ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆ ಮಾರ್ಗದ ಪರಿಶೀಲನೆ ನಡೆಸಿದ ನೂತನ ಜಿಲ್ಲಾಧಿಕಾರಿ

ಚಳ್ಳಕೆರೆ

        ರಾಜ್ಯದ ಹಲವಾರು ನಗರ ಪ್ರದೇಶಗಳು ಅತಿ ಹೆಚ್ಚಿನ ವಾಹನ ಸಂಚಾರವನ್ನು ಹೊಂದಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಶಿಫಾರಸ್ಸಾನುಸಾರ ಕೇಂದ್ರ ಸರ್ಕಾರ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಪರಿವರ್ತಿಸಿ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕಾಗಿ ವ್ಯವಸ್ಥೆ ಮಾಡುವ ಯೋಜನೆ ಜಾರಿಯಲ್ಲಿದ್ದು, ಜಿಲ್ಲೆಯ ಹಿರಿಯೂರು ಮತ್ತು ಚಿತ್ರದುರ್ಗ ತಾಲ್ಲೂಕುಗಳನ್ನು ಹೊರತು ಪಡಿಸಿದರೆ ಪ್ರಸ್ತುತ ಚಳ್ಳಕೆರೆ ತಾಲ್ಲೂಕು ಸಹ ರಾಷ್ಟ್ರೀಯ ಹೆದ್ದಾರಿಯ ಜೊತೆಗೆ ಬೈಪಾಸ್ ಪಡೆಯುವ ಯೋಜನೆಯನ್ನು ಹೊಂದಿದೆ.

        ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ಜಿಲ್ಲಾಧಿಕಾರಿ ಆರ್.ಗಿರೀಶ್, ರಾಷ್ಟ್ರೀಯ ಹೆದ್ಧಾರಿಗಳ ಯೋಜನಾ ನಿರ್ದೇಶಕ ಅಜಯ್ ಮಣಿಕುಮಾರ್, ವಿಶೇಷ ಭೂಸ್ವಾಧಿನಾಧಿಕಾರಿ ಎಲ್.ಸಿದ್ದಪ್ಪ, ಉಪವಿಭಾಗಾಧಿಕಾರಿ ವಿಜಯಕುಮಾರ್ ನೇತೃತ್ವದ ಅಧಿಕಾರಿಗಳ ತಂಡ ಚಳ್ಳಕೆರೆ ನಗರದ ಹೊರ ವಲಯದ ಬೈಪಾಸ್ ರಸ್ತೆಯ ಮಾರ್ಗವನ್ನು ವಿವರವಾಗಿ ಭಾನುವಾರ ಪರಿಶೀಲಿಸಿದರು.

         ಶಾಸಕ ಟಿ.ರಘುಮೂರ್ತಿ ಮಾತನಾಡಿ, ಈ ಹಿಂದಿನ ಯೋಜನೆಯಲ್ಲಿ ಬೈಪಾಸ್ ರಸ್ತೆ ಬೆಂಗಳೂರು ರಸ್ತೆಯ ಸಿದ್ದಾಪುರ ಗ್ರಾಮದ ಬಳಿಯಿಂದ ವಿಠಲನಗರ, ಅರಣ್ಯ ಇಲಾಖೆ, ಗೊರ್ಲಕಟ್ಟೆ ಮೂಲಕ ಬುಡ್ನಹಟ್ಟಿ ಗ್ರಾಮದ ಬಳಿ ರಾಜ್ಯ ಹೆದ್ದಾರಿಯನ್ನು ಸೇರುತ್ತಿತ್ತು. ಪ್ರಸ್ತುತ ಈ ಮಾರ್ಗದಲ್ಲಿ ಅಲ್ಪ ಬದಲಾವಣೆಯನ್ನು ಮಾಡಿದ್ದು, ಸಿದ್ದಾಪುರದಿಂದ ನೇರವಾಗಿ ಚಳ್ಳಕೆರೆ ನಗರದ ವಿಠಲನಗರ ಪಕ್ಕದಲ್ಲಿರುವ ಅರಣ್ಯ ಇಲಾಖೆ ಮೂಲಕ ಜಗಲ್ಯೂರಯ್ಯನ ದೇವಸ್ಥಾನ ಬಳಿಯಿಂದ ಬುಡ್ನಹಟ್ಟಿ ಲಂಬಾಣಿ ಹಟ್ಟಿ ಮೂಲಕ ರಾಜ್ಯದ ಹೆದ್ದಾರಿ ಸೇರ್ಪಡೆ ಮಾಡುವಂತೆ ಮನವಿ ಮಾಡಿದ್ದು, ಅದೇ ರೀತಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಸೂಚಿಸಿದರು.

         ಯೋಜನಾಧಿಕಾರಿ ಅಜಯ್ ಮಣಿಕುಮಾರ್ ಮಾತನಾಡಿ, ಈಗಾಗಲೇ ರಾಷ್ಟ್ರೀಯ ಹೆದ್ದಾರಿಗಳ ಯೋಜನಾಧಿಕಾರಿಗಳ ನಿರ್ದೇಶನದಂತೆ ಬೈಪಾಸ್ ರಸ್ತೆ ನಿರ್ಮಾಣ ಮಾಡುವ ಯೋಜನೆ ಇದೆ. ನೀವು ಪ್ರಸ್ತುತ ಬದಲಾವಣೆಯನ್ನು ಬಯಸಿದ್ದು, ಅದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಅವರ ಒಪ್ಪಿಗೆ ಪಡೆದ ನಂತರ ಬದಲಾವಣೆ ಮಾಡುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಹಿಂದಿನ ಯೋಜನೆಯ ಪ್ರಕಾರ ವಿಠಲ ನಗರದ ಮೇಲೆ ಬೈಪಾಸ್ ರಸ್ತೆ ಹಾದುಹೋದಲ್ಲಿ ಅತಿ ಹೆಚ್ಚಿನ ಮನೆಗಳಿಗೆ ಹಾನಿಯಾಗಲಿದ್ದು, ಹೆಚ್ಚಿನ ಪರಿಹಾರವನ್ನು ಜನತೆಗೆ ನೀಡಬೇಕಾಗುತ್ತದೆ. ಮನೆಗಳನ್ನು ಕೆಡುವುದರಿಂದ ಹೆಚ್ಚು ವೆಚ್ಚ ತಗುಲಲಿದ್ದು, ಈಗಿನ ನೂತನ ಯೋಜನೆಯ ಮೂಲಕ ರೂಪಿಸಿದಲ್ಲಿ ಯಾವುದೇ ತಕರಾರು ಎದುರಾಗುವುದಿಲ್ಲ. ಹಣವೂ ಸಹ ನಿಯಮಿತವಾಗಿ ವೆಚ್ಚವಾಗುತ್ತದೆ ಎಂದರು.

         ಜಿಲ್ಲಾಧಿಕಾರಿ ಆರ್.ಗಿರೀಶ್ ಮಾತನಾಡಿ, ಚಳ್ಳಕೆರೆ ನಗರದ ಹೊರಹೊಲದಲ್ಲಿ ಹಾದು ಹೋಗುವ ಬೈಪಾಸ್ ಬದಲಾವಣೆಯ ಬಗ್ಗೆ ಲಿಖಿತವಾಗಿ ಮಾಹಿತಿ ನೀಡಿದಲ್ಲಿ ಅದನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಕಳುಹಿಸಿ ಬದಲಾವಣೆ ಮಾಡಿಸಿಕೊಡುವ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಯೋಜನಾಧಿಕಾರಿಗಳಿಗೆ ಸ್ಥಳೀಯವಾಗಿ ಕೆಲವು ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ ಮತ್ತು ಕೆಲವು ಬದಲಾವಣೆಗಳನ್ನು ಸಹ ಸಾರ್ವಜನಿಕ ಹಿತದೃಷ್ಠಿಯಿಂದ ಮಾಡಲೇ ಬೇಕಿದೆ. ಬೈಪಾಸ್ ರಸ್ತೆ ನಿರ್ಮಾಣದಿಂದ ಎಲ್ಲಾ ರೀತಿಯ ಅನುಕೂಲತೆಗಳು ಜನರಿಗೆ ಸಿಗಬೇಕು ಎಂದರು.

        ಪ್ರಾರಂಭದಲ್ಲಿ ಚಿತ್ರದುರ್ಗ ರಸ್ತೆಯ ಅರಣ್ಯ ಇಲಾಖೆಯ ಮುಂಭಾಗದಲ್ಲಿ ಪರಿಶೀಲನೆ ನಡೆಸಲಾಯಿತು. ನಂತರ ಅಲ್ಲಿಂದ ನೇರವಾಗಿ ಅಜ್ಜಯ್ಯನಗುಡಿ ರಸ್ತೆಯ ಮೂಲಕ ಜಗಲೂರಜ್ಜನ ದೇವಸ್ಥಾನ ಬಳಿಯ ಯಾತ್ರಿನಿವಾಸದ ಬಳಿ ಪರಿಶೀಲನೆ ನಡೆಸಿ ಅಲ್ಲಿಂದ ಬುಡ್ನಹಟ್ಟಿ ತೆರಳಿ ಅಲ್ಲಿ ವೀಕ್ಷಣೆ ಮಾಡಿ ಬೆಂಗಳೂರು ರಸ್ತೆಯ ಸಿದ್ದಾಪುರ ಗ್ರಾಮಕ್ಕೆ ಬಂದು ಅಲ್ಲಿ ಬೈಪಾಸ್ ರಸ್ತೆ ಪ್ರಾರಂಭವಾಗುವ ಸ್ಥಳವನ್ನು ಸಹ ಪರಿಶೀಲಿಸಲಾಯಿತು.

       ತಹಶೀಲ್ದಾರ್ ಟಿ.ಸಿ.ಕಾಂತರಾಜು, ಪೌರಾಯುಕ್ತ ಜೆ.ಟಿ.ಹನುಮಂತರಾಜು, ಕಂದಾಯಾಧಿಕಾರಿ ಶರಣಬಸಪ್ಪ, ಗ್ರಾಮ ಲೆಕ್ಕಿಗರಾದ ರಾಜೇಶ್, ರಾಘವೇಂದ್ರ, ನಗರಸಭಾ ಸದಸ್ಯರಾದ ಎಂ.ಮಲ್ಲಿಕಾರ್ಜುನ, ವೈ.ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap