ಚಿತ್ರದುರ್ಗ:
ಟ್ರಾಯ್‍ನ ಹೊಸ ನಿಯಮದಿಂದ ಸ್ಥಳೀಯ ಗ್ರಾಹಕರು ಹಾಗೂ ಕೇಬಲ್ ನಿರ್ವಾಹಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸುವಂತೆ ಆಗ್ರಹಿಸಿದ ಜಿಲ್ಲಾ ಕೇಬಲ್ ಆಪರೇಟರ್ಸ್‍ಗಳು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಗ್ರಾಹಕರು ಪ್ರತಿ ತಿಂಗಳು 150 ರಿಂದ 200 ರೂ.ಗಳನ್ನು ಪಾವತಿಸುತ್ತಿದ್ದಾರೆ. ಡಿ.29 ರಿಂದ ಜಾರಿಗೆ ತರಲು ಹೊರಟಿರುವ ಹೊಸದರ ಎಂ.ಆರ್.ಪಿ.ನಿಯಮದಡಿ ಗ್ರಾಹಕರು ಪ್ರತಿ ತಿಂಗಳು ನಾಲ್ಕು ಪಟ್ಟು ಹೆಚ್ಚಿಗೆ ಶುಲ್ಕ ಪಾವತಿಸಬೇಕಾಗುತ್ತದೆ. ಹೊಸ ನಿಯಮದ ಪ್ರಕಾರ ತಿಂಗಳಿಗೆ ಆರು ನೂರರಿಂದ ಎಂಟು ನೂರು ರೂ.ಶುಲ್ಕ ಪಾವತಿಸಬೇಕಾದರೆ ಭಾರಿ ಹೊರೆಯಾಗುತ್ತದೆ. ಶುಲ್ಕ ಕಟ್ಟದಿದ್ದರೆ ಕೇಬಲ್ ಆಪರೇಟರ್‍ಗಳು ವೃತ್ತಿಯನ್ನು ನಿಲ್ಲಿಸಬೇಕಾಗುತ್ತದೆ. ಇದರಿಂದ ಕೇಬಲ್ ವೃತ್ತಿಯನ್ನೇ ನಂಬಿರುವ ನೂರಾರು ಕೇಬಲ್ ಆಪರೇಟರ್‍ಗಳು ಬೀದಿಗೆ ಬೀಳಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ತಮ್ಮ ಸಮಸ್ಯೆಗಳನ್ನು ತೋಡಿಕೊಂಡರು.
ಚಿತ್ರದುರ್ಗ ಜಿಲ್ಲೆ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಸುಮಾರು ಎಂಟು ಸಾವಿರಕ್ಕೂ ಹೆಚ್ಚು ಕೇಬಲ್ ಆಪರೇಟರ್‍ಗಳಿದ್ದು, 25 ವರ್ಷಗಳಿಂದಲೂ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಹೊಸ ನಿಯಮವನ್ನು ಗ್ರಾಹಕರು ಮತ್ತು ಕೇಬಲ್ ಆಪರೇಟರ್‍ಗಳು ಮುಂದುವೆರೆಸಿಕೊಂಡು ಹೋಗುವುದು ಅಸಾಧ್ಯವಾಗುತ್ತದೆ. ಈ ಹಿಂದೆ ಸರ್ಕಾರವು ವಿವಿಧ ಹಂತಗಳಲ್ಲಿ ನಾನಾ ರೀತಿಯ ದರ ನಿಗಧಿಪಡಿಸಿತ್ತು. ಹೊಸ ನಿಯಮದಿಂದ ಹಳ್ಳಿಯಿಂದ ದೆಹಲಿಯವರೆಗೂ ಪೇ ಮತ್ತು ಉಚಿತ ಚಾನಲ್‍ಗಳ ದರವನ್ನು ಒಂದೆ ರೀತಿ ನಿಗಧಿಪಡಿಸಿರುತ್ತಾರೆ. ಅದಕ್ಕಾಗಿ ಹೊಸ ಟ್ರಾಯ್ ನೀತಿಯನ್ನು ರದ್ದುಗೊಳಿಸಿ ಈಗ ಇರುವ ದರವನ್ನು ಯಥಾಸ್ಥಿತಿಯಾಗಿ ಮುಂದುವರೆಸಿಕೊಂಡು ಹೋಗುವಂತೆ ಕೇಬಲ್ ಆಪರೇಟರ್ಸ್‍ಗಳು ಮನವಿ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
