ಹರಪನಹಳ್ಳಿ:

ವಿವಿಧೆತೆಯಲ್ಲಿ ಏಕತೆ ಮೈಗೂಡಿಸಿಕೊಂಡಿರುವ ಭಾರತದಲ್ಲಿ ಸಂವಿಧಾನಕ್ಕೆ ಅತ್ಯಂತ ಪವಿತ್ರ ಸ್ಥಾನವಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಉಂಡಿ ಮಂಜುಳಾ ಶಿವಪ್ಪ ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದ ವಕೀಲರ ಸಂಘದ ಕಚೇರಿಯಲ್ಲಿ ಮಂಗಳವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ `ಸಂವಿಧಾನ ದಿನಾಚರಣೆ ಕುರಿತು ಅರಿವು ಕಾರ್ಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವದಲ್ಲಿಯೇ ಬೃಹತ್ ಸಂವಿಧಾನ ಎಂದು ಖ್ಯಾತಿ ಪಡೆದಿರುವ ಭಾರತದ ಸಂವಿಧಾನ ದೇಶದ ಪವಿತ್ರ ಗ್ರಂಥ ಎನಿಸಿಕೊಂಡಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಯಾದ ಸಂವಿಧಾನವನ್ನು ದೇಶಕ್ಕೆ ಅರ್ಪಣೆ ಮಾಡಿದ ದಿನವನ್ನು `ನ್ಯಾಶನಲ್ ಲಾ ಡೇ’ ಎಂದೂ ಕರೆಯಲಾಗುತ್ತಿದೆ ಎಂದರು.
ಸಂವಿಧಾನದ ಮೂಲ ಆಶಯವನ್ನು ಪ್ರಸ್ತಾವನೆಯಲ್ಲೇ ವಿವರಿಸಲಾಗಿದೆ. ಮೂಲಭೂತ ಹಕ್ಕು ನೀಡಿ ಸಮಾನತೆ, ಸಾಮಾಜಿಕ ನ್ಯಾಯ ಎತ್ತಿ ಹಿಡಿಯಲಾಗಿದೆ. ಬೇರೆಯವರ ಹಕ್ಕು ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು. ಎಲ್ಲ ಧರ್ಮಗಳು ಗೌರವಿಸುವ ಹಕ್ಕು ಸಂವಿಧಾನದಲ್ಲಿದೆ. ಎಲ್ಲರ ನಂಬಿಕೆಗಳಿಗೂ ಗೌರವವಿದೆ. ರಾಷ್ಟ್ರೀಯ ಧ್ವಜ ಗೌರವಿಸುವುದು, ರಾಷ್ಟ್ರ ರಕ್ಷಣೆ ಪ್ರತಿಯೊಬ್ಬರ ಹೊಣೆ ಆಗಿದೆ. ಇಂತಹ ಸಂವಿಧಾನ ಬೇರೆ ಯಾವ ರಾಷ್ಟ್ರದಲ್ಲೂ ಕಾಣಲೂ ಸಾಧ್ಯವಿಲ್ಲ ಎಂದು ತಿಳಿಸಿದರು.
ಕಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಜಿ.ಶೋಭಾ ಮಾತನಾಡಿ, ಸಂವಿಧಾನದ ಆಶಯಗಳನ್ನು ಪಾಲಿಸಿದ್ದೆ ಆದಲ್ಲಿ ಕಾನೂನು ಮೊರೆ ಹೋಗುವ ಅಗತ್ಯವಿಲ್ಲ. ಪ್ರೇಮಿಗಳ ದಿನ, ಮಕ್ಕಳ ದಿನ ಸೇರಿದಂತೆ ಅನೇಕ ದಿನಾಚರಣೆ ಸಂಭ್ರಮದಿಂದ ಆಚರಿಸುವ ಜನ ದೇಶದ ಶ್ರೇಷ್ಠ ಗ್ರಂಥ ಸಂವಿಧಾನ ದಿನವನ್ನು ಸಂಭ್ರಮದಿಂದ ಆಚರಿಸದಿರುವುದು ವಿಷಾದ ಸಂಗತಿ ಎಂದರು.
ಉಪನ್ಯಾಸ ನೀಡಿದ ವಕೀಲ ಪಿ.ಜಗದೀಶಗೌಡ ಮಾತನಾಡಿ, ರಾಷ್ಟ್ರದ ಮೂಲಭೂತ ಕಾನೂನು ಸಂವಿಧಾನವಾಗಿದ್ದು. ಆಡಳಿತ ವ್ಯವಸ್ಥೆಯ ಚೌಕಟ್ಟಿನಲ್ಲಿ ನೆಮ್ಮದಿಯ ಜೀವನ ನಡೆಸಲು ಸಂವಿಧಾನ ಬಹುಮುಖ್ಯವಾಗಿದೆ. ನಾವೇಲ್ಲರೂ ಸಂವಿಧಾನದಲ್ಲಿರುವ ಹಕ್ಕು ಮತ್ತು ಕರ್ತವ್ಯಗಳನ್ನು ಪಾಲನೆ ಮಾಡುವ ಮೂಲಕ ಸಂವಿಧಾನಕ್ಕೆ ಗೌರವ ನೀಡಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಎ.ಕೆ.ಅಜ್ಜಪ್ಪ ಅಧ್ಯಕ್ಷತೆ ವಹಿಸಿದ್ದರು. ವಕೀಲರಾದ ಬಿ. ರೇವನಗೌಡ, ಇದ್ಲಿ ರಾಮಪ್ಪ, ಮೃತ್ಯುಂಜಯ, ಗೋಣಿಬಸಪ್ಪ, ಹಲುವಾಗಲು ಪಿಎಸ್ಐ ಪಿ.ಎನ್.ತಿಪ್ಪೇಸ್ವಾಮಿ ಮಾತನಾಡಿದರು.ವಕೀಲರಾದ ಕೋಡಿಹಳ್ಳಿ ಪ್ರಕಾಶ್, ಬಾಗಳಿ ಮಂಜುನಾಥ, ವಾಮದೇವ ಕಮ್ಮತ್ತಹಳ್ಳಿ, ಕೆ.ಪ್ರಕಾಶ್, ಮುತ್ತಿಗಿ ಮಂಜುನಾಥ, ರೇವಣಸಿದ್ದಪ್ಪ, ಬೇಲೂರು ಸಿದ್ದೇಶ್, ವಿ.ಜಿ.ಪ್ರಕಾಶಗೌಡ ಇವರೂ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
