ಏ.20ರ ತನಕ ಹೊರ ರಾಜ್ಯಗಳಿಗೆ ಹುಣಿಸೇಹಣ್ಣು ಸಾಗಾಣಿಕೆ ಇಲ್ಲ.

ತುಮಕೂರು

     ರಾಜ್ಯ ಸರ್ಕಾರದ ಆದೇಶದಂತೆ ಹೊರ ರಾಜ್ಯಗಳಿಗೆ ಹುಣಿಸೆಹಣ್ಣು ಸಾಗಾಣಿಕೆಗೆ ಜಿಲ್ಲಾಡಳಿತ ಅನುಮತಿ ನೀಡಿಲ್ಲ, ಹೀಗಾಗಿ ರೈತರಿಂದ ಹುಣಿಸೇಹಣ್ಣು ಖರೀದಿಸಿರುವ ವರ್ತಕರು ಹಾಗೂ ಮಾರಾಟ ಮಾಡಬೇಕಾದ ರೈತರಿಗೆ ಸಮಸ್ಯೆಯಾಗಿದೆ.ತುಮಕೂರು ಜಿಲ್ಲೆಯಲ್ಲಿ ಹುಣಿಸೇಹಣ್ಣು ಪ್ರಮುಖ ವಾಣಿಜ್ಯ ಬೆಳೆ. ಹುಣಿಸೆ ಸೀಜನ್ ಬೆಳೆ, ಜನವರಿಯಿಂದ ಮೇ ತಿಂಗಳವರೆಗೆ ಮಾತ್ರ ಸರಕು ಇರುತ್ತದೆ. ಕೊರೊನಾ ಸೋಂಕು ತಡೆಗಾಗಿ ದೇಶಾದ್ಯಂತ ಲಾಕ್‍ಡೌನ್ ವಿಧಿಸಿದ್ದರಿಂದ ಹುಣಿಸೇಹಣ್ಣಿನ ಸರಕು ಹೊರ ರಾಜ್ಯಗಳಿಗೆ ರವಾನೆಯಾಗದೆ ವರ್ತಕರು ಹಾಗೂ ರೈತರಿಗೆ ತೊಂದರೆಯಾಗಿದೆ.

      ಜಿಲ್ಲ್ಲೆಯ ಶೇಕಡ 90ರಷ್ಟು ಹುಣಿಸೇಹಣ್ಣು ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಕ್ಕೆ ರವಾನೆಯಾಗುತ್ತದೆ. ಈಗ ಆ ರಾಜ್ಯಗಳಲ್ಲಿ ಕೊರೊನಾ ಸೋಂಕು ಹರಡುವಿಕೆ ಪ್ರಮಾಣ ಹೆಚ್ಚಾಗಿರುವುದರಿಂದ ಹುಣಿಸೆಹಣ್ಣನ್ನು ಈ ರಾಜ್ಯಗಳಿಗೆ ಸಾಗಣೆ ಮಾಡಲು ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಧಾನ್ಯ ವ್ಯಾಪಾರಿಗಳ ಸಂಘದ ಪ್ರತಿನಿಧಿಗಳು ಬುಧವಾರ ಜಿಲ್ಲಾಧಿಕಾರಿಗಳನ್ನು ಭೇಟಿ ಹೊರ ರಾಜ್ಯಗಳಿಗೆ ಹುಣಿಸೇಹಣ್ಣು ಸಾಗಿಸಲು ಅನುಮತಿ ಕೋರಿದರು.

     ಜಿಲ್ಲಾಧಿಕಾರಿ ಡಾ. ರಾಕೇಶ್‍ಕುಮಾರ್ ಅವರು ಎಪಿಎಂಸಿ ಕಾರ್ಯದರ್ಶಿ ಡಿ.ಆರ್.ಪುಷ್ಪಾ ಅವರೊಂದಿಗೆ ಚರ್ಚಿಸಿ, ರಾಜ್ಯ ಸರ್ಕಾರದ ಆದೇಶದನ್ವಯ ಈ ತಿಂಗಳ 20ರವರೆಗೆ ಹೊರರಾಜ್ಯಗಳಿಗೆ ಸರಕು ಸಾಗಾಣಿಕೆಗೆ ಅವಕಾಶವಿಲ್ಲ ಎಂದರು. 20ರ ನಂತರ ಸರ್ಕಾರದ ಆದೇಶ ನೋಡಿಕೊಂಡು ಸರಕು ಸಾಗಣಿಕೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

     ತುಮಕೂರು ಎಪಿಎಂಸಿಯ ವರ್ತಕರು ಈಗಾಗಲೇ ಸುಮಾರು 50 ಲೋಡು ಹುಣಿಸೇಹಣ್ಣು ಖರೀದಿ ಮಾಡಿ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಗೆ ರವಾನೆ ಮಾಡಲು ಅನುಮತಿಗೆ ಕಾಯುತ್ತಿದ್ದಾರೆ. ವಿಳಂಬ ಮಾಡಿದರೆ ಹುಣಿಸೇಹಣ್ಣಿನ ಬಣ್ಣ ಬದಲಾಗಿ ಬೆಲೆ ಕುಸಿದು ವರ್ತಕರು ನಷ್ಟ ಅನುಭವಿಸಬೇಕಾಗುತ್ತದೆ ಎಂದು ಧಾನ್ಯ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಿ. ಹೆಚ್.ಪರಮಶಿವಯ್ಯ ಹಾಗೂ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ವರ್ತಕರು ಖರೀದಿ ಮಾಡದಿದ್ದರೆ ಬೆಲೆ ಕಡಿಮೆಯಾಗಿ ರೈತರಿಗೆ ನಷ್ಟವಾಗುತ್ತದೆ, ಖರೀದಿ ಮಾಡಿ ಹೊರ ರಾಜ್ಯಗಳಲ್ಲಿ ಮಾರಾಟ ಮಾಡದಿದ್ದರೆ ವರ್ತಕರೂ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಸಮಸ್ಯೆ ಹೇಳಿಕೊಂಡರು.

     ಏಪ್ರಿಲ್ 20ರವರೆಗೆ ಅನುಮತಿ ನೀಡಲು ಸಾಧ್ಯವಿಲ್ಲ, ನಂತರ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಮಾಡುವುದಾಗಿ ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.ಸಾಗಾಣಿಕೆಗೆ ಅನುಮತಿ ಸಿಗದ ಕಾರಣ ರೈತರಿಂದ ಹುಣಿಸೆಹಣ್ಣು ಖರೀದಿ ಮಾಡಲು ವರ್ತಕರು ಹಿಂದೆ ಮುಂದೆ ನೋಡುವಂತಾಗಿದೆ, ಕೊಳ್ಳುವವರಿಲ್ಲದೆ ಹುಣಿಸೇಹಣ್ಣಿನ ಬೆಲೆ ಕುಸಿದಿದೆ. ಕಳೆದ ತಿಂಗಳು ಕ್ವಿಂಟಾಲ್ ಹುಣಿಸೇಹಣ್ಣು ಗರಿಷ್ಟ 30ಸಾವಿರ ರೂ.ಗೆ ಮಾರಾಟವಾಗಿತ್ತು. ಈಗ ಸರಾಸರಿ 12ರಿಂದ 18 ಸಾವಿರ ರೂ.ಗಳಿಗೆ ಇಳಿದಿದೆ. ಕೊಂಡ ಮಾಲು ಹೊರ ರಾಜ್ಯಗಳಿಗೆ ಹೋದರೆ, ರೈತರಿಗೆ ಉತ್ತಮ ಬೆಲೆಯೂ ದೊರೆಯುತ್ತದೆ. ರೈತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ವರ್ತಕರು ಲಾಕ್‍ಡೌನ್ ಸಂದರ್ಭದಲ್ಲೂ ಹುಣಿಸೆಹಣ್ಣು ಖರೀದಿ ಮಾಡಿದರು. ಈಗ ಅಂತರ ರಾಜ್ಯದ ಪರ್ಮಿಟ್ ಅನ್ನು ಎಪಿಎಂಸಿಯವರು ನೀಡದ ಕಾರಣ ಮಾಲು ಕಳಿಸಲು ಸಾಧ್ಯವಾಗದೆ ನಷ್ಟ ಅನುಭವಿಸುವಂತಾಗಿದೆ. ಈಗಾಗಲೇ ವರ್ತಕರು ಖರೀದಿ ಮಾಡಿರುವ ಸುಮಾರು 50 ಲೋಡು ಹುಣಿಸೆಹಣ್ಣು ದಾಸ್ತಾನಿದೆ. ಕೇಂದ್ರ ಸರ್ಕಾರವು ಅಗತ್ಯ ವಸ್ತುಗಳ ಅಂತರರಾಜ್ಯದ ಸರಕು ಸಾಗಣೆಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಂಡಿರುವುದಾಗಿ ಹೇಳಿದೆ. ಆದರೆ ಇಲ್ಲಿ ಅನುಮತಿ ನೀಡುತ್ತಿಲ್ಲ. ಹುಣಿಸೇಹಣ್ಣನ್ನೂ ಅಗತ್ಯವಸ್ತುವೆಂದು ಪರಿಗಣಿಸಿ ರವಾನೆಗೆ ಅನುಮತಿ ನೀಡಬೇಕು ಎಂದು ಜಿ.ಹೆಚ್.ಪರಮಶಿವಯ್ಯ ಹೇಳಿದರು.

      ತುಮಕೂರು ಎಪಿಎಂಸಿ ಮಾರುಕಟ್ಟೆಗೆ ವಾರಕ್ಕೆ ಸುಮಾರು 50 ಲೋಡು ಹುಣಿಸೇಹಣ್ಣನ್ನು ರೈತರು ತರುತ್ತಾರೆ. ಜಿಲ್ಲೆಯ ಹೆಚ್ಚಿನ ಪ್ರಮಾಣದ ಹುಣಿಸೇಹಣ್ಣು ತಮಿಳುನಾಡು, ಆಂಧ್ರ, ತೆಲಂಗಾಣ ರಾಜ್ಯಕ್ಕೆ ರವಾನೆಯಾಗುತ್ತದೆ. ಆ ರಾಜ್ಯಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗಿರುವ ಕಾರಣ ಹುಣಿಸೇಹಣ್ಣು ಸಾಗಾಣಿಕೆಗೆ ರಾಜ್ಯ ಸರ್ಕಾರ ಅನುಮತಿ ನೀಡಿಲ್ಲ. ಆದರೆ, ಸ್ಥಳೀಯವಾಗಿ ಮಾರಾಟಕ್ಕೆ ತೊಂದರೆ ಇಲ್ಲ.

      ಹುಣಿಸೇಹಣ್ಣು ಅತ್ಯಂತ ಅಗತ್ಯ ವಸ್ತು ಎಂದು ಪರಿಗಣಿಸಲಾಗಿಲ್ಲ ಎಂದು ಎಪಿಎಂಸಿ ಕಾರ್ಯದರ್ಶಿ ಡಿ.ಆರ್.ಪುಷ್ಪಾ ಹೇಳಿದರು.ಎಪಿಎಂಸಿಯ ಅನುಮತಿ ಸಿಗದ ಕಾರಣ ಹುಣಿಸೆಹಣ್ಣು ಖರೀದಿರುವ ವರ್ತಕರು, ಹಣ್ಣನ್ನು ಕೋಲ್ಡ್‍ಸ್ಟೋರೇಜಿನಲ್ಲಿ ದಾಸ್ತಾನು ಮಾಡಲು ಅವಕಾಶವಿಲ್ಲದೆ, ಮಾರಾಟ ಮಾಡಲಾಗದೆ ತೊಂದರೆ ಅನುಭವಿಸುವಂತಾಗಿದೆ. ಜೊತೆಗೆ ಹೊಸದಾಗಿ ಹುಣಿಸೇಹಣ್ಣು ಖರೀದಿ ಮಾಡಲು ಹಿಂಜರಿಯುತ್ತಿದ್ದಾರೆ, ಹೀಗಾಗಿ ಹುಣಿಸೇ ಬೆಳೆಗಾರರೂ ನಷ್ಟ ಅನುಭವಿಸುವಂತಾಗಿದೆ. ರೈತರು ಈ ತಿಂಗಳ 20ರವರೆಗೆ ಮಾರುಕಟ್ಟೆಗೆ ಹುಣಿಸೇಹಣ್ಣನ್ನು ತರುವುದು ಬೇಡ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link