ನಟೋರಿಯಸ್ ಮನೆಗಳ್ಳರ ಬಂಧನ..!

ಬೆಂಗಳೂರು

     ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕ್ಷಣಮಾತ್ರದಲ್ಲಿ ಕಳವು ಮಾಡುತ್ತಿದ್ದ ನಟೋರಿಯಸ್ ಮನೆಗಳ್ಳ ಜಪಾನ್ ರಾಜನ ಗ್ಯಾಂಗ್‌ನ ಐವರನ್ನು ತಲಘಟ್ಟಪುರ ಪೊಲೀಸರು ಬಂಧಿಸಿ 20 ಲಕ್ಷಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

     ಜಪಾನ್ ರಾಜನ ಗ್ಯಾಂಗ್‌ನ ಪ್ರಕಾಶ್‌ನಗರದ ಗೋಪಿ(42) ಮಾಗಡಿ ರಸ್ತೆಯ ಭುವನೇಶ್ವರಿನಗರದ ಡೇವಿಡ್ ಅಲಿಯಾಸ್ ಫ್ರಾನ್ಸಿಸ್ (35)ಬನಶಂಕರಿಯ ಅರ್ಜುನ್ ಅಲಿಯಾಸ್ ಕಾರ್ತಿಕ್(23) ಸರಬಂಡೇಪಾಳ್ಯದ ಶಿವಾನಂದ್ ಅಲಿಯಾಸ್ ಸೋಮ(33) ಬಂಧಿತ ಆರೋಪಿಗಳಾಗಿದ್ದಾರೆ.

    ಜೈಲಿನಲ್ಲಿದ್ದುಕೊಂಡೇ ಗ್ಯಾಂಗ್ ಮೂಲಕ ಮನೆಗಳವು ಮಾಡಿಸುತ್ತಿದ್ದ ಬಿಳೇಕಹಳ್ಳಿಯ ದೇವರಚಿಕ್ಕನಹಳ್ಳಿಯ ರಾಜ ಅಲಿಯಾಸ್ ಜಪಾನ್ ರಾಜ(41)ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ತಂಡ ಕಟ್ಟಿಕೊಂಡು ಮನೆಕಳವು ಮಾಡುತ್ತಿರುವುದನ್ನು ಬಾಯ್ಬಿಟ್ಟಿದ್ದಾನೆ.ಬಂಧಿತರಿಂದ 20 ಲಕ್ಷ ರೂ. ಬೆಲೆಬಾಳುವ 501 ಗ್ರಾಂ ಚಿನ್ನಾಭರಣ,4 ಕೆಜಿ 519 ಗ್ರಾಂ ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಲಾಗಿದ್ದು, 11 ಮನೆಗಳವು ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ.ರೋಹಿಣಿ ಕಟೋಚ್ ಸೆಪಟ್ ತಿಳಿಸಿದ್ದಾರೆ.

   ಕುಕೃತ್ಯಗಳಿಗೆ ನಗರದ ಹೊರವಲಯವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದ ಗ್ಯಾಂಗ್ ಗುರಿಯಾಗಿಸಿಕೊಂಡು ಮನೆಗಳ ಬಳಿಯೇ ಬಾಡಿಗೆಗೆ ಮನೆ ಮಾಡಿಕೊಂಡು ಕೇವಲ 10 ರಿಂದ 15 ನಿಮಿಷದಲ್ಲಿ ಮನೆ ದೋಚಿ ಪರಾರಿಯಾಗುತ್ತಿತ್ತು.ಕಳವು ಮಾಲುಗಳನ್ನು ಜಪಾನ್ ರಾಜ ತನ್ನ ಇಬ್ಬರು ಪತ್ನಿಯರ ಮೂಲಕ ವಿಲೇವಾರಿ ಮಾಡಿಸುತ್ತಿದ್ದ. ಒಂದು ಏರಿಯಾದಲ್ಲಿ ಕಳ್ಳತನ ಮಾಡಿದರೆ ಮತ್ತೆ ಆ ಏರಿಯಾಗೆ ಬರದೆ ಬೇರೊಂದು ಏರಿಯಾವನ್ನು ತಮ್ಮ ಕುಕೃತ್ಯಕ್ಕೆ ಆಯ್ಕೆ ಮಾಡಿಕೊಳ್ಳುತ್ತಿತ್ತು.ಈ ಖದೀಮರ ತಂಡ ಹಲವು ಬಾರಿ ಜೈಲು ಕಂಬಿಗಳು ಎಣಿಸಿದರೂ, ಬಿಡುಗಡೆಯಾದ ಬಳಿಕ ಮತ್ತದೇ ಮನೆಗಳ್ಳತನ ಕೃತ್ಯಗಳಲ್ಲಿ ಭಾಗಿಯಾಗುತ್ತಿತ್ತು ಎಂದು ಹೇಳಿದ್ದಾರೆ.

ಕುಳ್ಳಗಿದ್ದ ಜಪಾನ್

    ಕುಳ್ಳಗಿದ್ದ ಕಾರಣಕ್ಕೆ ರಾಜನಿಗೆ ಜಪಾನ್‌ರಾಜ್ ಎನ್ನುವ ಹೆಸರು ಬಂದಿದ್ದು ಗ್ಯಾಂಗ್ ಕಟ್ಟಿಕೊಂಡು ನಗರದ ಹಲವೆಡೆ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ ಆತನನ್ನು 2 ತಿಂಗಳ ಹಿಂದೆ ಬಂಧಿಸಿ ಜೈಲಿಗೆ ಕಳುಹಿಸಲಾಗಿದ್ದು ಆತ ಜೈಲಿನಲ್ಲಿದ್ದುಕೊಂಡೇ ಗ್ಯಾಂಗ್ ಮೂಲಕ ಕಳವು ಮಾಡಿಸುತ್ತಿದ್ದನು ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡ ತಲಘಟ್ಟಪುರ ಪೊಲೀಸ್ ಇನ್ಸ್‌ಪೆಕ್ಟರ್ ರಾಮಪ್ಪ ಬಿ.ಗುತ್ತೇರ್ ಮತ್ತವರ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link