವಣೆಗೊಂಡು ಬೈಕ್ ರ್ಯಾಲಿ ಮೂಲಕ ಪಟ್ಟಣದಲ್ಲಿ ತೆರೆದಿದ್ದ ಪೆಟೋಲ್ ಬಂಕ್‍ಗಳನ್ನು ಬಲವಂತವಾಗಿ ಮುಚ್ಚಿಸಿದರೂ, ತದನಂತರ ಪೋಲೀಸರು ಮಧ್ಯೆ ಪ್ರವೇಶಿಸಿ ಪೆಟ್ರೋಲ್ ಹಾಕಲು ಅವಕಾಶ ಮಾಡಿಕೊಟ್ಟರು. ಕೆಲವು ಬಂಕ್‍ಗÀಳು ಸಂಜೆವರೆಗೆ ಮುಚ್ಚಿದ್ದವು.
ಮಧ್ಯಾಹ್ನ ಪಟ್ಟಣದಲ್ಲಿ ಹಲವು ಸಂಘಟನೆಗಳು ಸರ್ಕಾರದ ವಿರುದ್ದ ಧಿಕ್ಕಾರ ಕೂಗುತ್ತಾ ಸಂಜೆ 4 ಗಂಟೆಗೆ ಬಾಣಸಂದ್ರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು. ತಾಲ್ಲೂಕು ರೈತಸಂಘ, ಕಾಂಗ್ರೆಸ್ ಹಾಗೂ ಸಿಐಟಿಯುನ ಮುಖಂಡರುಗಳು ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಜನ ವಿರೋಧಿ ಸುಗ್ರೀವಾಜ್ಞೆ ನೂತನ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಗೌರವಾಧ್ಯಕ್ಷ ಅಸ್ಲಾಂಪಾಷ, ಅಧ್ಯಕ್ಷ ಶ್ರೀನಿವಾಸ್‍ಗೌಡ, ಚಂದ್ರಶೇಖರ್, ರಹಮತ್, ತಾಳ್ಕೆರೆ ನಾಗೇಂದ್ರ, ಜಾಫರ್, ನಾಗಣ್ಣ, ಕಾಂಗ್ರೆಸ್‍ನ ಎಐಸಿಸಿ ಸದಸ್ಯ ಶ್ರೀಕಂಠೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಮಾಜಿ ಜಿ.ಪಂ.ಸದಸ್ಯ ಎನ್.ಆರ್.ಜಯರಾಮ್, ಮುಖಂಡರಾದ ಅರಳಿಕೆರೆ ರವಿಕುಮಾರ್, ಕೊಳಾಲ ನಾಗರಾಜು, ಶ್ರೀನಿವಾಸ್, ಸ್ವರ್ಣಕುಮಾರ್, ಸಿಐಟಿಯು ಕಾರ್ಯದರ್ಶಿ ಸತೀಶ್, ಆಟೋ ಚಾಲಕರ ಸಂಘದ ಅಧ್ಯಕ್ಷ ಗಂಗಣ್ಣ, ಕರವೇ ಅಧ್ಯಕ್ಷ ಉಪೇಂದ್ರಕುಮಾರ್, ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಾರುತಿ, ಪಂ.ಕಾ.ಸ. ಅಧ್ಯಕ್ಷ ಎಚ್.ಎನ್.ವೆಂಕಟೇಶ್, ದಲಿತ ಸಂಘಟನೆ ಅಧ್ಯಕ್ಷ ಗೋವಿಂದರಾಜು, ಡಾ.ಚಂದ್ರಯ್ಯ, ಗ್ರಾ.ಪಂ. ನೌ. ಸಂ. ಅಧ್ಯಕ್ಷ ರಮೇಶ್ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
