ಹರಪನಹಳ್ಳಿ:
ದಾವಣಗೆರೆಯಲ್ಲಿ ಈಚೆಗೆ ಸಮಾನ ಮನಸ್ಕರ ವೇದಿಕೆ ಆಯೋಜಿಸಿದ್ದ ಸಭೆಯಲ್ಲಿ ಯಾವುದೇ ರಾಜಕೀಯ ವಿಚಾರ ಚರ್ಚೆಯಾಗಿಲ್ಲ. ಆದರೆ ಸಭಾ ನಿರ್ಣಯವನ್ನೇ ತಿರುಚಿ ವಿಷಯಾಂತರ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಡಾ.ಮಂಜುನಾಥ್ ಉತ್ತಂಗಿ ಹೇಳಿದ್ದಾರೆ.
ಸಭೆಯಲ್ಲಿ ನಾನು ಸೇರಿದಂತೆ ಪಂಚಮಸಾಲಿ ಮುಖಂಡರೂ ಭಾಗವಹಿಸಿದ್ದರು. ಸಮಾನ ಮನಸ್ಕರ ವೇದಿಕೆ ರಚನೆಗೆ ಸಮ್ಮತಿ ಸೂಚಿಸಿದ್ದೇನೆ. ಆದರೆ ಯಾರೊಬ್ಬರು ಪಂಚಮಸಾಲಿ ಜನಾಂಗ ಒಂದು ಪಕ್ಷಕ್ಕೆ ಸೀಮಿತಗೊಳಿಸುವ ಬಗ್ಗೆ ಚರ್ಚೆ ಮಾಡಿಲ್ಲ ಎಂದು ಪಟ್ಟಣದ ಪ್ರೆಸ್ಕ್ಲಬ್ನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಸ್ಪಷ್ಟಪಡಿಸಿದರು.
ಚುನಾವಣೆಯಲ್ಲಿ ಪಂಚಮಸಾಲಿ ಜನಾಂಗ ಕಾಂಗ್ರೆಸ್ ಪಕ್ಷ ಬೆಂಬಲಿಸಿ ಎನ್ನುವ ಹೇಳಿಕೆ ಕೇವಲ ಸಮಾನ ಮನಸ್ಕರ ವೇದಿಕೆಗೆ ಸಂಬಂಧಪಟ್ಟಿದೆ ಹೊರತು, ಇಡೀ ಪಂಚಮಸಾಲಿ ಸಮುದಾಯಕ್ಕೆ ಅಲ್ಲ. ಸಭಾ ನಿರ್ಣಯ ತಪ್ಪಾಗಿ ನೀಡಿರುವುದು ನನಗೆ ಮುಜುಗರ ತಂದಿದೆ ಎಂದು ಹೇಳಿದರು.
ನಾನು ಮತ್ತು ತೇಜಸ್ವಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದೇವೆ. ನಮಗೆ ಟಿಕೆಟ್ ಸಿಗದಿದ್ದಾಗ ಸಮಾಜದ ಮುಖಂಡರು ಎಲ್ಲಿ ಇದ್ದರು ಪ್ರಶ್ನಿಸಿದ ಅವರು, ಸಭೆಯಲ್ಲಿ ಚರ್ಚೆಯಾಗದ ಅಂಶ ಎಲ್ಲರ ಅಭಿಪ್ರಾಯ ಎಂದು ಘೋಷಿಸುವುದು ಸರಿಯಲ್ಲ. ಮತದಾನದಲ್ಲಿ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯವಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಓಂಕಾರೇಶ್ವರಗೌಡ ಇದ್ದರು.