ನೀರಿಗಾಗಿ ತಾಲೂಕಿನಲ್ಲಿ ಜನಾಂಧೋಲನ

ಬ್ಯಾಡಗಿ:

         ನೀರಿಗಾಗಿ ತಾಲೂಕಿನಲ್ಲಿ ಜನಾಂಧೋಲನ ಪ್ರಾರಂಭವಾಗಿದ್ದು, ಆಣೂರು ಕೆರೆಗೆ ನೀರು ತುಂಬಿಸದೇ ಇದ್ದಲ್ಲಿ ಮತದಾನ ಬಹಿಷ್ಕರಿಸುವುದಾಗಿ ತಾಲೂಕಿನ ಕೊಲ್ಲಾಪುರ ಹಾಗೂ ಬನ್ನಿಹಟ್ಟಿ ಗ್ರಾಮಸ್ಥರು ಬುಧವಾರ ತಾಲ್ಲೂಕ ಕಛೇರಿ ಎದುರು ಪ್ರತಿಭಟನೆ ನಡೆಸಿ, ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

        ಈ ಸಂದರ್ಭದಲ್ಲಿ ಮಾತನಾಡಿದ ಗಂಗಣ್ಣ ಎಲಿ, ಅಸುಂಡಿ ಜಲಾನಯನದಡಿ ಆಣೂರು ಕೆರೆಯ ಮೂಲಕ ಬ್ಯಾಡಗಿ ಹಾಗೂ ಹಾವೇರಿ ತಾಲೂಕುಗಳ 36 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅನುದಾನ ನೀಡುವಂತೆ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಕಳೆದ ಹಲವಾರು ತಿಂಗಳಿನಿಂದ ಹೋರಾಟ ಮಾಡಲಾಗುತ್ತಿದೆ ಆದರೆ ಇಲ್ಲಿಯವರೆಗೂ ಯಾವುದೇ ಸ್ಪಷ್ಟ ನಿರ್ಧಾರ ಪ್ರಕಟಿಸುವಲ್ಲಿ ಸರಕಾರ ವಿಫಲವಾಗಿದೆ ಆದ್ದರಿಂದ ಮತದಾನ ಬಹಿಷ್ಕಾರ ಅನಿವಾರ್ಯ ಎಂದರು.

         ಸರ್ಕಾರ ತಿರಿಗಿಯೂ ನೋಡುತ್ತಿಲ್ಲ: ಮಹದೇವಪ್ಪ ಶಿಡೇನೂರ ಮಾತನಾಡಿ, ಕೊಲ್ಲಾಪುರ ಗ್ರಾಮದಲ್ಲಿ ಇತ್ತೀಚೆಗೆ 1100 ಅಡಿ ಕೊಳವೆಭಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ ಅಲ್ಲದೇ ಗ್ರಾಮದಲ್ಲಿ 15 ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ ಇದರಿಂದ ಗ್ರಾಮಸ್ಥರು ನೀರಿಗಾಗಿಯೇ ಹತ್ತಾರು ಮೈಲಿ ಅಲೆಯಬೇಕಾದ ಪರಿಸ್ಥಿತಿ ಎದುರಾಗಿದೆ ಒಂದು ವೇಳೆ ಆಣೂರ ಕೆರೆಗೆ ನೀರು ತುಂಬಿಸಿದ್ದೇ ಆದಲ್ಲಿ ಕೇವಲ ನೂರಾರು ಅಡಿಗಳಿಗೆ ನೀರು ಸಿಗುತ್ತಿತ್ತು ಆದರೇ ಜನರನ್ನು ಸಮಸ್ಯೆಯಲ್ಲಿಯೇ ಇಡುವುದು ಜನಪ್ರತಿನಿಧಿಗಳ ಒಂದಂಶದ ನೀತಿಯಾಗಿದ್ದು ಸಮಸ್ಯೆ ಬಗೆ ಹರಿಸಿದಲ್ಲಿ ನಮ್ಮ ಕಡೆ ತಿರುಗಿ ನೋಡಲ್ಲ ಎಂಬ ಕಾರಣಕ್ಕಾಗಿ ಈ ರೀತಿಯಲ್ಲಿ ನಿರ್ಲಕ್ಷ್ಯ ಭಾವನೆ ತೋರುತ್ತಿದ್ದಾರೆ ಎಂದು ಆರೋಪಿಸಿದರು.

          ನಮ್ಮ ಸಮಸ್ಯೆ ಪರಿಹರಿಸಿ: ಕರಬಸಪ್ಪ ಬೂದಿಹಾಳ ಮಾತನಾಡಿ, ಜನ ಪ್ರತಿನಿಧಿಗಳು ಚುನವಾಣೆ ಹತ್ತಿರ ಬಂದಾಗ ಮಾತ್ರ ನಮ್ಮ ಬಳಿಯಲ್ಲಿ ಬರುತ್ತಾರೆ ಮತ್ತು ಬಣ್ಣ ಬಣ್ಣದ ಮಾತುಗಳನ್ನಾಡಿ ಮತ ಪಡೆದು ನಂತರ ಇಲ್ಲಿಂದ ಮಾಯವಾಗುತ್ತಾರೆ. ಆದರೆ ಈ ಬಾರಿ ಹಾಗಾಗಲು ನಾವು ಬಿಡು ವುದಿಲ್ಲ ಯಾರೇ ಪ್ರಚಾರಕ್ಕೆ ಬಂದರೂ ಬಂದರೂ ನಮ್ಮಗಳ ಅನುಮತಿ ಪಡೆದು ಗ್ರಾಮಕ್ಕೆ ಕಾಲಿಡಬೇಕು ಮತ್ತು ನಮ್ಮ ಸಮಸ್ಯೆಗಳನ್ನು ಪರಿಹರಿಸಿ ಮತ ಕೇಳಬೇಕು ಇಲ್ಲದಿದ್ದಲ್ಲಿ ಮತದಾನ ನಮ್ಮಿಂದ ಸಾಧ್ಯವಿಲ್ಲ ಎಂದರು.

        ನಾವೇನು ಹುಚ್ಚರಲ್ಲ: ಚನ್ನಬಸಪ್ಪ ಬ್ಯಾಡಗಿ ಮಾತನಾಡಿ, ಆಣೂರ ಕೆರೆ ತುಂಬಿಸುವ ವಿಚಾರದಲ್ಲಿ ಸುಳ್ಳು ಹೇಳಿಕೊಂಡೆ ದಿನಗಳನ್ನು ಜನಪ್ರತಿ ನಿಧಿಗಳು ದೂಡು ತ್ತಿದ್ದಾರೆ, ಇಂತಹ ಬಾಲಿಷ ಹೇಳಿಕೆಗಳು ಹಾಗೂ ಭರವಸೆ ನಂಬಲು ನಾವೇನು ಹುಚ್ಚರಲ್ಲ ನೀರು ನೀಡದೆ ಮತ ಕೇಳಲು ಗ್ರಾಮಕ್ಕೆ ಬಂದರೆ ಊರಲ್ಲಿನ ಕೆರೆಗಳವರೆಗೂ ಬರಿಗಾಲಲ್ಲಿ ನಡೆಸಿಕೊಂಡು ಒಂದು ಹನಿ ನೀರನ್ನು ನೀಡದೇ ಕರೆದುಕೊಂಡು ಹೋಗುತ್ತೇವೆ ಆಗಲಾದರೂ ನಮ್ಮಗಳ ಗೋಳು ನಿಮಗೆ ತಿಳಿಯುತ್ತದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಎಂ.ಜಿ.ಡಮ್ರಳ್ಳಿ. ಬಿ.ಆರ್.ಅಂಗಡಿ, ಪಿ.ಎನ್.ಶಿಡೆನೂರ, ಎಸ್.ಎ.ಮಠದ, ಗುಡ್ಡಪ್ಪ, ರುದ್ರಪ್ಪ, ಎಚ್.ಜಿ.ಬೆಳಕೇರಿ ಸೇರಿದಂತೆ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link