ನೀರಿನ ಘಟಕಗಳಿಗೆ ಪಾಲಿಕೆ ವಿಧಿಸಿರುವ ಷರತ್ತುಗಳು :ನಿಯಮಿತ ಗುಣಮಟ್ಟ ಪರೀಕ್ಷೆ, ಸಿಸಿ ಟಿವಿ ವ್ಯವಸ್ಥೆ

ತುಮಕೂರು

    “ಶುದ್ಧ ಕುಡಿಯುವ ನೀರಿನ ಘಟಕವು ಐ.ಎಸ್.ಐ. ಗುಣಮಟ್ಟ ಕಾಯ್ದುಕೊಂಡಿರಬೇಕು. ಘಟಕದ ಶುದ್ಧೀಕರಿಸಿದ ನೀರು ಪ್ರತಿ 15 ದಿನಗಳಿಗೊಮ್ಮೆ ಜಿಲ್ಲಾ ಸರ್ವೆಯಲೆನ್ಸ್ ಅಧಿಕಾರಿಗಳಿಂದ ಪರೀಕ್ಷಿಸಲ್ಪಡಬೇಕು. ನೀರಿನ ಗುಣಮಟ್ಟದ ಪ್ರಮಾಣ ಪತ್ರವನ್ನು ಸಾರ್ವಜನಿಕರಿಗೆ ಕಾಣುವಂತೆ ಘಟಕದ ಸೂಚನಾ ಫಲಕದಲ್ಲಿ ಪ್ರದರ್ಶಿಸಬೇಕು”

        ಇದು ತುಮಕೂರು ಮಹಾನಗರ ಪಾಲಿಕೆಯು ಕಳೆದವಾರ ಇ-ಟೆಂಡರ್ ಮೂಲಕ ಒಂದು ವರ್ಷದ ಅವಧಿಗೆ ನಿರ್ವಹಣಾ ಗುತ್ತಿಗೆ ನೀಡಿರುವ ತುಮಕೂರು ನಗರದ ಪಾಲಿಕೆ ಸುಪರ್ದಿನ 17 “ಶುದ್ಧ ಕುಡಿಯುವ ನೀರಿನ ಘಟಕ” (ಆರ್.ಓ. ಪ್ಲಾಂಟ್)ಗಳ ಗುತ್ತಿಗೆ ದಾರರಿಗೆ ವಿಧಿಸಿರುವ ಪ್ರಮುಖ ಷರತ್ತುಗಳಲ್ಲೊಂದು.

       ನಿರ್ವಹಣೆದಾರರು ಘಟಕವನ್ನು ಕಾರ್ಯನಿರ್ವಹಣೆಗೆ ಪಡೆದ ಒಂದು ವಾರದ ಒಳಗೆ ತಮ್ಮ ಸ್ವಂತ ವೆಚ್ಚದಲ್ಲಿ ಸಿಸಿ ಟಿ.ವಿ. ಅಳವಡಿಸಬೇಕು. ಅದರ ವಿಡಿಯೋ ಅಸೆಸ್ ಪಾಲಿಕೆಗೆ ನೀಡಬೇಕು. ಒಂದು ತಿಂಗಳ ಅವಧಿಯ ವಿಡಿಯೋ ಫುಟೇಜ್ ಸ್ಟೋರ್ ಮಾಡುವಷ್ಟು ಸಾಮರ್ಥ್ಯವನ್ನು ಹಾರ್ಡ್‍ಡಿಸ್ಕ್ ಹೊಂದಿರಬೇಕು. ಸಿಸಿ ಟಿ.ವಿ.ಯ ಕ್ಯಾಮೆರಾಗಳು ಎಚ್.ಡಿ. ಮತ್ತು ನೈಟ್‍ವಿಷನ್ ಸೌಲಭ್ಯ ಹೊಂದಿರಬೇಕು” ಎಂಬುದು ಮತ್ತೊಂದು ಮುಖ್ಯ ಷರತ್ತು.

12 ಗಂಟೆ ತೆರೆದಿರಬೇಕು

     ಘಟಕವು ವಾರದ ಎಲ್ಲ ದಿನಗಳಲ್ಲೂ ಕಾರ್ಯನಿರ್ವಹಿಸಬೇಕು. ಬೆಳಗ್ಗೆ 7 ಗಂಟೆಗೆ ಅಥವಾ ಅದಕ್ಕೂ ಮುಂಚಿತವಾಗಿ ನೀರನ್ನು ವಿತರಿಸುವುದು ಕಡ್ಡಾಯ. ಪ್ರತಿದಿನ ಕನಿಷ್ಟ 12 ಗಂಟೆಗಳ ಕಾಲ ಘಟಕವನ್ನು ತೆರೆದಿರಬೇಕು” ಎಂದು ಸೂಚಿಸಲಾಗಿದೆ.

ಸಗಟು-ವಾಣಿಜ್ಯ ಮಾರಾಟ ಮಾಡುವಂತಿಲ್ಲ

     ಘಟಕದಲ್ಲಿ ಯಾವುದೇ ರೀತಿಯ ದುರಸ್ತಿ ಬಂದರೂ ಒಂದು ದಿನದ ಒಳಗಾಗಿ ದುರಸ್ತಿಗೊಳಿಸಿ ಘಟಕವನ್ನು ಚಾಲನೆಗೊಳಿಸಬೇಕು. ಘಟಕದಲ್ಲಿ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು, ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಪ್ರತಿ ಲೀಟರ್‍ಗೆ 25 ಪೈಸೆಯಂತೆ ಮಾತ್ರ ಮಾರಾಟ ಮಾಡಬೇಕು. ನೀರಿನ ಬೆಲೆಯು ಸರ್ಕಾರದ ಕಾನೂನು ಮತ್ತು ನಿಯಮಗಳಿಗೆ ಒಳಪಟ್ಟಿರುತ್ತದೆ. ಘಟಕದ ನೀರನ್ನು ಸಗಟು ಹಾಗೂ ವಾಣಿಜ್ಯ ಬಳಕೆಗೆ ಮಾರಾಟ ಮಾಡುವಂತಿಲ್ಲ.

      ಸಗಟು ಶುದ್ಧ ಕುಡಿಯುವ ನೀರಿನ ಘಟಕಗಳಿಗೆ, ಕಲ್ಯಾಣ ಮಂಟಪಗಳಿಗೆ, ವಾಣಿಜ್ಯ ಮಳಿಗೆಗಳಿಗೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡುವುದು ನಿಷೇಧಿಸಲಾಗಿದೆ. ಘಟಕದಲ್ಲಿ ಅಗ್ನಿಶಾಮಕ ಉಪಕರಣಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಘಟಕದ ಆವರಣವನ್ನು ಸದಾ ಸ್ವಚ್ಛವಾಗಿಟ್ಟಿರಬೇಕು.

       ಘಟಕದ ಕಟ್ಟಡ ಹಾಗೂ ಆವರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳಿಗೆ ಆಸ್ಪದ ಇರುವುದಿಲ್ಲ. ಘಟಕದಿಂದ ಅಶುದ್ಧ ನೀರು ಪೂರೈಸಿ, ಅದರಿಂದ ಸಾರ್ವಜನಿಕರಿಗೆ ಹಾನಿಯಾದರೆ, ಘಟಕದ ನಿರ್ವಾಹಕರ ಮೇಲೆ ಕ್ರಿಮಿನಲ್ ಪ್ರಕರಣ ಹೂಡಲಾಗುವುದು” ಎಂಬಿತ್ಯಾದಿಯಾಗಿ ಒಟ್ಟು 26 ರೀತಿಯ ಷರತ್ತುಗಳನ್ನು ಗುತ್ತಿಗೆದಾರರಿಗೆ ವಿಧಿಸಲಾಗಿದೆ.

      ಗುತ್ತಿಗೆ ಪಡೆದವರ ಕಾರ್ಯನಿರ್ವಹಣೆಯು ತೃಪ್ತಿಕರವಾಗಿದ್ದಲ್ಲಿ ಅಂಥವರು ಲಿಖಿತ ಮನವಿ ಸಲ್ಲಿಸಿದಲ್ಲಿ ತಾಂತ್ರಿಕ ಸಮಿತಿಯಲ್ಲಿ ಚರ್ಚಿಸಿ ಮತ್ತೊಂದು ವರ್ಷದ ಅವಧಿಗೆ ಮುಂದುವರೆಸುವ ಅಥವಾ ಕಾರ್ಯನಿರ್ವಹಣೆಯ ಅವಧಿ ವಿಸ್ತರಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಪಾಲಿಕೆಯು ಸ್ಪಷ್ಟಪಡಿಸಿದೆ.ಪಾಲಿಕೆಯು ವಿಧಿಸಿರುವ ಯಾವುದೇ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಯಾವುದೇ ಸಮಯದಲ್ಲಿ ಕರಾರನ್ನು ರದ್ದುಪಡಿಸಿ, ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆಯು ಎಚ್ಚರಿಕೆಯನ್ನೂ ನೀಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap