ತುಮಕೂರು:
ಮನೆಯ ಯಾವುದಾದರೂ ನಲ್ಲಿಯಲ್ಲಿ ನೀರು ತೊಟ್ಟಿಕ್ಕುತ್ತಿದ್ದರೆ ಆ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಬೇಡ. ಮನೆಯಲ್ಲಿ ಮಾತ್ರವಲ್ಲ, ಸಾರ್ವಜನಿಕ ಸ್ಥಳಗಳಲ್ಲಿಯೂ ಈ ಬಗ್ಗೆ ಉದಾಸೀನ ಮಾಡುವುದು ಬೇಡ. ಒಂದು ಹನಿ ನೀರು ಹೋದರೆ ಏನಾಯಿತು ಎನ್ನುವ ಧೋರಣೆಗೆ ಅಂಟಿಕೊಂಡರೆ ಒಂದು ದಿನಕ್ಕೆ ಅದೆಷ್ಟು ಲೀಟರ್ ನೀರು ವ್ಯಯವಾಗುತ್ತದೆ ಎಂಬುದರ ಲೆಕ್ಕಾಚಾರಗಳತ್ತ ಗಮನ ಹರಿಸಿ
ನವೀನ ಮಾದರಿಯ ಮನೆಗಳು ಹೆಚ್ಚಿದಂತೆಲ್ಲಾ ಬಗೆ ಬಗೆಯ ವಿನ್ಯಾಸಕ್ಕೆ ಹೊಂದಿಕೊಳ್ಳುತ್ತೇವೆ.
ಬಹಳಷ್ಟು ಕಡೆ ನಲ್ಲಿಗಳನ್ನು ಅಳವಡಿಸಿಕೊಳ್ಳುತ್ತೇವೆ. ಅದೆಷ್ಟೋ ನಲ್ಲಿಗಳು ವರ್ಷ ತುಂಬುವುದರೊಳಗೆ ಕೆಟ್ಟು ಹೋಗುತ್ತವೆ. ನಲ್ಲಿಗಳಿಂದ ನೀರು ಲೀಕೇಜ್ ಆಗುತ್ತದೆ. ಮುಂದಿನ ತಿಂಗಳು ಸರಿಪಡಿಸಿದರಾಯಿತು. ನಮಗೀಗ ವಿಪರೀತ ಕೆಲಸವಿದೆ. ರಜೆ ಬಂದಾಗ ನೋಡಿಕೊಳ್ಳೋಣ ಎನ್ನುವ ತೀರ್ಮಾನಕ್ಕೆ ಬರುವುದು ಸಹಜ. ಆದರೆ ಅಷ್ಟು ದಿವಸಗಳ ಅವಧಿಯಲ್ಲಿ ನೀರು ಎಷ್ಟು ಪೋಲಾಗುತ್ತದೆ ಎಂಬುದರ ಅರಿವು ನಮಗಿರಬೇಕಲ್ಲವೇ?
ಪಾತ್ರೆ ತೊಳೆಯುವಾಗ, ಊಟದ ನಂತರ ಕೈ ಸ್ವಚ್ಛಗೊಳಿಸುವಾಗ ನಲ್ಲಿ ಸಂಪೂರ್ಣ ಸ್ಥಗಿತಗೊಂಡಿದೆಯೇ ಎಂಬುದರತ್ತ ಗಮನ ಹರಿಸಬೇಕು. ಕೆಲವೊಮ್ಮೆ ನಲ್ಲಿ ತಿರುವಿದರೂ ನೀರು ಪೋಲಾಗುತ್ತಲೇ ಇರುತ್ತದೆ. ಮನೆಯಲ್ಲಿ ಇರುವ ಮಕ್ಕಳು ಪದೇ ಪದೇ ನಲ್ಲಿಗಳನ್ನು ತಿರುವಿ ಆಟ ಆಡುವುದು ಸಹಜ. ಮಕ್ಕಳಿಗೆ ಅದು ಕುತೂಹಲವಾಗಿರಬಹುದು. ಈ ಬಗ್ಗೆಯೂ ಗಮನ ವಹಿಸಬೇಕು. ಯಾರಾದರೂ ಮನೆಗೆ ಬಂದಾಗ, ಪಟ್ಟಣಗಳ ಅರಿವಿಲ್ಲದ ಗ್ರಾಮೀಣ ಜನತೆ ಮನೆಗೆ ಆಗಮಿಸಿದಾಗ ನೀರಿನ ಉಪಯೋಗ, ನಲ್ಲಿಗಳ ನಿರ್ವಹಣೆ ಬಗ್ಗೆ ತಿಳಿ ಹೇಳಬೇಕು. ಅವರಿಗೆ ನಮಗಿಂತಲೂ ಹೆಚ್ಚಿನ ಅರಿವು ಇರುತ್ತದೆ. ಆದರೆ ನಿರ್ವಹಣೆಯ ಬಗ್ಗೆ ಕೊರತೆ ಇರುತ್ತದೆ.
ಕೆಲವರು ವಾಹನಗಳನ್ನು ತೊಳೆಯುವಾಗ ವಿಪರೀತ ನೀರು ಖರ್ಚು ಮಾಡುತ್ತಾರೆ. ನಲ್ಲಿಗೆ ಪೈಪ್ ಜೋಡಣೆ ಮಾಡಿ ಕಾರಿನ ಎಲ್ಲ ಭಾಗಗಳಿಗೂ ನೀರು ಹಾಯಿಸುವ ಕೆಲಸ ಮಾಡುತ್ತಾರೆ. ನಿರಂತರವಾಗಿ ನಲ್ಲಿಯಿಂದ ಹೀಗೆ ನೀರು ಹರಿದರೆ ಅದೆಷ್ಟು ಪೋಲಾಗಬಹುದು ಎಂಬ ಎಚ್ಚರ ಇರಲಿ. ಅದರ ಬದಲಿಗೆ ಬಕೇಟ್‍ನಲ್ಲಿಯೇ ನೀರು ಹಾಕಿ ತೊಳೆಯಬಹುದಲ್ಲವೆ? ಕಾರಿಗೆ ನೀರು ಹರಿಸುತ್ತಾ ತೊಳೆಯುತ್ತಿರುವಾಗ ಪಕ್ಕದಲ್ಲಿ ಪೈಪ್‍ನಿಂದ ನೀರು ಹರಿದು ಹೋಗುತ್ತಲೇ ಇರುತ್ತದೆ. ಮನೆಯ ಮಾಲೀಕರಿರಬಹುದು ಅಥವಾ ಕಾರು ಸ್ವಚ್ಛ ಮಾಡುವ ಡ್ರೈವರ್ ಇರಬಹುದು. ಎಲ್ಲರಿಗೂ ಈ ಬಗ್ಗೆ ಮಾಹಿತಿ ವಿನಿಮಯ ಅಗತ್ಯ.
ಮನೆಯ ಆವರಣದಲ್ಲಿ ಸಣ್ಣಪುಟ್ಟ ಗಿಡ ಬೆಳೆಸುವುದು ಉತ್ತಮ ಸಂಪ್ರದಾಯ. ಕೆಲವರು ಮನೆಯ ಹಿತ್ತಲಿನಲ್ಲಿ ಸೊಪ್ಪು, ತರಕಾರಿ ಬೆಳೆಯುತ್ತಾರೆ. ಇದಕ್ಕೆ ನೀರು ಬೇಕಾಗುತ್ತದೆ. ಆದರೆ ಎಷ್ಟು ನೀರು ಹಾಕಬೇಕು ಎಂಬ ಬಗ್ಗೆ ತರಬೇತಿ ಅಗತ್ಯವಿಲ್ಲ. ಸಾಮಾನ್ಯ ಜ್ಞಾನ ಇದ್ದರೆ ಸಾಕು. ಅದಕ್ಕಾಗಿಯೇ ವಿಶೇಷ ಶುದ್ಧ ಕುಡಿಯುವ ನೀರು ಹಾಕುವ ಅಗತ್ಯವಿಲ್ಲ. ತರಕಾರಿ, ಸೊಪ್ಪು, ಇತರೆ ಪದಾರ್ಥಗಳನ್ನು ಸ್ವಚ್ಛಗೊಳಿಸಿದ ನೀರನ್ನೇ ಹಾಕಿದರೂ ಸಾಕು.
ಆ ಗಿಡಗಳು ತನ್ನಷ್ಟಕ್ಕೆ ತಾನೇ ಬೆಳೆದುಕೊಳ್ಳುತ್ತಾ ಹೋಗುತ್ತವೆ. ಇಲ್ಲಿಯೂ ಸಹ ಪೈಪ್ ಬಳಕೆ ಅನವಶ್ಯಕ. ಪೈಪಿನಲ್ಲಿ ನೀರು ಹಾಯಿಸಿದರೆ ಒಂದೇ ಸಮನೆ ಸರಾಗವಾಗಿ ನೀರು ಹರಿಯುತ್ತದೆ. ಸಾಕಷ್ಟು ನೀರು ಆವಿಯಾಗುತ್ತದೆ. ಬೇರೆ ಕಡೆಗೂ ಹರಿದು ಹೋಗುತ್ತದೆ. ಗಿಡಗಳಿಗೆ ವಾಟರಿಂಗ್ ಕ್ಯಾನ್ ಮೂಲಕ ನೀರು ಹಾಯಿಸುವುದು ಹೆಚ್ಚು ಉಪಯುಕ್ತ. ತೋಟಗಳಿಗೆ ನಸುಕಿನಲ್ಲಿ ಇಲ್ಲವೆ ರಾತ್ರಿಯ ವೇಳೆ ನೀರು ಹಾಯಿಸಬೇಕು. ಇದರಿಂದ ಶೀಘ್ರ ನೀರು ಆವಿಯಾಗುವುದು ತಪ್ಪುತ್ತದೆ. ಅಲಂಕಾರಿಕ ಗಿಡಗಳನ್ನು ಬೆಳೆಸುವಾಗ ಕಡಿಮೆ ನೀರು ಬೇಡುವ ಸಸ್ಯೆಗಳನ್ನೇ ಬೆಳೆಸಬೇಕು. ಗಿಡಗಳಿಗೆ ಒಮ್ಮೆ ನೀರು ಹಾಯಿಸಿದರೆ ಸಾಕು. ಪದೇ ಪದೇ ನೀರು ಹಾಯಸುವುದು ಸರಿಯಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
