ಮೈತ್ರಿ ಯಾವಾಗ ಬೀಳುತ್ತೋ ಗೊತ್ತಿಲ್ಲ: ಶಿವರಾಜ್‍ಸಿಂಗ್‍ಚೌಹಾಣ್

ತುಮಕೂರು:

      ರಾಜ್ಯದಲ್ಲಿರುವ ಮೈತ್ರಿ ಸರ್ಕಾರ ಯಾವಾಗ ಬೀಳುತ್ತದೆಯೋ ಗೊತ್ತಿಲ್ಲ, ಅಂತಹ ಸರ್ಕಾರದಿಂದ ಅಭಿವೃದ್ಧಿಯನ್ನು ನಿರೀಕ್ಷಿಸಲು ಸಾಧ್ಯವೆ? ದೇಶದ ಅಭಿವೃದ್ಧಿ ಆಗಬೇಕೆಂದರೆ ಅದು ನರೇಂದ್ರ ಮೋದಿ ಅವರಿಂದ ಮಾತ್ರ ಸಾಧ್ಯ ಎಂದು ಮಧ್ಯಪ್ರದೇಶ ಮಾಜಿ ಸಿಎಂ ಹಾಗೂ ಬಿಜೆಪಿ ಚುನಾವಣಾ ಪ್ರಣಾಳಿಕೆ ಅಧ್ಯಕ್ಷ ಶಿವರಾಜ್‍ಸಿಂಗ್‍ಚೌಹಾಣ್ ತಿಳಿಸಿದ್ದಾರೆ.

       ನಗರದ ಹೊರವಲಯದ ಕಲ್ಯಾಣ ಮಂಟಪದಲ್ಲಿ ರೈತ ಮೋರ್ಚಾ ವತಿಯಿಂದ ನಡೆದ ರೈತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಲೂಟಿ ಮತ್ತು ಹಂಚಿಕೆ ಸರ್ಕಾರದೊಂದಿಗೆ ಮಿತ್ರ ಪಕ್ಷಗಳು ಸೇರಿ ರಚಿಸಿಕೊಂಡಿರುವ ಘಟಬಂಧನ್‍ನಲ್ಲಿ ಸೇನಾಧಿಪತಿ ಇಲ್ಲದೇ ಚುನಾವಣೆ ಎದುರಿಸುವ ಮೂಲಕ ಬಿಜೆಪಿ ಸೇನಾಧಿಪತಿಯನ್ನು ಸೋಲಿಸಲು ಮುಂದಾಗುತ್ತಿವೆ, ರೈತರು ಮೋದಿ ಬೆಂಬಲಕ್ಕೆ ನಿಲ್ಲಬೇಕು ಎಂದು ಕರೆ ನೀಡಿದರು.

        ನರೇಂದ್ರ ಮೋದಿ ಅವರ ಸರ್ಕಾರ ಪಾರದರ್ಶಕ ಆಡಳಿತವನ್ನು ನೀಡಿದೆ, ಶ್ಯಾಮ್‍ಮುಖರ್ಜಿ, ದೀನ್‍ದಯಾಳ್ ಉಪಾಧ್ಯಾಯ ಅವರ ಆಶಯಗಳನ್ನು ಮೋದಿ, ಅಮಿತ್ ಶಾ ಜೋಡಿ ಈಡೇರಿಸುತ್ತಿದೆ. ನವ ಭಾರತವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ, ಸ್ವಚ್ಛ ಭಾರತ, ಆಯುಷ್ಮಾನ್ ಭಾರತದಂತಹ ಕಾರ್ಯಕ್ರಮಗಳು ದೇಶದ ಅಭಿವೃದ್ಧಿಗೆ ಕಾರಣವಾಗಿವೆ, ಯುವ ಜನರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆ, ನವ ಭಾರತ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ ಎಂದರು.

        ನವ ಭಾರತದ ಬೆನ್ನುಲುಬಾಗಿರುವ ರೈತರ ಅಭಿವೃದ್ಧಿಗಾಗಿ ಈಗಾಗಲೇ ಕಿಸಾನ್ ಸಮ್ಮಾನ್, ಫಸಲ್ ಭೀಮಾದಂತಹ ಯೋಜನೆಗಳನ್ನು ಜಾರಿಗೆ ತಂದಿದ್ದು, ರೈತರ ಅಭಿಪ್ರಾಯವನ್ನು ಸಂಗ್ರಹಿಸುವ ಮೂಲಕ ಪಕ್ಷದ ಪ್ರಣಾಳಿಕೆ ಸಿದ್ಧ ಪಡಿಸುವ ಜೊತೆಗೆ ರೈತಸ್ನೇಹಿ ಸರ್ಕಾರವನ್ನು ಮುಂದಿನ ದಿನಗಳಲ್ಲಿ ನರೇಂದ್ರ ಮೋದಿ ಅವರು ನಡೆಸಲಿದ್ದಾರೆ. ಅದಕ್ಕಾಗಿ ದೇಶದ ಎಲ್ಲೆಡೆಯಿಂದ ರೈತರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತಿದ್ದು, ರೈತರು ತಮ್ಮ ಅಮೂಲ್ಯವಾದ ಸಲಹೆಗಳನ್ನು ನೀಡುವಂತೆ ವಿನಂತಿಸಿಕೊಂಡರು.

       ಕಾರ್ಯಕ್ರಮದಲ್ಲಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷರಾದ ಲಕ್ಷ್ಮಣ್ ಸವದಿ ಮಾತನಾಡಿ, ಸ್ವಾಮಿನಾಥನ್ ಆಯೋಗದ ಶಿಫಾರಸ್ಸುಗಳನ್ನು ಜಾರಿಗೆ ತಂದಿರುವುದು ಪ್ರಧಾನಿ ನರೇಂದ್ರ ಮೋದಿ ಮಾತ್ರ, 22 ಬೆಳೆಗಳಿಗೆ ಬೆಂಬಲ ಬೆಲೆಯನ್ನು ಘೋಷಿಸಿದ್ದು, ಸ್ವಾತಂತ್ರ್ಯ ನಂತರದ ಅವೈಜ್ಞಾನಿಕ ನೀತಿಯಿಂದಾಗಿ ಇಂದು ರೈತರು ಸಾಲದ ಕೂಪದಲ್ಲಿ ಮುಳುಗಿದ್ದಾರೆ, ವಾಜಪೇಯಿ ಅವರು ಗಂಗಾ ನದಿ ಜೋಡಣೆಯ ಕನಸು ಕಂಡಿದ್ದರು, ಮೋದಿ ಮತ್ತೊಮ್ಮೆ ಪ್ರಧಾನಿಯಾಗುವ ಮೂಲಕ ಅಟಲ್‍ಜೀ ಕನಸು ಈಡೇರಿಸಲಿದ್ದಾರೆ ಎಂದು ಹೇಳಿದರು.

        ರೈತರಿಗೆ ಬೇಕಿರುವುದು ಸಾಲಮನ್ನಾವಲ್ಲ, ಸೈನಿಕರು, ರೈತರು ಶ್ರೇಷ್ಠ ಸಮುದಾಯದವರು, ಅವರು ಯಾರಿಂದಲೂ ಬೇಡುವುದಿಲ್ಲ ಆದರೆ ರೈತರು ಈ ಮೈತ್ರಿ ಸರ್ಕಾರದ ಮುಂದೆ ಸಾಲಮನ್ನಾಕ್ಕಾಗಿ ಬೇಡುವಂತಹ ಸ್ಥಿತಿ ನಿರ್ಮಾಣವಾಗಿದೆ. ರೈತರು ಬೆಂಬಲ ನೀಡಿದರೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ, ಗಂಗಾನದಿಯನ್ನು ಕೃಷ್ಣೆಯೊಂದಿಗೆ ಜೋಡಿಸುವ ಮೂಲಕ ಇಡೀ ವಿಶ್ವಕ್ಕೆ ಆಹಾರವನ್ನು ನೀಡುವಷ್ಟು ಶಕ್ತರನ್ನಾಗಿ ರೈತರನ್ನು ಮಾಡಲಿದ್ದಾರೆ ಎಂದು ಹೇಳಿದರು.

        ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿ ಭಾರತಿ ಮುಗದಮ್, ಸುರೇಶ್‍ಗೌಡ, ಶಾಸಕರಾದ ಮಾಧುಸ್ವಾಮಿ, ಜ್ಯೋತಿಗಣೇಶ್, ಮಸಾಲೆ ಜಯರಾಮ್, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ಕಿರಣ್‍ಕುಮಾರ್, ಮಾಜಿ ವಿಧಾನಪರಿಷತ್ ಸದಸ್ಯ ಹುಲಿನಾಯ್ಕರ್, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಮುಖಂಡರಾದ ಎಂ.ಬಿ.ನಂದೀಶ್, ದತ್ತಾತ್ರೇಯ, ಬ್ಯಾಟರಂಗೇಗೌಡ, ಮಲ್ಲಪ್ಪಗೌಡ, ಬೆಟ್ಟಸ್ವಾಮಿ, ಶಾರದಾ ನರಸಿಂಹಮೂರ್ತಿ, ಹುಚ್ಚಯ್ಯ, ರಾಮಾಂಜಿನಪ್ಪ, ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ನಂದೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link