ನಿರ್ಮಾಣ ಹಂತದ ಪಾಲಿಕೆ ಕಚೇರಿ ಕಟ್ಟಡದ ಗೋಡೆ ಕುಸಿತ…!!

ತುಮಕೂರು
       ತುಮಕೂರು ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಪಾಲಿಕೆ ಕಚೇರಿಯ ಕಟ್ಟಡದ ಒಂದು ಪಾಶ್ರ್ವದ ಗೋಡೆ ಹಠಾತ್ತನೆ ಕುಸಿದುಬಿದ್ದು ಆತಂಕ ಸೃಷ್ಟಿಸಿದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
         ಮಧ್ಯಾಹ್ನ ಸುಮಾರು 2-30 ರ ಹೊತ್ತಿನಲ್ಲಿ ಹೊಸ ಕಟ್ಟಡದ ದಕ್ಷಿಣ ಭಾಗದಲ್ಲಿ  (`ತುಮಕೂರು ಒನ್’ ಕಚೇರಿ ಕಡೆ) ಮೊದಲ ಅಂತಸ್ತಿನಲ್ಲಿ ನಿರ್ಮಿಸಿದ್ದ ಗೋಡೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಇದರಿಂದ ಉಂಟಾದ ಶಬ್ದ ಹಾಗೂ ಧೂಳಿನಿಂದ ಪಕ್ಕದಲ್ಲಿರುವ ಪಾಲಿಕೆಯ ಇಂಜಿನಿಯರಿಂಗ್ ಶಾಖೆ (ಹಳೆಯ ಸರ್ವೋದಯ ಕಾಲೇಜು ಕಟ್ಟಡ)ಯಲ್ಲಿದ್ದವರು ಗಾಬರಿಗೊಂಡಿದ್ದಾರೆ. `ತುಮಕೂರು ಒನ್’ನಲ್ಲಿದ್ದ ಸಿಬ್ಬಂದಿ ಮತ್ತು ಸಾರ್ವಜನಿಕರೂ ಕ್ಷಣಕಾಲ ಭಯಭೀತರಾಗಿದ್ದಾರೆ. 
`
       ತುಮಕೂರು ಒನ್’ ಕಡೆಯಿಂದ ಹೊಸ ಕಟ್ಟಡದ ಪಕ್ಕದಲ್ಲಿ ನಡೆದು ಹೋಗುತ್ತಿದ್ದ ಮೂವರು (ತಾಯಿ, ಮಗು ಮತ್ತು ಓರ್ವ ಪುರುಷ) ತಕ್ಷಣ ಎಚ್ಚೆತ್ತು ಮುಂದಕ್ಕೆ ಓಡಿದ್ದರಿಂದ ಅದೃಷ್ಟವಶಾತ್ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸುಮಾರು ಐದೂವರೆ ಕೋಟಿ ರೂ. ಅಂದಾಜು ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣಗೊಳ್ಳುತ್ತಿದೆ.
ಆಯುಕ್ತರಿಂದ ಪರಿಶೀಲನೆ
         ಮೊದಲ ಅಂತಸ್ತಿನ ಗೋಡೆ ಕುಸಿದ ಘಟನೆ ನಡೆಯುತ್ತಿದ್ದಂತೆ ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು ಸ್ಥಳಕ್ಕೆ ಗಾಬರಿಯಿಂದ ಧಾವಿಸಿದರು. ಸ್ವತಃ ಆಯುಕ್ತ ಟಿ.ಭೂಪಾಲನ್ ಅವರು ಪಾಲಿಕೆಯ ಇಂಜಿನಿಯರ್‍ಗಳ ಜೊತೆಗೆ ಸ್ಥಳಕ್ಕಾಗಮಿಸಿ ಇಡೀ ಕಟ್ಟಡದ ಪರಿಶೀಲನೆ ನಡೆಸಿದರು. ಕಟ್ಟಡದ ಗುತ್ತಿಗೆ ಪಡೆದಿರುವವರು ಹಾಗೂ ಕಟ್ಟಡದ ಪರಿವೀಕ್ಷಣೆ ನಡೆಸುವ ಪಾಲಿಕೆಯ ಇಂಜಿನಿಯರ್ ಜೊತೆಗೆ ಕಟ್ಟಡದ ಕಾಮಗಾರಿಯ ಗುಣಮಟ್ಟದ ಬಗ್ಗೆ ಚರ್ಚಿಸಿದರು. 
          ಈ ಮಧ್ಯ  ಕಟ್ಟಡದ ಗೋಡೆ ಕುಸಿದು ಅವಶೇಷಗಳು ಕೆಳಕ್ಕೆ ಬೀಳುತ್ತಿದ್ದಂತೆ ಎಚ್ಚೆತ್ತುಕೊಂಡ ಗುತ್ತಿಗೆದಾರರು ತಕ್ಷಣವೇ ಸದರಿ ಕಟ್ಟಡ ಅವಶೇಷಗಳನ್ನು ಅಲ್ಲಿಂದ ಸಾಗಿಸಿದ್ದು, ಆ ಜಾಗವನ್ನು ಸ್ವಚ್ಛಗೊಳಿಸಿದ್ದಾರೆ. ಸದರಿ ಅವಶೇಷಗಳನ್ನು ಸಮೀಪದ ಇಂದಿರಾ ಕ್ಯಾಂಟೀನ್ ಹಿಂಬದಿ ಪಾಲಿಕೆಯ ಹೊಸ ಕಟ್ಟಡದ ಭಾಗಕ್ಕೆ ಹೊಂದಿಕೊಂಡಂತೆ ಇದ್ದ ಹಳ್ಳಕ್ಕೆ ತುಂಬಲಾಗಿದೆ.
ಪಾಲಿಕೆ ನಿಗಾ ಇಟ್ಟಿಲ್ಲವೇ?
           ಮಂಗಳವಾರ ಪಾಲಿಕೆ ಕಚೇರಿಯ ತುಂಬ ಈ ವಿಷಯವೇ ಭಾರಿ ಚರ್ಚೆಯ ವಿಷಯವಾಗಿತ್ತು. ಹೊಸ ಕಟ್ಟಡದ ಗುಣಮಟ್ಟದ ಬಗ್ಗೆ, ಹೊಸ ಕಟ್ಟಡ ನಿರ್ಮಾಣವನ್ನು ಪಾಲಿಕೆಯ ಇಂಜಿನಿಯರ್‍ಗಳು ಯಾವ ರೀತಿ ಪರಿವೀಕ್ಷಣೆ ಮಾಡುತ್ತಿದ್ದಾರೆಂಬ ವಿಷಯಗಳು ಈ ಚರ್ಚೆಯಲ್ಲಿ ಬಂದುಹೋದವು. “ನಿರ್ಮಾಣ ಹಂತದಲ್ಲೇ ಈ ರೀತಿ ಆಗಿದೆಯಲ್ಲ…” ಎಂಬ ಉದ್ಗಾರ ಕೇಳಿಬಂದಿತು. “ಪಾಲಿಕೆಯ ಇಂಜಿನಿಯರ್‍ಗಳು ಊರಿನಲ್ಲಿ ನಿರ್ಮಾಣವಾಗುವ ಕಟ್ಟಡಗಳನ್ನೆಲ್ಲ ಪರಿಶೀಲನೆ ಮಾಡುತ್ತಾರೆ. ಆದರೆ ಪಾಲಿಕೆ ಆವರಣದಲ್ಲಿರುವ ಪಾಲಿಕೆಯ ಕಚೇರಿ ಕಾಮಗಾರಿಯ ಬಗೆಗೇ ಇವರು ನಿಗಾ ಇಡುವುದಿಲ್ಲವೇ?” ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದರು.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link