ಬಳ್ಳಾರಿ
ಮಂತ್ರಾಲಯ ಶ್ರೀಮಠವು ಶೈಕ್ಷಣಿಕ ಕ್ರಾಂತಿ ಮೂಡಿಸುವ ದಿಸೆಯಲ್ಲಿ ಈಗಾಗಲೇ ದಿಟ್ಟ ಹೆಜ್ಜೆಗಳನ್ನಿಟ್ಟಿದ್ದು ಬಳ್ಳಾರಿಯಲ್ಲಿಯೂ ಇಂಜನಿಯರಿಂಗ್ ಮತ್ತು ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಯೋಜನೆ ರೂಪಿಸುತ್ತಿದೆ ಎಂದು ಮಂತ್ರಾಲಯ ಪೀಠಾಧಿಪತಿ ಶ್ರೀ ಸುಬುಧೇಂದ್ರ ತಿರ್ಥರು ಹೇಳಿದರು.
ಇಲ್ಲಿನ ಎಸ್‍ಎನ್ ಪೇಟೆಯ ಶ್ರೀವೆಂಕಟೇಶ್ವರ ದೇವಸ್ಥಾನದ ಭಕ್ತರಿಗಾಗಿ ನೂತನವಾಗಿ ನಿರ್ಮಿಸಿದ್ದ ಕುಡಿವ ನೀರಿನ ಅರವಟಿಗೆ ಲೋಕಾರ್ಪಣೆ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನ ಟ್ರಸ್ಟ್ ನಿಂದ ರೂ.4 ಲಕ್ಷ ವೆಚ್ಚದಲ್ಲಿ 5000 ಲೀಟರ್ ಸಾಮಥ್ರ್ಯದ ನೀರಿನ ಅರವಟಿಗೆ ನಿರ್ಮಿಸಲಾಗಿದೆ. ಇದೇರೀತಿ, ಉಳಿದೆಡೆಯೂ ಅರವಟಿಗೆಗಳನ್ನು ನಿರ್ಮಿಸುವುದಾಗಿ ಹೇಳಿದರು.
ಕಂಪ್ಲಿ, ಹೊಸಪೇಟೆ ಮತ್ತು ಮೈಲಾರದ ಹೊಸರಿತ್ತಿಗೆ ತೆರಳಬೇಕಾಗಿದೆ. ಮೈಲಾರದ ದೇವರಗುಡ್ಡದಲ್ಲಿ ರಜತದ್ವಾರ ಸಮರ್ಪಣೆ ಜರುಗಲಿದೆ. ಮಂತ್ರಾಲಯದಲ್ಲಿ ಗೋ ಸಂರಕ್ಷಣೆಗಾಗಿ ಮೇವು, ಕುಡಿಯುವ ನೀರು ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ. ಭಕ್ತರಿಗಾಗಿ ವಿವಿಧ ರೀತಿಯ ಅನುಕೂಲತೆಗಳನ್ನು ಒದಗಿಸಿಕೊಡಲು ಮಠದ ಸಿಬ್ಬಂದಿ ಅಹರ್ನಿಶಿ ಶ್ರಮಿಸುತ್ತಿದೆ. ನಾಡಿನ ಹಲವೆಡೆ ಮಂತ್ರಾಲಯದ ಭಕ್ತರಿಗಾಗಿ ಉಚಿತ ವೈದ್ಯಕೀಯ ಸೇವೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ರಾಮಮಂದಿರ ನಿರ್ಮಾಣಕ್ಕೆ ಎಂಥ ತ್ಯಾಗಕ್ಕೂ ಸಿದ್ಧ:
ಇಡೀ ಜಗತ್ತಿನಲ್ಲಿ ವ್ಯಾಪಿಸಿರುವ ಭಾರತೀಯ ಹಿಂದುಗಳಿಗೆ ಅತ್ಯಂತ ಪವಿತ್ರ ತಾಣ ಅಯೋಧ್ಯೆ. ಅಯೋಧ್ಯೆ ಶ್ರೀರಾಮನು ಜನಿಸಿದ ತಾಣ. ರಾಮ ಮಂದಿರ ಅಯೋಧ್ಯೆಯಲ್ಲಿಯೇ ನಿರ್ಮಾಣವಾಗಬೇಕು. ಇದಕ್ಕಾಗಿ ನಮ್ಮ ಬೆಂಬಲ ಇದ್ದೇ ಇದೆ. ಯಾವುದೇ ತ್ಯಾಗಕ್ಕೂ, ಹೋರಾಟಕ್ಕೂ ನಾವು ಸಿದ್ಧರಿದ್ದೇವೆ ಎಂದರು. ರಾಮಮಂದಿರ ನಿರ್ಮಾಣವಾಗುವುದರಿಂದ ಎಲ್ಲ ಭಾರತೀಯರಿಗೆ ಇನ್ನಷ್ಟು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಸಾಧನೆ ಮಾಡಲು ಪ್ರೇರಣೆ ಆಗಬಹುದು ಎಂದರು.
ಸುರೇಂದ್ರ ತೀರ್ಥರ ವೃಂದಾವನಕ್ಕೆ ಕಾಯಕಲ್ಪ:
ಇತ್ತೀಚೆಗೆ ಹಂಪಿಯಲ್ಲಿ ನಡೆದ ಉತ್ಖನನದ ವೇಳೆ ಶ್ರೀ ಸುರೇಂದ್ರ ತೀರ್ಥರ ವೃಂದಾವನ ಪತ್ತೆಯಾಗಿದೆ. ವೃಂದಾವನದ ಪ್ರತಿಮೆಗಳು ದೊರೆತಿವೆ. ಶ್ರೀ ರಾಘವೇಂದ್ರ ಸ್ವಾಮಿಗಳಿಗೂ ಪೂರ್ವದಲ್ಲಿ ಜೀವಿಸಿದ್ದ ಶ್ರೀ ಸುರೇಂದ್ರ ತೀರ್ಥರ ವೃಂದಾವನ ಪೂಜೆಗೆ ಕೇಂದ್ರ ಸರ್ಕಾರಕ್ಕೆ ವರದಿ ಕಳುಹಿಸಿಕೊಡಲಾಗಿದೆ. ಭಾರತೀಯ ಪುರಾತತ್ವ ಮತ್ತು ಪ್ರಾಚ್ಯವಸ್ತು ಇಲಾಖೆಯಿಂದಲೂ ಅನುಮತಿ ಪಡೆಯಲು ಕಾನೂನು ತಜ್ಞರು ವರದಿಗಳನ್ನು ಸಿದ್ಧಪಡಿಸುತ್ತಿದ್ದಾರೆ. ಪ್ರಾಧಿಕಾರದ ಅನುಗುಣವಾಗಿ ಪೂಜೆ ಸಲ್ಲಿಸುವ ಪ್ರಕ್ರಿಯೆ ಕುರಿತು ಕೇಂದ್ರ ಹಾಗೂ ಸಂಬಂಧಿಸಿದ ಇಲಾಖೆಗಳ ಜೊತೆ ಚರ್ಚೆಗಳು ಮುಂದುವರಿದಿವೆ. ಮುಂದಿನ ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ ಎಂದರು.ಬಳಿಕ ಮೂಲರಾಮದೇವರ ಪೂಜೆ ನೆರವೇರಿಸಿದ ಶ್ರೀಗಳು ಭಕ್ತರಿಗೆ ಫಲ-ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ಶ್ರೀಮಠದ ಶ್ರೀನಿವಾಸ್ ಢಣಾಪುರ, ಬ್ರಹ್ಮಣ್ಯಾಚಾರ್, ವಾಚಿರಾಜಾಚಾರ್ಯ, ಪಂಡಿತ್ ಸಾಮವೇದ ಗುರುರಾಜಾಚಾರ್ಯ, ರಾಘವೇಂದ್ರ ಮೋಹನ್, ಮಠದ ಭಕ್ತರಾದ ಎಂ.ತಿಪ್ಪಣ್ಣ ಬಾಬು, ಎಂ.ರಾಘವೇಂದ್ರ ಇನ್ನಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ