ನಿರಾಶ್ರಿತರಿಗೆ ಇದು ನೈಜ `ಆಶ್ರಯ ಕೇಂದ್ರ’

ತುಮಕೂರು

ವಿಶೇಷ ವರದಿ :ಆರ್.ಎಸ್.ಅಯ್ಯರ್

     ಇವರ ವಯಸ್ಸು ಸುಮಾರು 42 ವರ್ಷಗಳು. ಜೀವನೋಪಾಯಕ್ಕಾಗಿ ಒಂದು ಕಾಲದಲ್ಲಿ ಚಾಲಕ ವೃತ್ತಿ ಅವಲಂಬಿಸಿದ್ದವರು. ದುರದೃಷ್ಟವಶಾತ್ ಅವರ ಒಂದು ಕಾಲು ಮುರಿಯಿತು. ಕೆಲಸ ಮಾಡಲಾಗದ ಸ್ಥಿತಿ. ಕುಟುಂಬದಿಂದಲೂ ದೂರವಾದ ಪರಿಸ್ಥಿತಿ. ಎಲ್ಲೋ ಏನೋ ಮಾಡುತ್ತ ದಿನವನ್ನು ನೂಕುತ್ತಿದ್ದವರು. ರಾತ್ರಿ ತಂಗಲು ಸೂಕ್ತ ಸ್ಥಳವಿಲ್ಲದೆ ಪರಿತಪಿಸುತ್ತಿದ್ದವರು. ಇತ್ತೀಚೆಗೆ ಅದು ಹೇಗೋ ಅವರಿಗೆ ಈ `ವಸತಿ ರಹಿತರ ಆಶ್ರಯ ಕೇಂದ್ರ’ದ ಮಾಹಿತಿ ಲಭಿಸಿತು.

      ಪ್ರತಿನಿತ್ಯ ರಾತ್ರಿ ವೇಳೆ ನಿದ್ರಿಸಲು ಇದನ್ನೇ ಆಶ್ರಯಿಸತೊಡಗಿದರು. ಬರುಬರುತ್ತ ಇದೇ ಇವರ ಖಾಯಂ ಆಶ್ರಯ ತಾಣವೂ ಆಯಿತು. ಅದೇ ಹೊತ್ತಿಗೆ ಇವರ ಕಾಲಿಗೆ ಒದಗಿರುವ ಸಮಸ್ಯೆಯ ಬಗ್ಗೆ ಈ `ಆಶ್ರಯ ಕೇಂದ್ರ’ದ ಸಿಬ್ಬಂದಿ ಗಮನಿಸಿದರು. ಇವರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿನ ವೈದ್ಯರು ಇವರ ಆರೋಗ್ಯ ತಪಾಸಣೆ ಮಾಡಿ, ಕಾಲಿಗೆ ಶಸ್ತ್ರಚಿಕಿತ್ಸೆ ಮಾಡಬೇಕೆಂದು ಸಲಹೆಯಿತ್ತರು. ಅದಕ್ಕೆ ಬೇಕಾದ ಒಂದು ರಾಡ್ ಅವಶ್ಯಕತೆ ಇದೆಯೆಂದರು. ಆಗ ಈ ಕೇಂದ್ರದ ಸಿಬ್ಬಂದಿ ಸುಮ್ಮನೆ ಕೂರಲಿಲ್ಲ.

      ಏನಾದರೂ ಪರಿಹಾರೋಪಾಯ ಒದಗಿಸಲು ಯೋಚಿಸಿದರು. ತಾವುಗಳೇ ತಮ್ಮ ಕಚೇರಿ ಸಿಬ್ಬಂದಿಯಿಂದಲೇ ನಿಧಿ ಸಂಗ್ರಹಕ್ಕೆ ಮುಂದಾದರು. ಓರ್ವ ಸ್ವಚ್ಛತಾ ಕಾರ್ಮಿಕನೂ ಸೇರಿದಂತೆ ಅಲ್ಲಿನ ಸಿಬ್ಬಂದಿಗಳು ಯಥೋಚಿತವಾಗಿ ದೇಣಿಗೆ ನೀಡಿದರು. ಅದು 5000 ರೂ.ಗಳವರೆಗೆ ಮುಟ್ಟಿತು. ಆದರೂ ಆ ಮೊತ್ತ ಶಸ್ತ್ರಚಿಕಿತ್ಸೆಗೆ ಸರಿಹೊಂದಲಾರದು ಎಂಬುದನ್ನು ಮನಗಂಡ ಸಿಬ್ಬಂದಿವರ್ಗದವರು, ಮತ್ತೆ ತಮ್ಮ -ತಮ್ಮ ವಲಯದಲ್ಲೇ ಮತ್ತೆ ದೇಣಿಗೆ ಸಂಗ್ರಹಿಸಲು ಆಲೋಚಿಸುತ್ತಿದ್ದಾರೆ.

    -ಇದು ತುಮಕೂರು ಮಹಾನಗರ ಪಾಲಿಕೆಯ ಆವರಣದಲ್ಲಿ `ದೀನದಯಾಳ್ ಅಂತ್ಯೋದಯ ಯೋಜನೆ’ಯಡಿ (ಡೇ-ನಲ್ಮ್) ನಿರ್ಮಾಣಗೊಂಡು ಕಾರ್ಯನಿರ್ವಹಿಸುತ್ತಿರುವ “ವಸತಿ ರಹಿತರಿಗೆ ಆಶ್ರಯ ಕೇಂದ್ರ”ದಲ್ಲಿ ನಡೆದಿರುವ ಒಂದು ಮಾನವೀಯ ಸ್ಪಂದನದ ಪ್ರಸಂಗ.

      ಆ ವ್ಯಕ್ತಿ ಇನ್ನೂ ಜಿಲ್ಲಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿದ್ದಾರೆ. ಅವರಿಗೀಗ ಶಸ್ತ್ರಚಿಕಿತ್ಸೆ ಆಗಬೇಕಾಗಿದೆ. ಚಿಕಿತ್ಸಾ ಸೌಲಭ್ಯವೆಲ್ಲ ಉಚಿತವೇ. ಆದರೆ ಶಸ್ತ್ರಚಿಕಿತ್ಸೆಗೆ ಅಗತ್ಯವಾಗಿರುವ ರಾಡ್‍ಗೆ ಆಗುವ ವೆಚ್ಚವನ್ನು ಮಾತ್ರ ಧರಿಸಬೇಕಾಗಿದೆ. ಆ ವ್ಯಕ್ತಿಯ ಕುಟುಂಬವರ್ಗದರು ಎಂದು ಯಾರೂ ಮುಂದೆ ಬರುತ್ತಿಲ್ಲ. ಹೀಗಾಗಿ ಹೇಗಾದರೂ ಅವರನ್ನು ಗುಣಮುಖರನ್ನಾಗಿ ಮಾಡಬೇಕೆಂಬ ತುಡಿತ ಇಲ್ಲಿನ ಸಿಬ್ಬಂದಿಯದ್ದು. ಅದಕ್ಕಾಗಿಯೇ ಈಗ ನಿಧಿ ಸಂಗ್ರಹದಲ್ಲಿ ಮಗ್ನರಾಗಿದ್ದಾರೆ. ಇದೇನೂ ಇವರ ಕೆಲಸವಲ್ಲದಿದ್ದರೂ, ಮಾನವೀಯತೆ ಯಿಂದ ಕ್ರಿಯಾಶೀಲರಾಗಿದ್ದಾರೆಂಬುದು ಹೃದಯಸ್ಪರ್ಶಿಯಾಗಿದೆ.

    ಮತ್ತೊಬ್ಬ ವೃದ್ಧರಿದ್ದಾರೆ. ವಯಸ್ಸು ಸುಮಾರು 70 ದಾಟಿರಬಹುದು. ಗಾರೆ ಕೆಲಸ ಮಾಡುತ್ತಿದ್ದವರು. ಈ ಹಿಂದೆ ರಾತ್ರಿ ವೇಳೆ ಸಿಕ್ಕ-ಸಿಕ್ಕ ಜಾಗಗಳಲ್ಲಿ ನಿದ್ರಿಸುತ್ತಿದ್ದವರು. ಈಗ ಅವರು ಈ ಕೇಂದ್ರದ `ಖಾಯಂ ನಿವಾಸಿ’ ಆಗಿದ್ದಾರೆ. ರಾತ್ರಿ ಇಲ್ಲಿಗೆ ಬಂದು ಸುಖವಾಗಿ ನಿದ್ರಿಸುತ್ತಿದ್ದಾರೆ. ಮುಂಜಾನೆ ಎದ್ದು ಸ್ನಾನಾದಿಗಳನ್ನು ಪೂರೈಸಿ ನಿರ್ಗಮಿಸಿಬಿಡುತ್ತಾರೆ. ಮತ್ತೆ ರಾತ್ರಿ ಹಾಜರಾಗುತ್ತಾರೆ.

ಹುಟ್ಟುಹಬ್ಬ ಆಚರಣೆ

      ಇಂತಹ ಅನೇಕ ಜನರು ಪ್ರಸ್ತುತ ಈ ಕೇಂದ್ರದಲ್ಲಿ ಆಶ್ರಯ ಪಡೆಯತೊಡಗಿದ್ದಾರೆ. ಇಲ್ಲಿಗೆ ಬರುವವರೆಲ್ಲ ಒಂದೊಂದು ರೀತಿಯವರು. ಹಿನ್ನೆಲೆಯಲ್ಲಿ ನೋವು, ಸಂಕಟಗಳನ್ನು ಹೊಂದಿರುವವರು. ಒಬ್ಬೊಬ್ಬರದ್ದೂ ಒಂದೊಂದು ಕಥೆಯೇ. ಆದರೆ ಇಂತಹ ನಿರಾಶ್ರಿತರ ಜೊತೆಯಲ್ಲೇ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡು ಸಂತಸವನ್ನು ಹಂಚಿಕೊಂಡ ಒಂದು ಅಪರೂಪದ ಪ್ರಸಂಗವೂ ಇಲ್ಲಿ ದಾಖಲಾಗಿದೆ.

     ಮಹಾನಗರ ಪಾಲಿಕೆಯ ನಗರ ಜೀವನೋಪಾಯ ಕೇಂದ್ರದ ಯೋಜನಾ ಇಂಜಿನಿಯರ್ ಮಂಜುನಾಥ್ ಅವರು ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಈ ನಿರಾಶ್ರಿತರೊಂದಿಗೆ ಆಚರಿಸಿಕೊಂಡರು. ರಾತ್ರಿ ಇಲ್ಲಿಗೆ ಆಗಮಿಸಿದ ನಿರಾಶ್ರಿತರಿಗೆ ಸಿಹಿ ಊಟದ ವ್ಯವಸ್ಥೆಯನ್ನು ಮಾಡಿದ್ದರು. ಜೊತೆಗೆ ಎಲ್ಲರಿಗೂ ಉಡುಪನ್ನು ಉಡುಗೊರೆಯಾಗಿ ನೀಡಿ ಸಂತಸಪಟ್ಟರು. ಅಲ್ಲದೆ ಈ ಕೇಂದ್ರದ ಆವರಣದಲ್ಲಿ ಗಿಡಗಳನ್ನೂ ನೆಟ್ಟಿದ್ದಾರೆ.

ಅವರ ಖುಷಿಯೇ ನಮಗೆ ಸಂತಸ

    “ಸರ್.. ಈಗ ಕೆಲವರು ಇಲ್ಲಿಗೆ ಖಾಯಂ ಆಗಿ ಬರುತ್ತಿದ್ದಾರೆ. ಅವರೆಲ್ಲರಿಗೂ ಅನುಕೂಲವಾಗುವಂತೆ ನಾವು ನೋಡಿಕೊಳ್ಳುತ್ತಿದ್ದೇವೆ. ಇಲ್ಲಿ ಕಬ್ಬಿಣದ ಮಂಚ, ಹಾಸಿಗೆ, ದಿಂಬು, ಹೊದಿಕೆ, ಫ್ಯಾನ್, ವಿದ್ಯುತ್‍ದೀಪ. ಶೌಚಾಲಯ, ಸ್ನಾನದ ಕೊಠಡಿಯ ವ್ಯವಸ್ಥೆ ಇದೆ. ಸೊಳ್ಳೆ ನಿಯಂತ್ರಣಕ್ಕೆ ವ್ಯವಸ್ಥೆ ಮಾಡುತ್ತೇವೆ. ರಾತ್ರಿ ವೇಳೆ ಎಲ್ಲರೂ ಸುಖವಾಗಿ ನಿದ್ದೆ ಮಾಡುತ್ತಾರೆ. ಮುಂಜಾನೆ 5 ಗಂಟೆಗೆಲ್ಲ ಎಚ್ಚರವಾಗುತ್ತಾರೆ.

     ಮೊದಲಿಗೆ ವಾಕಿಂಗ್ ಮಾಡುವಂತೆ ಸಲಹೆ ಕೊಡುತ್ತೇವೆ. ವಾಕಿಂಗ್ ಮಾಡಿ ಬಂದ ಬಳಿಕ ಶೌಚ, ಸ್ನಾನ ಮುಗಿಸಿ, ಇಲ್ಲಿರುವ ದೇವರ ಫೋಟೋಗೆ ಪೂಜೆ ಸಲ್ಲಿಸಿ ನಿರ್ಗಮಿಸುತ್ತಾರೆ. ಅಷ್ಟು ವ್ಯವಸ್ಥೆ ಇಲ್ಲಿದೆ. ಇವರೆಲ್ಲ ಇಲ್ಲಿ ಖುಷಿಯಿಂದ ಇರುವುದನ್ನು ನೋಡುವುದೇ ನಮಗೆ ಸಂತೋಷ ಮೂಡಿಸುತ್ತದೆ” ಎನ್ನುತ್ತಾರೆ ಇಲ್ಲಿನ ಕೇರ್‍ಟೇಕರ್ ರಾಜೇಂದ್ರ ಪ್ರಸಾದ್.

     “ಇಲ್ಲಿ ಸ್ವಚ್ಛತೆ ಕಾಪಾಡಲಾಗಿದೆ. ನೀರಿನ ಸೌಲಭ್ಯವಿದೆ. ಮುಂಜಾನೆ ಸ್ನಾನಕ್ಕೆ ಸೋಲಾರ್ ವ್ಯವಸ್ಥೆಯಿಂದ ಬಿಸಿ ನೀರು ಲಭಿಸುತ್ತಿದೆ. ಹಾಸಿಗೆ, ಹೊದಿಕೆ, ದಿಂಬಿನ ಕವರ್‍ಗಳನ್ನು ಸ್ಚಚ್ಛವಾಗಿಡಲಾಗಿದೆ. ಹೊದಿಕೆ, ದಿಂಬಿನ ಕವರ್‍ಗಳನ್ನು ನಿಗದಿತವಾಗಿ ಶುಭ್ರಗೊಳಿಸಲಾಗುತ್ತಿದೆ” ಎಂದೂ ಅವರು ಹೇಳುತ್ತಾರೆ.

    ಫೆಬ್ರವರಿ ಮಾಹೆಯಿಂದ ಈವರೆಗೆ ಈ ಕೇಂದ್ರಕ್ಕೆ ಪ್ರತಿನಿತ್ಯ ಸರಾಸರಿ 20 ಜನರು ಬಂದಿದ್ದಾರೆಂದು ಅಂದಾಜು ಮಾಡಲಾಗಿದೆ. ಆದರೂ ಪ್ರತಿನಿತ್ಯ ಖಾಯಂ ಆಗಿ 13 ಜನರು ಇದರ ಸೌಲಭ್ಯವನ್ನು ಪೂರ್ಣ ಪ್ರಮಾಣದಲ್ಲಿ ಪಡೆಯುತ್ತಿದ್ದಾರೆ. ಸುರಕ್ಷತೆ ದೃಷ್ಟಿಯಿಂದ ಇಲ್ಲಿಗೆ ಬರುವವರ ಆಧಾರ್ ಕಾರ್ಡ್ ಗುರುತುಪತ್ರವನ್ನು ಸ್ವೀಕರಿಸಲಾಗುತ್ತದೆ. ಅಂತಹ ಗುರುತುಪತ್ರ ಇಲ್ಲದಿದ್ದರೆ ಅಂಥವರಿಗೆ ಇಲ್ಲಿನ ಸಿಬ್ಬಂದಿಯೇ ಗುರುತುಪತ್ರವನ್ನು ಸರ್ಕಾರಿ ಇಲಾಖೆಯಿಂದ ಮಾಡಿಸಿಕೊಡುವ ಪ್ರಯತ್ನ ಮಾಡುತ್ತಾರೆ. ಅಲ್ಲದೆ ಇಲ್ಲಿಗೆ ಬರುವವರ ಫೋಟೋವನ್ನೂ ಸಂಗ್ರಹಿಸಿಡಲಾಗುತ್ತಿದೆ.

      ರಾತ್ರಿ 9 ಗಂಟೆಯೊಳಗೆ ಇಲ್ಲಿಗೆ ಬರುವವರಿಗೆ ಇಂದಿರಾ ಕ್ಯಾಂಟೀನ್‍ನಲ್ಲಿ ಊಟ ಕೊಡಿಸುವ ಬಗ್ಗೆ ಪ್ರಕ್ರಿಯೆ ನಡೆದಿದೆ. ಸುರಕ್ಷತೆಗಾಗಿ ಇಲ್ಲಿಗೊಂದು ಸಿಸಿ ಟಿವಿ ಕ್ಯಾಮೆರಾ ಅಳವಡಿಸುವ ಬಗೆಗೂ ಸಿದ್ಧತೆ ಆಗುತ್ತಿದೆ. ಇಲ್ಲಿ ತಂಗುವವರಿಗೆ ನಿಗದಿತ ಕಾಲಾವಧಿಗೊಮ್ಮೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ ನಡೆಸುವ ಬಗೆಗೂ ಆಲೋಚಿಸಲಾಗುತ್ತಿದೆ.

      ಬೆಳಗಿನ ಹೊತ್ತೂ ಈ ಕೇಂದ್ರ ತೆರೆದಿರುತ್ತದೆ. ಆದರೆ ಈಗ ರಾತ್ರಿ ವೇಳೆ ಮಾತ್ರ ಬಳಕೆಯಾಗುತ್ತಿದೆ. ರಾತ್ರಿ ವೇಳೆ ಬಸ್ ನಿಲ್ದಾಣ, ರೈಲು ನಿಲ್ದಾಣ, ಅಂಗಡಿ ಮಳಿಗೆಗಳ ಜಗಲಿಗಳ ಮೇಲೆ ನಿದ್ರಿಸುವವರನ್ನು ಗುರುತಿಸಿ, ಅಂಥವರಿಗೆ ಈ ಕೇಂದ್ರದ ಸೌಲಭ್ಯ ಪಡೆದುಕೊಳ್ಳು ವಂತೆ ಸಲಹೆ ನೀಡಿರುವ ಪರಿಣಾಮವಾಗಿ ಈಗ ಕೆಲಜನರು ಖಾಯಂ ಆಗುವಂತಾಗಿದೆ. ಜಿಲ್ಲಾ ಆಸ್ಪತ್ರೆಗೆ ಬರುವ ರೋಗಿಗಳ ಕಡೆಯವರು ರಾತ್ರಿ ವೇಳೆ ತಂಗಲು, ಪರಸ್ಥಳದಿಂದ ಬಂದವರು ರಾತ್ರಿ ವೇಳೆ ಉಳಿದುಕೊಳ್ಳಲು ಈ ಕೇಂದ್ರವನ್ನು ಬಳಸಿಕೊಳ್ಳಬಹುದಾಗಿದೆ. ಅಂದ ಹಾಗೆ ಇಲ್ಲಿನ ಎಲ್ಲ ಸೌಲಭ್ಯಗಳೂ ಉಚಿತ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap