ಬೆಂಗಳೂರು:
ಸಂಚಾರ ನಿಯಮಗಳನ್ನು ಉಲ್ಲಂಘಟಿಸುವ ವಾಹನಗಳ ಮೇಲೆ ಪ್ರಕರಣ ದಾಖಲಿಸಲು ನೀಡುವ ಆದ್ಯತೆಗಿಂತ ಮಿಗಿಲಾಗಿ ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ಸುಗಮಗೊಳಿಸಿ ಪಾದಚಾರಿಗಳಿಗೆ ರಸ್ತೆ ದಾಟಲು ಅನುಕೂಲ ಮಾಡಿಕೊಡುವ ಪರಿಸ್ಥಿತಿ ನಿರ್ಮಾಣ ಮಾಡಿಕೊಡಲು ಹೆಚ್ಚು ಶ್ರಮಿಸಲಾಗುವುದು ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್ ಅವರು ತಿಳಿಸಿದ್ದಾರೆ.
ನಗರದ ಸಂಚಾರ ಪೊಲೀಸ್ ನಿರ್ವಹಣಾ ಕೇಂದ್ರದ ಕಚೇರಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ನಗರದಲ್ಲಿನ ಸಂಚಾರ ದಟ್ಟಣೆಯ ಸಮಸ್ಯೆಗಳ ಬಗ್ಗೆ ತಿಳಿದುಕೊಂಡಿದ್ದೇನೆ. 10 ವರ್ಷಗಳ ಕಾಲ ನಗರದಲ್ಲಿ ವಾಸಿಸಿ, ರಸ್ತೆಗಳು, ಸಂಚಾರ ವ್ಯವಸ್ಥೆಯ ಪರಿಚಯವಿದೆ. ಅದನ್ನಾಧರಿಸಿ ಕಾರ್ಯಕ್ರಮಗಳನ್ನು ರೂಪಿಸಲಿದ್ದೇನೆ ಎಂದು ಹೇಳಿದರು.
ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ಮೇಲೆ ನಿಗಾ ವಹಿಸುವುದರ ಜೊತೆಗೆ ಸುಗಮ ಸಂಚಾರಕ್ಕೆ ಕೈಗೊಳ್ಳಬೇಕಾದ ಮಾರ್ಗೋಪಾಯಗಳ ಪರಾಮರ್ಶಿಸಿ ಮುಂದುವರೆಯಲಾಗುವುದು ಎಂದು ತಿಳಿಸಿದರು.
ವಾಹನಗಳು ಹೆಚ್ಚಾದಂತೆ ಸಂಚಾರ ದಟ್ಟಣೆ ಸಮಸ್ಯೆ ಸಾಮಾನ್ಯ. ವಿದೇಶಿ ಮಾದರಿ ಸಂಚಾರ ವ್ಯವಸ್ಥೆಯನ್ನು ಸುಧಾರಣೆ ಮಾಡಲು ವಾಹನ ಸವಾರರಿಗೆ ಅರಿವು ಮೂಡಿಸಲು ಯೋಜನೆಗಳನ್ನು ರೂಪಿಸಲಾಗುವುದು ಸಂಚಾರ ದಟ್ಟಣೆಯ ವೃತ್ತಗಳು, ರಸ್ತೆಗಳನ್ನು ಪಟ್ಟಿ ಮಾಡಿ ಅಲ್ಲಿನ ಸಂಚಾರ ಸಮಸ್ಯೆ ಸುಧಾರಣೆಯ ಜತೆಗೆ ಪಾದಚಾರಿಗಳು ರಸ್ತೆ ದಾಟಲು ಅನುಕೂಲವಾಗುವಂತಹ ಕ್ರಮಗಳಿಗೆ ಆದ್ಯತೆ ನೀಡಲಾಗುವುದೆಂದು ತಿಳಿಸಿದರು.
ಸಂಚಾರ ಸಮಸ್ಯೆ ದಟ್ಟಣೆ ನಿವಾರಣೆಗೆ ಎಲ್ಲರಿಂದಲೂ ಸಲಹೆ-ಸೂಚನೆಗಳನ್ನು ಪಡೆದುಕೊಳ್ಳಲಾಗುವುದು, ಯಾವುದು ಸರಿ ಎನಿಸುತ್ತದೆಯೋ ಅದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುವುದು ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ