ಬೆಂಗಳೂರು
ಮಾರಕಾಸ್ತ್ರಗಳನ್ನಿಟ್ಟುಕೊಂಡು ಮೂವರು ಸಹಚರರ ಜೊತೆ ದರೋಡೆಗೆ ಸಜ್ಜಾಗಿದ್ದ ರೌಡಿ, ಉಮೇಶ ಅಲಿಯಾಸ್ ದಡಿಯಾ ಸೇರಿ ನಾಲ್ವರನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ತುಮಕೂರು ಜಿಲ್ಲೆಯ ಪಾವಸಂದ್ರದ ದಡಿಯಾ ಉಮೇಶ (37), ಉಲ್ಲಾಳ ಉಪನಗರದ ಸಿದ್ದಾರ್ಥ್ ಗೌಡ ಅಲಿಯಾಸ್ ಸೈಕೊ (23), ಸುಕಂದಕಟ್ಟೆಯ ನಾಗೇಶ (23), ಕಮಲಾನಗರದ ಮನು (25) ಬಂಧಿಸಿ 2 ಲಾಂಗು, ದೊಣ್ಣೆ ಇನ್ನಿತರ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.
ಆರೋಪಿ ದಡಿಯಾ ಉಮೇಶ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ರೌಡಿ ಪಟ್ಟಿಯಲ್ಲಿದ್ದು, ಈತನ ವಿರುದ್ಧ ಅನ್ನಪೂರ್ಣೇಶ್ವರಿ ನಗರ, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1 ಕೊಲೆ, 1 ಕೊಲೆಯತ್ನ, 1 ಅಪಹರಣ ಪ್ರಕರಣ ದಾಖಲಾಗಿದೆ.
ಸಿದ್ದಾರ್ಧಗೌಡ ಹಾಗೂ ನಾಗೇಶ ಕೂಡ ರೌಡಿಪಟ್ಟಿಯಲ್ಲಿದ್ದು, ಆರೋಪಿಗಳ ವಿರುದ್ಧ 1 ಅಪಹರಣ ಪ್ರಕರಣ ದಾಖಲಾಗಿದೆ. ರೌಡಿ ದಡಿಯಾ ಉಮೇಶ ತನ್ನ ಬಂಧಿತ ಸಹಚರರೊಂದಿಗೆ ಮಂಗಳವಾರ ಮಧ್ಯಾಹ್ನ ಅನ್ನಪೂರ್ಣೇಶ್ವರಿ ನಗರದ ನಿರ್ಜನ ಪ್ರದೇಶವೊಂದರಲ್ಲಿ ಮಚ್ಚು-ಲಾಂಗುಗಳನ್ನು ಹಿಡಿದು ದರೋಡೆಗೆ ಸಜ್ಜಾಗಿದ್ದ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ