ಪ್ರವಾಸೋಧ್ಯಮ ಅಭಿವೃದ್ದಿಗೆ ಅಗತ್ಯ ಕ್ರಮ;ಚಂದ್ರಪ್ಪ

ಚಿತ್ರದುರ್ಗ;

     ಜಿಲ್ಲೆಯ ಜನರು ಇದುವರೆಗೂ ಪಾಸ್ ಪೋರ್ಟ್ ಪಡೆಯಲು ಬೆಂಗಳೂರು ಅಥವಾ ಹುಬ್ಬಳ್ಳಿಗೆ ಹೋಗಬೇಕಿತ್ತು. ಇದೀಗ ಚಿತ್ರದುರ್ಗದ ಪ್ರಧಾನ ಅಂಚೆ ಕಛೇರಿಯಲ್ಲಿಯೇ ಪಾಸ್‍ಪೋರ್ಟ್ ಸೇವಾ ಕೇಂದ್ರ ಪ್ರಾರಂಭವಾಗಿದ್ದು. ಚಿತ್ರದುರ್ಗ ಸೇರಿದಂತೆ ನೆರೆಹೊರೆಯ ಜಿಲ್ಲೆಯ ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಂಸದ ಬಿ.ಎನ್ ಚಂದ್ರಪ್ಪ ಹೇಳಿದರು.

      ನಗರದ ಪ್ರಧಾನ ಅಂಚೆ ಕಛೇರಿ ಆವರಣದಲ್ಲಿ ಆಯೋಜಿಸಿದ್ದ ಪಾಸ್ ಪೋರ್ಟ್ ಸೇವಾ ಕೇಂದ್ರ ಪ್ರಾರಂಭೋತ್ಸವ ಮತ್ತು ಪ್ರವಾಸೋದ್ಯಮ ಇಲಾಖೆಯ ವಿಶೇಷ ಅಂಚೆ ಲಕೋಟೆ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

      ಜಿಲ್ಲೆಯ ಜನರು ಹೊರ ಜಿಲ್ಲೆಗಳಿಗೆ ಹೋಗಿ ಪಾಸ್‍ಪೋರ್ಟ್ ಪಡೆಯಲು ಹೆಚ್ಚಿನ ಹಣ ಹಾಗೂ ಸಮಯ ವ್ಯಯ ಮಾಡಬೇಕಿತ್ತು. ಇದೀಗ ಚಿತ್ರದುರ್ಗದಲ್ಲಿಯೇ ಪಾಸ್‍ಪೋರ್ಟ್ ಸೇವಾ ಕೇಂದ್ರ ತೆರೆಯಲಾಗಿದೆ. ಇದರಿಂದಾಗಿ, ಕಡಿಮೆ ಸಮಯ ಮತ್ತು ಖರ್ಚಿನಲ್ಲಿ ಹಾಗೂ ಸ್ಥಳೀಯವಾಗಿಯೇ ಪಾಸ್‍ಪೋರ್ಟ್ ಪಡೆಯಬಹುದಾಗಿದೆ. ಜಿಲ್ಲೆಯಲ್ಲಿ ಪಾಸ್‍ಪೋರ್ಟ್ ಸೇವಾ ಕೇಂದ್ರ ಪ್ರಾರಂಭವಾಗಬೇಕು ಎನ್ನುವ ಈ ಭಾಗದ ಜನರ ಬಹುದಿನಗಳ ಬೇಡಿಕೆ ಇದೀಗ ಈಡೇರಿದಂತಾಗಿದೆ. ಆಧುನಿಕ ಯುಗಕ್ಕೆ ತಕ್ಕಂತೆ ಎಲ್ಲ ನಾಗರಿಕರಿಗೂ ಪಾಸ್‍ಪೋರ್ಟ್ ಅವಶ್ಯಕತೆ ತುಂಬ ಇದ್ದು, ಎಲ್ಲರೂ ಪಾಸ್‍ಪೋರ್ಟ್ ಪಡೆದುಕೊಳ್ಳಬೇಕು ಎಂದು ಹೇಳಿದರು.

       ಪದೇ ಪದೇ ಬರಕ್ಕೆ ತುತ್ತಾಗುತ್ತಿರುವ ಚಿತ್ರದುರ್ಗ ಬಡ ಜಿಲ್ಲೆ ಎಂದು ಕರೆಸಿಕೊಳ್ಳುತ್ತಿದೆ. ಇನ್ನು ಕೆಲವೆ ದಿನದಲ್ಲಿ ಭದ್ರಾ ನೀರು ಜಿಲ್ಲೆಗೆ ಹರಿಯಲಿದ್ದು, ಜಿಲ್ಲೆಯಲ್ಲಿನ ಕೆರೆಗಳಿಗೆ ನೀರು ತುಂಬಿಸಿದರೆ, ಶ್ರೀಮಂತ ಜಿಲ್ಲೆಯಾಗುತ್ತದೆ. ಇಲ್ಲಿನ ಕಲ್ಲಿನ ಕೋಟೆ ದೇಶ ವಿದೇಶಗಳಲ್ಲಿ ಪ್ರಖ್ಯಾತಿ ಪಡೆದಿದ್ದು, ಪ್ರವಾಸಿಗರ ಸಂಖ್ಯೆಯು ಹೆಚ್ಚಿದಂತೆ ಮೂಲಭೂತ ಸೌಕರ್ಯಗಳ ಸುಧಾರಣೆ ಆಗಬೇಕಾಗಿದೆ. ಕೋಟೆಯಲ್ಲಿ ಮೂಲಭೂತ ಸೌಲಬ್ಯಗಳನ್ನು ಅಭಿವೃದ್ದಿ ಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಸದರು ಹೇಳಿದರು.

      ಕೇಂದ್ರ ಸರ್ಕಾರವು 10 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಸುಕನ್ಯ ಸಮೃದ್ಧಿ ಯೊಜನೆಯನ್ನು ಜಾರಿಗೆ ತಂದಿದ್ದು ಅರ್ಹರು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು. ರೀಜನಲ್ ಪಾಸ್ ಪೋರ್ಟ್ ಅಧಿಕಾರಿ ಭರತ್ ಕುಮಾರ ಕುತಟಿ ಮಾತನಾಡಿ, ವಿದ್ಯಾರ್ಥಿಗಳು ಹಾಗೂ ನಾಗರಿಕರು ವಿದೇಶಕ್ಕೆ ತೆರಳಬೇಕೆಂದರೆ ಪಾಸ್‍ಪೋರ್ಟ್‍ನ ಅವಶ್ಯಕತೆ ಇದೆ. ವಿದೇಶಗಳಲ್ಲಿ ಭಾರತೀಯ ಪ್ರಜೆ ಎಂದು ಗುರುತಿಸಿಕೊಳ್ಳಬೇಕೆಂದರೆ ಇದರ ಮಹತ್ವ ತುಂಬಾ ಮುಖ್ಯವಾಗಿದೆ ಎಂದು ಹೇಳಿದರು.

       ಪಾಸ್‍ಪೋರ್ಟ್ ಪಡೆಯಲು ಮೂರು ಹಂತಗಳನ್ನು ಪಾಲಿಸಬೇಕು. ಮೊದಲು ಆನ್‍ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು ನಂತರ ತಪಾಸಣೆಗೆ ಒಳಪಡಿಸಲಾಗುತ್ತದೆ, ಅಂತಿಮವಾಗಿ ಪೋಲೀಸ್ ತಪಾಸಣೆ ಮಾಡಿ ಪಾಸ್‍ಪೋರ್ಟ್ ವಿತರಿಸಲಾಗುತ್ತದೆ ಎಂದು ತಿಳಿಸಿದರು.
ಪ್ರವಾಸೊದ್ಯಮ ಇಲಾಖೆ ಸಹಾಯಕ ನಿರ್ದೇಶಕ ಡಾ. ಎಸ್. ತಿಪ್ಪೇಸ್ವಾಮಿ ಮಾತನಾಡಿ ಚಿತ್ರದುರ್ಗ ನಗರವು ಐತಿಹಾಸಿಕ ಪ್ರಸಿದ್ದಿ ಹೊಂದಿದ್ದು ಜಿಲ್ಲೆಯಾದ್ಯಂತ ಪ್ರವಾಸಿ ಸ್ಥಳಗಳಿವೆ ಅದಕ್ಕಾಗಿ ಜನರಿಗೆ ಪರಿಚಯವಾಗಲೆಂದು ಕಲ್ಲಿನ ಕೋಟೆ, ಜಟಿಂಗ ರಾಮೇಶ್ವರ, ವಾಣಿವಿಲಾಸ ಸಾಗರದ ಸ್ಮಾರಕಗಳ ವೈಶಿಷ್ಟತೆಯನ್ನು ಮೂರು ಭಾಷೆಗಳಲ್ಲಿ ವಿಶೇಷ ಲಕೋಟೆಗಳನ್ನು ಬಿಡುಗಡೆಗೊಳಿಸಲಾಗಿದೆ. ದೇಶ ವಿದೇಶಗಳಿಗೆ ಜಿಲ್ಲೆಯ ಐತಿಹಾಸಿಕ ಸ್ಥಳಗಳ ಬಗ್ಗೆ ತಿಳಿಸಲು 5 ಸಾವಿರ ಪಾಸ್‍ಪೋರ್ಟ್‍ಗಳ ಮೇಲೆ ವಿಶೇಷ ಪ್ರವಾಸ ಲಕೋಟೆಗಳನ್ನು ಮುದ್ರಿಸಲಾಗುತ್ತದೆ ಎಂದು ಹೇಳಿದರು.

        ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸಿ. ಸಂಗಪ್ಪ, ಕರ್ನಾಟಕ ದಕ್ಷಿಣ ವಲಯದ ಜನರಲ್ ಪೋಸ್ಟ್ ಮಾಸ್ಟರ್ ಎಸ್. ರಾಜೇಂದ್ರ ಕುಮಾರ್, ಚಿತ್ರದುರ್ಗ ಅಂಚೆ ಅದೀಕ್ಷಕ ಶಿವರಾಜ್ ಖಿಂಡೆಮಠ್, ಸಹಾಯಕ ರಕ್ಷಣಾಧಿಕಾರಿ ವಿಜಯ್‍ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಪಾಸ್ ಪೋರ್ಟ್‍ಗೆ ಅರ್ಜಿ ಸಲ್ಲಿಸಿದ್ದ ಮೇಘ, ಶೃತಿ, ಭರತ್ ಇವರಿಗೆ ಇದೇ ಸಂದರ್ಭದಲ್ಲಿ ಅರ್ಜಿಯ ರಸೀದಿ ನೀಡಲಾಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link