ದಾವಣಗೆರೆಯಲ್ಲಿ ನಾಟಕ ಅಕಾಡೆಮಿ ಸ್ಥಾಪಿಸಿ

ದಾವಣಗೆರೆ:

        ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಲ್ಲಿ ನಾಟಕ ಅಕಾಡೆಮಿ ಸ್ಥಾಪಿಸುವತ್ತ ಸರ್ಕಾರ ಗಮನ ಹರಿಸಬೇಕೆಂದು ಕರ್ನಾಟಕ ರಂಗ ಸಮಾಜದ ಸದಸ್ಯ ಮಲ್ಲಿಕಾರ್ಜುನ ಕೊಡಕೋಳ ಆಗ್ರಹಿಸಿದರು.ನಗರದ ಎವಿಕೆ ಕಾಲೇಜಿನ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಮುದಾಯ ಭವನದಲ್ಲಿ ಬುಧವಾರ ಭೂಮಿಕಾ ವನಿತಾ ರಂಗವೇದಿಕೆ, ವನಿತಾ ಸಮಾಜ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

         ಪ್ರಸ್ತುತ ಸಮಾಜದಲ್ಲಿ ಸಾಂಸ್ಕತಿಕ ಅಧಃಪತನ ಕಾಣುತ್ತಿದೆ. ಆದ್ದರಿಂದ ಜನರನ್ನು ಸಾಂಸ್ಕತಿಕವಾಗಿ ಉಜ್ವಲಗೊಳಿಸಲು ಕಲಬುರಗಿ- ರಾಯಚೂರಿನಲ್ಲಿ ಉರ್ದು ಅಕಾಡೆಮಿ, ಧಾರವಾಡದಲ್ಲಿ ಸಂಗೀತ, ಮೈಸೂರಿನಲ್ಲಿ ಸಾಹಿತ್ಯ, ದಾವಣಗೆರೆಯಲ್ಲಿ ನಾಟಕ ಅಕಾಡೆಮಿ ಸ್ಥಾಪಿಸಬೇಕೆಂದು ಒತ್ತಾಯಿಸಿದರು.

         ಸುಮಾರು 150 ವರ್ಷಗಳ ಇತಿಹಾಸವಿರುವ ವೃತ್ತಿ ರಂಗಭೂಮಿಯು ಅನೇಕ ಅನನ್ಯತೆಯನ್ನು ಹೊಂದಿದೆ. ವೃತ್ತಿ ರಂಗಭೂಮಿ ಅನೇಕ ಕೊಡುಗೆಗಳನ್ನು ನೀಡಿದೆ. ಭರತನಾಟ್ಯದಂತ ಕಲೆಯನ್ನು ಜನರ ಬಳಿ ತಂದಿದೆ. ಹೀಗಾಗಿ ಇದೊಂದು ಬಹುದೊಡ್ಡ ಪಾಠ ಶಾಲೆವಿದ್ದಂತೆ ಎಂದು ವಿಶ್ಲೇಷಿಸಿದರು.

        ವೃತ್ತಿ ರಂಗಭೂಮಿಗೆ ಜೀವನ ರೂಪಿಸುವ ಶಕ್ತಿ ಇದೆ. ಇಲ್ಲಿ ಬದುಕು ರೂಪಿಸಿಕೊಳ್ಳಬಹುದಾದ ಸಂಗೀತ, ಸಾಹಿತ್ಯ, ಕರಕುಶಲ ಸೇರಿ ಬದುಕು ರೂಪಿಸಿಕೊಳ್ಳುವ ಅನೇಕ ಪ್ರಕಾರಗಳ ಕಲೆಗಳಿವೆ. ರಂಗಭೂಮಿ ಎಂಬುದು ಕೇವಲ ಒಂದು ಪದವಲ್ಲ. ಇದೊಂದು ತಾಯ್ತನದ ಸಂಕೇತ. ಅಂತಃಕರಣ ಪ್ರತಿರೂಪವಾಗಿದೆ ಎಂದರು.

        ವೃತ್ತಿ ರಂಗಭೂಮಿಯು ಪರಂಪರೆ, ಪ್ರಗತಿ, ಸಮಕಾಲೀನ ಪ್ರಜ್ಞೆ ಒಳಗೊಂಡಿದೆ. ಪರಂಪರೆ ಪ್ರಜ್ಞೆಯು ಬದುಕು ಕಲಿಸಿದರೆ, ಪ್ರಗತಿ ಪ್ರಜ್ಞೆಯು ಪ್ರಗತಿಪರರಾಗಿ ಬೆಳೆಯಲು ಪೂರಕವಾದ ವಾತಾವರಣ ಸೃಷ್ಟಿಸಲಿದೆ. ಸಮಕಾಲೀನ ಪ್ರಜ್ಞೆಯು ಬದುಕನ್ನು ರೂಪಿಸಿಕೊಂಡು ಚಲನಶೀಲರಾಗಲು ನೆರವಾಗುತ್ತದೆ ಎಂದು ಬಣ್ಣಿಸಿದರು.

       ಇತ್ತೀಚಿನ ದಿನಗಳಲ್ಲಿ ಜನರು ಸಾಂಸ್ಕತಿಕ ಪ್ರಜ್ಞೆಯಿಂದ ವಿಮುಖರಾಗುತ್ತಿದ್ದಾರೆ. ವಿಸ್ಮಯದಿಂದ ಪರಂಪರೆ ಮರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ವೃತ್ತಿ ರಂಗಭೂಮಿ, ತತ್ವಪದಕಾರರು ಹಾಗೂ ವೃತ್ತಿ ರಂಗಭೂಮಿಗೆ ಕೊಡುಗೆ ನೀಡಿದ ಮಹಿಳೆಯರ ಬಗ್ಗೆ ಚರಿತ್ರೆಕಾರರ ಅವಜ್ಞೆಗೆ ಒಳಗಾಗಿವೆ. ಕೌಜಲಗಿ ನಿಂಗವ್ವ, ದೇವಸಾನಿ ಅವರ ಕೊಡುಗೆ ವೃತ್ತಿ ರಂಗಭೂಮಿಗೆ ಅಪಾರ ಇದೆ. ಆದರೆ, ಇವರ ಬಗ್ಗೆ ಯಾವ ಇತಿಹಾಸಕಾರರು ದಾಖಲಿಲ್ಲ ಎಂದರು.

      ರಾಜ್ಯದಲ್ಲಿ ಸಾವಿರ ಆಂಗ್ಲಮಾಧ್ಯಮ ಶಾಲೆ ಆರಂಭಿಸಬೇಕೆಂಬ ಚಿಂತನೆ ನಡೆಯುತ್ತಿರುವುದು ಅತ್ಯಂತ ಅವೈಜ್ಞಾನಿಕವಾಗಿದೆ. ಒಂದನೇ ತರಗತಿ ಮಗುವಿಗೆ ಇಂಗ್ಲಿಷ್‍ನಲ್ಲಿ ಗಣಿತ, ವಿಜ್ಞಾನ ಪಠ್ಯ ಎಷ್ಟರ ಮಟ್ಟಿಗೆ ಅರ್ಥೈಸಿಕೊಳ್ಳಲು ಸಾಧ್ಯ ಎಂಬುದನ್ನು ಮೊದಲು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.ಕಾಲೇಜಿನ ಪ್ರಾಚಾರ್ಯ ಪಿ.ಎಸ್. ಶಿವಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಡಾ.ಅನುರಾಧಾ ಬಕ್ಕಪ್ಪ, ಬಿ.ಟಿ. ಜಾಹ್ನವಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾವ್ಯ ಎಂ ನಿರೂಪಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link