ಹಾನಗಲ್ಲ :
ರೈತರ ಸಾಲಮನ್ನಾ ವಿಷಯ ಮುಂದಿಟ್ಟುಕೊಂಡು ರಾಜ್ಯ ಸರಕಾರ ಯವುದೇ ಯೋಜನೆಗಳಿಗೆ ಹಣ ಬಿಡುಗಡೆ ಮಾಡದೆ ಇರುವುದರಿಂದ ರಾಜ್ಯದ ಯಾವುದೇ ಯೋಜನೆಗಳು ಅನುಷ್ಠಾನಗೊಳ್ಳುತ್ತಿಲ್ಲ. ಕೇವಲ ಕೇಂದ್ರ ಸರಕಾರದ ಯೋಜನೆಗಳು ಮಾತ್ರ ಚಾಲನೆಯಲ್ಲಿವೆ ಎಂದು ಶಾಸಕ ಸಿ.ಎಂ.ಉದಾಸಿ ತಿಳಿಸಿದರು.
ರವಿವಾರ ತಾಲೂಕಿನ ಕರಗುದರಿ ಗ್ರಾಮದ ಉರ್ದು ಪ್ರಾಥಮಿಕ ಶಾಲೆಯಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾದಲ್ಲಿ ನಿರ್ಮಿಸಲಾದ ಹೆಚ್ಚುವರಿ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಗರೀಬಿ ಹಠಾವೋ ಎಂದು ಬಾಯಿಮಾತಲ್ಲಿ ಹೇಳಿದರೆ ಬಡತನ ನಿರ್ಮೂಲನೆ ಸಾಧ್ಯವಿಲ್ಲ. ಬದಲಾಗಿ ಅದಕ್ಕೆ ಪೂರಕವಾದ ಯೋಜನೆಗಳನ್ನು ಅನುಷ್ಠಾನಗೊಳಿಸಿದಾಗ ಮಾತ್ರ ಸಾಧ್ಯ. ಈಗ ರಾಜ್ಯದಲ್ಲಿ ನಡೆದಿರುವುದು ಕೇಂದ್ರದ ಯೋಜನೆಗಳು ಮಾತ್ರ. ರೈತರ ಸಾಲ ಮನ್ನಾ ಮಾಡುವುದಾಗಿ ಹೇಳುತ್ತ ಇತರ ಯೋಜನೆಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ. ಹೀಗಾಗಿ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದರು.
ತಾಲೂಕಿನಲ್ಲಿ ಶೈಕ್ಷಣಿಕ ಕ್ರಾಂತಿಯೇ ಆಗಿದೆ. ತಾಲೂಕಿನ ಶಿಕ್ಷಣದ ಅಡಿಪಾಯ ಭದ್ರವಾಗಿರುವುದರಿಂದ ಸರ್ವ ಜನಾಂಗದ, ಕಟ್ಟಕಡೆಯ ವ್ಯಕ್ತಿಗಳ ಮಕ್ಕಳು ಇಂದು ವಿದ್ಯಾವಂತರಾಗಿದ್ದಾರೆ. ವಿದ್ಯೆಯೊಂದು ಇದ್ದರೆ ಬದುಕು ರೂಪಿಸಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ತಮ್ಮ ಅಧಿಕಾರಾವಧಿಯಲ್ಲಿ ಹೆಚ್ಚು ಕೋರ್ಸುಗಳನ್ನು, ಶಾಲಾ ಕಾಲೇಜುಗಳನ್ನು ಪ್ರಾರಂಬಿಸಲಾಗಿದೆ. ಈಗ ತಾಲೂಕಿನಲ್ಲಿ 54 ಹೈಸ್ಕೂಲುಗಳಿವೆ. 16 ಜ್ಯೂನಿಯರ್ ಕಾಲೇಜುಗಳು, 4 ಪ್ರಥಮದರ್ಜೆ ಕಾಲೇಜುಗಳು, ಪಾಲಿಟೆಕ್ನಿಕ್. ಬಿಎಡ್, ಡಿಎಡ್ ಸೇರಿದಂತೆ ಎಂಎ, ಎಂಕಾಂ, ಪ್ರಸಕ್ತವರ್ಷದಿಂದ ಬಿಎಸ್‍ಸಿ ಕೂಡಾ ಪ್ರಾರಂಭಗೊಂಡು ಕಾರ್ಯ ನಿರ್ವಹಿಸುತ್ತಿವೆ ಎಂದ ಅವರು, ನರೆಗಾ ಯೋಜನೆಯಡಿ, ಶಾಲಾ ಆವರಣಗೋಡೆ ನಿರ್ಮಾಣ, ಸಿಸಿ ರಸ್ತೆ ಕಾಮಗಾರಿ ಕೈಗೊಳ್ಳಲು ಸಾಧ್ಯವಿದೆ. ಗ್ರಾಪಂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೇರಿ ಅವಶ್ಯಕತೆ ಇದ್ದಲ್ಲಿ ಕಾಮಗಾರಿ ಕೈಗೊಳ್ಳುವಂತೆ ಸಿ.ಎಂ.ಉದಾಸಿ ಕರೆ ನೀಡಿದರು.
ಗ್ರಾ ಪಂ ಉಪಾಧ್ಯಕ್ಷ ಸೋಮಪ್ಪ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯ ಸೋಮನಾಥ ಚೌವ್ಹಾಣ, ಎಸ್‍ಡಿಎಂಸಿ ಅಧ್ಯಕ್ಷ ಅಬ್ದುಲ್‍ಗಫಾರ ಸುತಾರ, ಜಿಪಂ ಮಾಜಿ ಸದಸ್ಯ ಪದ್ಮನಾಭ ಕುಂದಾಪೂರ, ಚಂದ್ರಪ್ಪ ಹರಿಜನ, ರವಿ ಲಮಾಣಿ, ಶಿವಲಿಂಗಪ್ಪ ತಲ್ಲೂರ, ರೇಣುಕಾ ಹರಿಜನ, ರೆಹೆನಾಭಿ ಮುಜಾವರ, ಲಕ್ಷ್ಮವ್ವ ಲಮಾಣಿ, ಹಸೀನಾಬಿ ಮುಲ್ಲಾ, ಗುತ್ತಿಗೆದಾರ ಎಂ.ಎಂ.ದೊಡ್ಡಮನಿ ಮೊದಲಾದವರು ಈ ಸಂದರ್ಭದಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
