ಮಂಗಳೂರು
ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಅವರಿಗೆ ಕೇಂದ್ರ ಸರ್ಕಾರದ ವ್ಯವಸ್ಥೆಯ ಬಗ್ಗೆ ಅಸಮಾಧಾನವಿದೆ, ಹೀಗಾಗಿ ಅವರು ರಾಜೀನಾಮೆ ನೀಡಿದ್ದಾರೆ, ಈ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡಿಲ್ಲ ಎಂದು ಮಾಜಿ ಸಚಿವ ರಮಾನಾಥ್ ರೈ ಹೇಳಿದ್ದಾರೆ
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಂಥಿಲ್ ಒಬ್ಬ ಪ್ರಾಮಾಣಿಕ ಮತ್ತು ಜನಪರ ಜಿಲ್ಲಾಧಿಕಾರಿ. ಅವರ ರಾಜೀನಾಮೆ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡಿಲ್ಲ. ಈ ಹಿಂದೆ ಐಎಎಸ್ ಅಧಿಕಾರಿ ಡಿ.ಕೆ.ರವಿ ಆತ್ಮಹತ್ಯೆ ವಿಚಾರದಲ್ಲಿ ರಾಜಕೀಯ ಮಾಡಿದ್ದು ಬಿಜೆಪಿ. ನಾವು ಸೆಂಥಿಲ್ ಅವರಂತಹ ಉತ್ತಮ ಅಧಿಕಾರಿ ಇರಬೇಕು ಎಂದು ಪ್ರತಿಭಟಿಸುತ್ತೇವೆ ಎಂದರು
ಸಾವಿನಲ್ಲಿ ಕೀಳು ಮಟ್ಟದ ರಾಜಕೀಯ ಈ ಜಿಲ್ಲೆಯಲ್ಲಿ ಬಿಜೆಪಿ ಮಾಡಿದೆ. ಅಕ್ರಮ ಮರಳು ಗಣಿಗಾರಿಕೆ ವಿಚಾರದಲ್ಲಿ ಜಿಲ್ಲಾಧಿಕಾರಿ ಸೆಂಥಿಲ್ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಕೆಲಸ ಮಾಡಿದ್ದಾರೆ. ಅವರ ಪ್ರಾಮಾಣಿಕತೆ ಬಗ್ಗೆ ಈವರೆಗೆ ಯಾರೂ ಮಾತನಾಡಿಲ್ಲ. ಆದರೆ, ಕೇಂದ್ರ ಸರ್ಕಾರದ ವಿರುದ್ಧ ಮಾತಾಡಿದ್ದಕ್ಕೆ ಇಂಥ ಆರೋಪಗಳು ಆರಂಭವಾಗಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು
ಲಾರಿ ಮಾಲಕರ ಸಂಘ ಸೇರಿ ಬೇರೆ ರೀತಿಯಲ್ಲಿ ಜಿಲ್ಲಾಧಿಕಾರಿಗಳ ವಿರುದ್ಧ ಆರೋಪ ಮಾಡಲು ಸಂಘಟನೆಗಳನ್ನು ಬಳಸಲಾಗುತ್ತಿದೆ. ಆದರೆ, ಸಸಿಕಾಂತ್ ಸೆಂಥಿಲ್ ಭ್ರಷ್ಟರು ಎಂಬುವುದನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಇದು ನಿರಾಧಾರ ಎಂದು ಹೇಳಿದರು.
ಮೊನ್ನೆಯವರೆಗೆ ಬಿಜೆಪಿ ಮುಖಂಡರು ಕೂಡ ಸೆಂಥಿಲ್ ಒಳ್ಳೆಯ ಅಧಿಕಾರಿ ಎಂದಿದ್ದರು. ಈಗ ಅವರನ್ನೇ ತಪ್ಪಿತಸ್ಥರು ಮಾಡುವ ಕೆಲಸ ನಡೆಯುತ್ತಿದೆ ಎಂದು ಅವರು ಕಿಡಿಕಾರಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








