ತೋವಿನಕೆರೆ
ಬಸ್ ನಿಲ್ದಾಣದಲ್ಲಿ ದಿನದ 24 ಗಂಟೆ ಕುಡಿದು ವ್ಯಾಪಾರಿಗಳು ಮತ್ತು ಪ್ರಯಾಣಿಕರಿಗೆ ತಲೆ ನೋವಾಗಿದ್ದ ನಟರಾಜು ಈಗ ಉತ್ತಮ ತರಕಾರಿ ವ್ಯಾಪಾರಿಯಾಗಿ ಜನರ ಗಮನ ಸೆಳೆದಿದ್ದಾರೆ.
ಹನ್ನೆರಡು ವರ್ಷಗಳ ಕಾಲ ದಿನಕ್ಕೆ ಹತ್ತು ಸಲ ಮದ್ಯದ ಅಂಗಡಿಗಳಿಗೆ ಹೋಗುತ್ತಿದ್ದವರು ಕಳೆದ ಆರು ವರ್ಷಗಳಿಂದ ಅತ್ತ ತಿರುಗಿ ನೋಡದೇ ಬಸ್ ನಿಲ್ದಾಣದಲ್ಲಿ ತರಕಾರಿಗಳ ಅಂಗಡಿಯನ್ನು ಇಟ್ಟು ಕೊಂಡು ಜೀವನ ನಡೆಸುತ್ತಿರುವುದು ಕಂಡು ಬಂದಿದೆ.
ತೋವಿನಕೆರೆ ಅಂಬೇಡ್ಕರ್ ಕಾಲನಿಯ ನಟರಾಜು ಬಸ್ ನಿಲ್ದಾಣದಲ್ಲಿನ ಅಂಗಡಿಗಳಿಂದ ಗ್ರಾಹಕರು ಕೊಂಡ ಸಾಮಾನುಗಳನ್ನು ಬಸ್‍ಗೆ ಹಾಕುವುದು. ಸರಕು ವಾಹನಗಳಲ್ಲಿ ಬಂದ ವಸ್ತುಗಳನ್ನು ಇಳಿಸಿ ಕೊಡುವ ಮುಖ್ಯ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು. ಪ್ರತಿದಿನ ನೂರಾರು ರೂ.ಗಳನ್ನು ಸಂಪಾದನೆ ಮಾಡಿಕೊಂಡು ಇದ್ದರು. ಮದುವೆಯೂ ಆಯಿತು. ಕೆಲವು ವರ್ಷಗಳ ನಂತರ ಸ್ನೇಹಿತರ ಸಹವಾಸದಿಂದ ಕುಡಿಯುವುದನ್ನು ಕಲಿತರು. ಕೆಲಸದಿಂದ ಎಷ್ಟೇ ಹಣ ಬಂದರೂ ಅದನ್ನು ಪೂರ್ತಿಯಾಗಿ ಕುಡಿಯುವುದಕ್ಕೆ ಖರ್ಚು ಮಾಡುತ್ತಿದ್ಧರು.
ಐದು ನೂರುಗಳು ಬಂದರೂ ಮನೆಗೆ ಹಣ ನೀಡದೆ ಕುಡಿಯುವುದಕ್ಕೆ ಖರ್ಚು ಮಾಡಿದ ಸಂದರ್ಭವು ಇತ್ತು. ಕೆಲಸ ಇಲ್ಲದ ಸಂದರ್ಭದಲ್ಲಿ ಮನೆಯಲ್ಲಿನ ಸಾಮಾನುಗಳನ್ನು ಪತ್ನಿಗೆ ಗೊತ್ತಿಲ್ಲದಂತೆ ಮಾರಿ ಕುಡಿಯುತ್ತಿದ್ಧರು. ಪರಿಚಯಸ್ಥರ ಕೈಕಾಲು ಹಿಡಿದುಕೊಂಡು ಕುಡಿಯುವುದಕ್ಕೆ ಹಣ ಬೇಡುವುದು ಸಾಮನ್ಯವಾಗಿತ್ತು. ಹನ್ನೆರಡು ವರ್ಷಗಳ ಕಾಲ ಬಸ್ ನಿಲ್ದಾಣದಲ್ಲ್ಲಿನ ಅಂಗಡಿಯವರಿಗೆ ದೊಡ್ಡ ಸಮಸ್ಯೆಯಾಗಿದ್ದರು. ಪ್ರತಿಯೊಬ್ಬರು ಛೀ ಥೂ ಎಂದು ಉಗಿಯುತ್ತಿದ್ಧರು.
ಹಲವು ವರ್ಷಗಳ ಕುಡಿತದ ನಂತರ ಹೆಂಡತಿಯ ಬುದ್ಧಿಮಾತುಗಳು, ತಾಯಿಯ ಕಣ್ಣೀರು, ಮಗಳ ನಗುವಿನ ಮುಖ ನಟರಾಜವಿನ ಬದುಕಿನಲ್ಲಿ ಬದಲಾವಣೆಗೆ ಕಾರಣವಾಯಿತು. ಕುಟುಂಬದಲ್ಲಿ ಆಸಕ್ತಿ ಮೂಡಿಸಿತು. ಕುಡಿಯಲು ಹೋದರೆ ಕಣ್ಮುಂದೆ ಇವರುಗಳೇ ಕಾಣಲಾರಂಬಿಸಿದರು. ಮಗಳ ಹಾಗೂ ಹೆಂಡತಿಯ ಜೊತೆ ಕಾಲ ಕಳೆಯಲು ಮನಸ್ಸು ಸೆಳೆಯುತ್ತಿತ್ತು.
ದುಡಿದು ಹಣ ತಂದು ಸಂಸಾರ ನಿರ್ವಿಹಿಸ ಬೇಕು ಎಂಬ ಹಂಬಲ ಹೆಚ್ಚಾಯಿತು. ಮೊದಲು ಬಸ್ ನಿಲ್ದಾಣದ ಕೆಲಸ ಬಿಟ್ಟೆ, ಅಕ್ಕಪಕ್ಕದ ಹಳ್ಳಿಗಳಲ್ಲಿ ಪಾತ್ರೆ, ಸಿದ್ಧ ಪಡಿಸಿದ ಬಟ್ಟೆಗಳನ್ನು ಸೈಕಲ್ ಮೇಲೆ ತೆಗೆದುಕೊಂಡು ಮಾರಲು ಪ್ರಾರಂಭಿಸಿದೆ. ಹಳ್ಳಿಗಳ ಕುಟುಂಬಗಳನ್ನು ನೋಡಿದಾಗ ತಪ್ಪಿನ ಅರಿವಾಯಿತು ಎನ್ನುವಾಗ ನಟರಾಜುವಿನ ಕಣ್ಣಿನಲ್ಲಿ ನೀರು ಕಂಡು ಬಂತು.
ತೋವಿನಕೆರೆ ಅಂಬೇಡ್ಕರ್ ನಗರಕ್ಕೆ ಹೊಂದಿಕೊಂಡತೆ ಮಧುಗಿರಿ ರಸ್ತೆಯಲ್ಲಿ ತರಕಾರಿ ಅಂಗಡಿಯಿಟ್ಟು ಕೊಂಡು ಪ್ರತಿದಿನ ಸಾವಿರಾರು ರೂ.ಗಳ ವ್ಯಾಪಾರ ಮಾಡುತ್ತಿದ್ದಾರೆ. ತಾಯಿ ನರಸಮ್ಮ, ಪತ್ನಿಲೋಕಮ್ಮ, ತಂದೆಯ ಹೊಸ ಜೀವನ ಪ್ರಾರಂಭಕ್ಕೆ ಕಾರಣಳಾದ 9 ನೇ ತರಗತಿ ಓದುತ್ತಿರುವ ಟಿ.ಎನ್.ಅಂಜಲಿ ನಟರಾಜುವಿನ ತರಕಾರಿ ವ್ಯಾಪಾರಕ್ಕೆ ಪೂರಕವಾಗಿ ತೊಡಗಿಸಿ ಕೊಂಡಿದ್ಧಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
