ತುಮಕೂರು:
ಬರಗಾಲದ ಸ್ಥಿತಿಯಲ್ಲಿ ನಾವು ಬದುಕುತ್ತಿದ್ದರೂ ನಗರಗಳಲ್ಲಿ ವಾಸಿಸುವ ಜನರಿಗೆ ನೀರಿನ ಬಿಸಿ ಅಷ್ಟಾಗಿ ಇನ್ನೂ ತಟ್ಟಿಲ್ಲ. ಕೆಲವೊಮ್ಮೆ ನೀರಿನ ಕೊರತೆ ಎದುರಾದರೂ ಆ ಕೊರತೆಯನ್ನು ನೀಗಿಸುವಲ್ಲಿ ಮುಂದಾಗುತ್ತಿರುವುದು ಸಮಸ್ಯೆಯ ತೀವ್ರತೆ ಅರ್ಥವಾಗುತ್ತಿಲ್ಲ. ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿ ತೀವ್ರ ಸಮಸ್ಯೆ ಎದುರಾದಾಗಲೇ ನೀರಿನ ಭೀಕರತೆ ಅರ್ಥವಾಗುವುದು.
ಪಕ್ಕದ ರಾಜ್ಯದ ಮೆಗಾಸಿಟಿಗಳಲ್ಲೊಂದಾದ ಚೆನ್ನೈಗೆ ಹೋಗಿ ಬರುವವರಿಗೆ ನೀರಿನ ಸಮಸ್ಯೆ ಏನೆಂಬುದು ಅರ್ಥವಾಗುತ್ತದೆ. ಅಲ್ಲಿ ಒಂದು ವಾರ ಉಳಿದರೆ ಸಾಕು. ನೀರಿನ ತೀವ್ರತೆಯ ಅರಿವಾಗುತ್ತದೆ. ಚೆನ್ನೈ ನಗರಕ್ಕೆ ನೀರು ಒದಗಿಸುವ ನಾಲ್ಕು ಜಲಮೂಲಗಳೆಲ್ಲವೂ ಬರಿದಾಗಿವೆ. ಈಗ ಟ್ಯಾಂಕರ್‍ಗಳಲ್ಲಿನ ನೀರೇ ಆಸರೆ. ಸರ್ಕಾರದಿಂದಲೇ ನೀರು ಒದಗಿಸುವ ವ್ಯವಸ್ಥೆ ಮಾಡಲಾಗುತ್ತದೆ. ಟ್ಯಾಂಕರ್‍ಗಳು ಬರುವ ಸಮಯ ನೋಡಿಕೊಂಡು ಸಾಲಿನಲ್ಲಿ ಬಿಂದಿಗೆ ಹಿಡಿದು ನಿಲ್ಲಬೇಕು. ಇಂತಿಷ್ಟೇ ಬಿಂದಿಗೆ ಎಂದು ನೀಡಲಾಗುತ್ತದೆ. ಅಷ್ಟೇ ನೀರನ್ನು ತಂದು ಉಪಯೋಗಿಸಬೇಕು. ಕುಡಿಯುವ ನೀರು ಮಾತ್ರವಲ್ಲದೆ, ಬಳಕೆ ನೀರಿಗೂ ಅಲ್ಲಿ ತಾಪತ್ರಯ ಶುರುವಾಗಿದೆ.
ನೀರಿನ ಕೊರತೆ ಇರುವ ಕಾರಣ ಅದೆಷ್ಟೋ ರೆಸ್ಟೋರೆಂಟ್‍ಗಳಿಗೆ ಬೀಗ ಹಾಕಲಾಗಿದೆ. ನೀರಿನ ವ್ಯವಸ್ಥೆ ಮಾಡಲಾಗದೆ ಹೋಟೆಲ್ ಗಳನ್ನೇ ಬಂದ್ ಮಾಡಿ ನಷ್ಟ ಮಾಡಿಕೊಂಡಿರುವ ಉದ್ಯಮಿಗಳೂ ಇದ್ದಾರೆ. ಆಸ್ಪತ್ರೆಗಳ ಸ್ಥಿತಿಯಂತೂ ಚಿಂತಾಜನಕ. ಆಪರೇಷನ್ ಥಿಯೇಟರ್‍ಗಳಲ್ಲಿಯೂ ನೀರಿನ ಕೊರತೆ ಉದ್ಭವವಾಗಿದೆ. ಇಡೀ ರಾಷ್ಟ್ರದಲ್ಲಿ ತೀವ್ರ ನೀರಿನ ಕೊರತೆ ಎದುರಿಸುತ್ತಿರುವ ರಾಜ್ಯ ಮತ್ತು ನಗರಗಳ ಪೈಕಿ ಚೆನ್ನೈ ಮೊದಲ ಸ್ಥಾನದಲ್ಲಿದೆ.
ಇಲ್ಲಿ ಶೇ.41 ರಷ್ಟು ಮಳೆಯ ಕೊರತೆ ಉಂಟಾಗಿದ್ದು, ನೀರು ಒದಗಿಸುವುದೇ ಕಷ್ಟವಾಗಿದೆ. ಖಾಸಗಿಯಾಗಿ ಮತ್ತು ಸ್ಥಳೀಯ ಆಡಳಿತದ ಮೂಲಕ ನೀರು ಸರಬರಾಜು ಆಗುತ್ತಿದ್ದರೂ ನೀರು ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಸ್ಥಳೀಯ ನಗರಾಡಳಿತದಿಂದ ಟ್ಯಾಂಕರ್‍ಗಳಲ್ಲಿ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದು, ಮಹಿಳೆಯರು ಉದ್ಧನೆಯ ಸಾಲಿನಲ್ಲಿ ನಿಂತು ನೀರು ಪಡೆಯುವ ದೃಶ್ಯಗಳು ತುಂಬಾ ಚಿಂತಾಜನಕವಾಗಿವೆ.
ಖಾಸಗಿಯಾಗಿ ನೀರು ಪಡೆಯಲು ಹೋದರೆ 10 ರೂ.ಗಳವರೆಗೂ ಒಂದು ಬಿಂದಿಗೆ ನೀರಿಗೆ ವೆಚ್ಚ ಮಾಡಬೇಕು. ಅಂತಹ ಪರಿಸ್ಥಿತಿ ಅಲ್ಲಿ ನಿರ್ಮಾಣವಾಗಿದೆ. ಹಣ ಇರುವವರು ಖಾಸಗಿ ನೀರಿನ ಮೊರೆ ಹೋಗುತ್ತಿದ್ದರೆ, ಬಡತನದಲ್ಲಿರುವವರು ನಗರಾಡಳಿತದ ನೀರನ್ನೇ ಅವಲಂಬಿಸಿದ್ದಾರೆ. ಚೆನ್ನೈನ ಬಹುತೇಕ ಹೋಟೆಲ್‍ಗಳು, ರೆಸ್ಟೋರೆಂಟ್‍ಗಳು ಹಾಗೂ ಪ್ರಮುಖ ಸ್ಥಳಗಳಲ್ಲಿ “ಡೋಂಟ್ ವೇಸ್ಟ್ ವಾಟರ್’’ ಎಂಬ ಚೀಟಿಗಳು ರಾರಾಜಿಸುತ್ತಿವೆ.
ಅಂತರ್ಜಲ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ನಗರಕ್ಕೆ ನೀರು ಒದಗಿಸುತ್ತಿದ್ದ ಪ್ರಮುಖ ನದಿಯಾದ ಬಕಿಂಗ್ ಹ್ಯಾಮ್ ನಾಲೆ ಒಣಗಿ ಬಹಳಷ್ಟು ದಿನಗಳಾಗಿವೆ. ಸುತ್ತಮುತ್ತಲ ಯಾವುದೇ ಪ್ರದೇಶಕ್ಕೆ ಹೋದರೂ ನೀರಾವರಿ ಪ್ರದೇಶ ಕಾಣಿಸುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ನೀರನ್ನು ಪಡೆಯುವುದಕ್ಕಾಗಿಯೇ ಗಂಟೆಗಟ್ಟಲೆ ಸಮಯ ವ್ಯಯಿಸಬೇಕಾದ ಪರಿಸ್ಥಿತಿ ಇದೆ.
ನಮ್ಮ ತುಮಕೂರಿನಲ್ಲಿ ಈ ರೀತಿಯ ಪರಿಸ್ಥಿತಿಯಂತೂ ಸದ್ಯಕ್ಕಿಲ್ಲ. ಆದರೆ ಮುಂದೆ ಅಂತಹ ಪರಿಸ್ಥಿತಿ ಬಾರದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಪ್ರತಿಯೊಬ್ಬ ನಾಗರೀಕನೂ ನೀರಿನ ಬಗ್ಗೆ, ನೀರಿನ ಮಿತ ಬಳಕೆಯ ಬಗ್ಗೆ ಯೋಚಿಸಲೇಬೇಕಾಗಿದೆ. ಬೇರೆಯವರು ಏನಾದರೂ ಮಾಡಿಕೊಳ್ಳಲಿ, ನನ್ನಿಂದಲೇ ನೀರಿನ ಮಿತವ್ಯಯ ಉಂಟಾಗಲಿ ಎಂದುಕೊಂಡರೆ ಖಂಡಿತ ಅದು ಬೇರೆಯವರಿಗೆ ಮಾದರಿಯಾಗಬಹುದು. ಒಬ್ಬರಿಂದ ಮತ್ತೊಬ್ಬರಿಗೆ ಹರಡಿ ಇದೊಂದು ಆಂದೋಲನದ ರೀತಿಯ ಕೆಲಸವಾಗಬೇಕು. ಯಾರು ಎಲ್ಲೇ ಆಗಲಿ ನೀರನ್ನು ಅಪವ್ಯಯ ಮಾಡುತ್ತಿದ್ದರೆ ಕೂಡಲೇ ಅದನ್ನು ನಿಲ್ಲಿಸುವ ಪ್ರಯತ್ನ ಮಾಡುವತ್ತ ಎಲ್ಲರೂ ಗಮನ ಹರಿಸಬೇಕು. ಅದೇ ನಮ್ಮ ಕೊಡುಗೆಯಾಗಲಿ.