ಬೆಳಗಾವಿ
ಅಚ್ಚರಿಯ ಬೆಳವಣಿಗೆಯೊಂದರಲ್ಲಿ ವಿಧಾನ ಪರಿಷತ್‍ನ ನೂತನ ಸಭಾಪತಿಯಾಗಿ ಕಾಂಗ್ರೆಸ್‍ನ ಹಿರಿಯ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ ಆಯ್ಕೆಯಾಗಲಿದ್ದಾರೆ.
ಪ್ರತಾಪ್ ಚಂದ್ರ ಶೆಟ್ಟಿ ಕಳೆದ ಬಾರಿ ಸ್ಥಳೀಯ ಸಂಸ್ಥೆಗಳಿಂದ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂಜರಿದಿದ್ದರು. ಚುನಾವಣಾ ರಾಜಕಾರಣದಿಂದಲೇ ದೂರ ಉಳಿಯಲು ಉದ್ದೇಶಿಸಿದ್ದರು. ಅವರಿಗೆ ಇದೀಗ ಮೇಲ್ಮನೆ ಸಭಾಪತಿ ಹುದ್ದೆಯಲ್ಲಿ ಕೂರುವ ಭಾಗ್ಯ ಒಲಿದು ಬಂದಿದೆ.
ಕಾಂಗ್ರೆಸ್‍ನ ಎಸ್.ಆರ್.ಪಾಟೀಲ್ ಸಭಾಪತಿ ಸ್ಥಾನಕ್ಕೆ ಆಯ್ಕೆಯಾಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕೊನೆಯ ಹಂತದಲ್ಲಿ ಕಾಂಗ್ರೆಸ್ ಹೈಕಮಾಂಡ್, ಪರಿಷತ್ ಸಭಾಪತಿಯಾಗಿ ಪ್ರತಾಪ್ ಚಂದ್ರ ಶೆಟ್ಟಿ ಅವರಿಗೆ ನಾಮಪತ್ರ ಸಲ್ಲಿಸಲು ಸೂಚನೆ ನೀಡಿತು. ಅದರಂತೆ ಅವರು ನಾಮಪತ್ರ ಸಲ್ಲಿಸಿದ್ದಾರೆ. ಅಧಿಕೃತ ಘೋಷಣೆ ಬಾಕಿ ಇದೆ.
ಸಭಾಪತಿ ಸ್ಥಾನಕ್ಕೆ ಮೈತ್ರಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹಗ್ಗಜಗ್ಗಾಟ ನಡೆದಿತ್ತು. ಕಾಂಗ್ರೆಸ್‍ನ ಹಿರಿಯ ಸದಸ್ಯ ಎಸ್.ಆರ್ ಪಾಟೀಲ್ ಅವರನ್ನು ಈ ಸ್ಥಾನಕ್ಕೆ ಕೂರಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಲಾಬಿ ನಡೆಸಿದ್ದರು. ಆದರೆ ಕೊನೆಯ ಹಂತದಲ್ಲಿ ಅನಿರೀಕ್ಷಿತವಾಗಿ ಪ್ರತಾಪ್ ಚಂದ್ರ ಶೆಟ್ಟಿ ಮೈತ್ರಿ ಕೂಟದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಪರಿಷತ್‍ನಲ್ಲಿ ಕಾಂಗ್ರೆಸ್ 39 ಸ್ಥಾನ, ಜೆಡಿಎಸ್ 14 ಹಾಗೂ ಬಿಜೆಪಿ 18 ಸ್ಥಾನಗಳನ್ನು ಹೊಂದಿವೆ. ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ತೀರ್ಮಾನಿಸಿರುವುದರಿಂದ ಪ್ರತಾಪ್ ಚಂದ್ರ ಶೆಟ್ಟಿ ಆಯ್ಕೆ ಅವಿರೋಧವಾಗಿ ಆಗುವುದು ನಿಶ್ಚಿತವಾಗಿದೆ.
ಕೆಳಮನೆಯಲ್ಲಿ ಸ್ಪೀಕರ್ ಹುದ್ದೆಯನ್ನು ಕಾಂಗ್ರೆಸ್‍ಗೆ ಬಿಟ್ಟುಕೊಡಲಾಗಿದೆ. ಆದ್ದರಿಂದ ಮೇಲ್ಮನೆಯಲ್ಲಿ ಸಭಾಪತಿ ಹುದ್ದೆಯನ್ನು ಜೆಡಿಎಸ್‍ಗೆ ಬಿಟ್ಟುಕೊಡಬೇಕು. ಮೈತ್ರಿ ಧರ್ಮ ಪಾಲಿಸಬೇಕು ಎಂದು ಜೆಡಿಎಸ್ ನಾಯಕರು ಪಟ್ಟು ಹಿಡಿದಿದ್ದರು. ಅಂತಿಮವಾಗಿ ಜೆಡಿಎಸ್ ನಾಯಕರು ತಮ್ಮ ಪಟ್ಟು ಸಡಿಲಿಸಿ, ಸಭಾಪತಿ ಸ್ಥಾನವನ್ನು ಕಾಂಗ್ರೆಸ್‍ಗೆ ನೀಡಲು ಒಪ್ಪಿದ್ದರು. ಜೆಡಿಎಸ್‍ನ ಬಸವರಾಜ ಹೊರಟ್ಟಿ ಕೂಡ ಈ ಹುದ್ದೆಯ ಮೇಲೆ ಕಣ್ಣಿಟ್ಟಿದ್ದರು.
ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಚಂದ್ರ ಶೆಟ್ಟಿ, ಸಭಾಪತಿಯಾಗುತ್ತೇನೆ ಎಂಬ ಆಕಾಂಕ್ಷೆಯೂ ಇರಲಿಲ್ಲ. ನಿರೀಕ್ಷೆಯೂ ಇರಲಿಲ್ಲ. ಈ ಹುದ್ದೆಗೆ ನಾನು ಲಾಬಿ ಮಾಡಿಲ್ಲ. ಸೇವಾ ಹಿರಿತನದ ಆಧಾರದಲ್ಲಿ ಪಕ್ಷ ನನಗೆ ಈ ಹುದ್ದೆ ನೀಡಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ