ತುಮಕೂರು:

ಬೀದಿಗಳಲ್ಲಿ, ಗಲ್ಲಿಗಳಲ್ಲಿ ಕಂಡುಬರುತ್ತಿದ್ದ ಗಣೇಶೋತ್ಸವ ಈಗ ಅಷ್ಟಿಲ್ಲ. ವಾರಾನುಗಟ್ಟಲೆ ನಡೆಯುತ್ತಿದ್ದ ಕಾರ್ಯಕ್ರಮಗಳಿಗೆ ಬ್ರೇಕ್ ಬಿದ್ದಿದೆ. ಗಣೇಶೋತ್ಸವ ಕಾರ್ಯಕ್ರಮಗಳೇ ಈಗ ಕಳೆ ಕಳೆದು ಕೊಳ್ಳತೊಡಗಿವೆ. ಅನಿವಾರ್ಯವಾಗಿ ಮಾಡಲೇಬೇಕಲ್ಲ ಎಂಬಂತಹ ಪರಿಸ್ಥಿತಿಗೆ ಸಂಘಟನೆಗಳು ಒಳಗಾಗಿವೆ. ಪ್ರತಿವರ್ಷ ಮುಂದುವರೆಸಿಕೊಂಡು ಬಂದ ಕಾರ್ಯಕ್ರಮಗಳನ್ನು ನಡೆಸಲೇಬೇಕಾದ ಪರಿಸ್ಥಿತಿಯಲ್ಲಿ ಯುವಕ ಸಂಘಟನಗಳು ಇವೆ.
ಈ ಬಾರಿ ನಗರದ ಅಲ್ಲಲ್ಲಿ ಕಂಡುಬಂದ ಚಿತ್ರಣವಿದು. ಗಣೇಶೋತ್ಸವ ಆಚರಿಸುವ ಸಂಘಟನೆಗಳು ಮತ್ತು ಅದರ ಪ್ರಾತಿನಿಧಿಕ ವ್ಯಕ್ತಿಗಳನ್ನು ಮಾತನಾಡಿಸಿದಾಗ ಹಿಂದೆಲ್ಲ ಗಣೇಶೋತ್ಸವಕ್ಕೆ ಉದಾರವಾಗಿ ಧನ ಸಹಾಯ ಮಾಡುತ್ತಿದ್ದರು. ಈಗ ಆ ಪರಿಸ್ಥಿತಿ ಇಲ್ಲ. ಹಣವೂ ಹೆಚ್ಚಾಗಿ ಸಂಗ್ರಹವಾಗುತ್ತಿಲ್ಲ. ಮನೆ ಮನೆಗೆ ತೆರಳಿದರೆ ಪ್ರೀತಿಯಿಂದ ಕಾಣಿಕೆ ನೀಡುವ ಬದಲು ಬಲವಂತವಾಗಿ ನೀಡುತ್ತಿದ್ದಾರೇನೋ ಎನ್ನುವ ಪರಿಸ್ಥಿತಿ ಇದೆ. ಈಗ ನಾವು ಯಾರನ್ನೂ ಬಲವಂತಪಡಿಸುವಂತಿಲ್ಲ. ಹೀಗಾಗಿ ಹಿಂದಿನ ವೈಭವ, ಆಚರಣೆಗಳನ್ನು ಈಗ ನಡೆಸಲು ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇದಕ್ಕೆ ಕಾರಣವೂ ಇದೆ. ನೋಟು ಅಮಾನ್ಯೀಕರಣದ ಹಿಂದಿನ ವರ್ಷಗಳನ್ನು ಗಮನಿಸಿದಾಗ ತುಮಕೂರು ನಗರದಲ್ಲೇ ಪ್ರತಿ ವಾರ್ಡ್ನಲ್ಲಿ ಕನಿಷ್ಠ 7 ರಿಂದ 10 ಕಡೆಗಳಲ್ಲಿ ಗಣೇಶೋತ್ಸವ ಕಾರ್ಯಕ್ರಮಗಳು ಜರುಗುತ್ತಿದ್ದವು. ರಸ್ತೆಯ ನಡುವೆಯೇ ಪೆಂಡಾಲ್ಗಳು ಏಳುತ್ತಿದ್ದವು. ಒಂದೇ ರಸ್ತೆಯಲ್ಲಿ 2-3 ಗಣೇಶ ಪ್ರತಿಷ್ಠಾಪನಾ ಕಾರ್ಯಕ್ರಮಗಳು ನಡೆಯುತ್ತಿದ್ದವು. ಅದ್ಧೂರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ಆರ್ಕೆಸ್ಟ್ರಾ ಕಾರ್ಯಕ್ರಮಗಳನ್ನು ನೋಡಲು ಸುತ್ತಮುತ್ತಲ ಜನ ಜಮಾಯಿಸುತ್ತಿದ್ದರು. ಹಣದ ಹರಿವು ಸಹ ಚೆನ್ನಾಗಿರುತ್ತಿತ್ತು. ಆದರೆ ಈಗ ಪರಿಸ್ಥಿತಿಯೇ ಬೇರೆ.
ಜನರ ಕೈಲಿ ಹಣದ ಚಲಾವಣೆ ಕಡಿಮೆಯಾಗಿದೆ. ಕೆಲವು ಅಂಗಡಿಗಳ ವ್ಯಾಪಾರ ವಹಿವಾಟು ಅಷ್ಟಕಷ್ಟೇ ಎನ್ನುವಂತಾಗಿದೆ. ನಗದು ಹಣ ಇಲ್ಲದೆ ಇರುವುದರಿಂದ ಜನ ಖರ್ಚು ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಅಂಗಡಿಗಳವರು ಹಿಂದೆ ದಾನ, ಧರ್ಮ ಮಾಡಿದ ರೀತಿಯಲ್ಲಿ ಈಗ ಮಾಡಲು ಸಿದ್ಧರಿಲ್ಲ. ಆದರೂ ಬಡಾವಣೆಯ ಯುವಕ ಸಂಘಗಳು ಎಂದರೆ ಇಂತಿಷ್ಟು ಹಣ ನೀಡಲೇಬೇಕು.
ಗಣೇಶೋತ್ಸವ ಆಚರಣೆಗಳು ಬಂದ ದಿನಗಳಲ್ಲಿ ಸಾಮಾನ್ಯವಾಗಿ ಆಯಾ ವಾರ್ಡ್ಗಳ ನಗರಸಭೆ ಸದಸ್ಯರುಗಳನ್ನು ಭೇಟಿ ಮಾಡಿ ಕಾರ್ಯಕ್ರಮ ಆಯೋಜಿಸುತ್ತಿದ್ದರು. ಕಳೆದ ಎರಡು ವರ್ಷಗಳಿಂದ ನಗರ ಪಾಲಿಕೆ ಸದಸ್ಯರುಗಳು ತಪ್ಪಿಸಿಕೊಳ್ಳುವ ಹಂತಕ್ಕೆ ಬಂದು ನಿಂತಿದ್ದಾರೆ. ಈ ವರ್ಷವಂತೂ ಹಲವು ಸದಸ್ಯರುಗಳು ರೋಸಿಹೋಗಿದ್ದಾರೆ.
ಒಂದು ಬಡಾವಣೆಯಲ್ಲಿ ಕನಿಷ್ಠ ಐದಾರು ಸಂಘಟನೆಗಳು ಗಣಪತಿ ಹೆಸರಿನಲ್ಲಿ ಮನೆ ಮುಂದೆ ಬಂದು ನಿಂತಾಗ ಅವರನ್ನು ವಾಪಸ್ ಕಳುಹಿಸುವ ಸ್ಥಿತಿಯಲ್ಲಿಲ್ಲ. ನಿರಾಕರಿಸಲೂ ಆಗದೆ, ನಿಗದಿತ ಹಣ ನೀಡಲೂ ಆಗದೆ ಪರಿತಪಿಸುವ ಸ್ಥಿತಿಗೆ ಬಂದು ಬಿಟ್ಟಿದ್ದಾರೆ. ಹೀಗಾಗಿ ಕೆಲವು ಕಾರ್ಪೋರೇಟರ್ಗಳು ಯುವಕ ಸಂಘಗಳು ಅಥವಾ ಗಣೇಶೋತ್ಸವ ಆಚರಿಸುವ ಗುಂಪುಗಳಿಂದ ದೂರವೇ ಉಳಿದಿದ್ದಾರೆ.
ಆಯಾ ವಾರ್ಡ್ಗಳಲ್ಲಿ ನಡೆಯುವ ಗಣೇಶೋತ್ಸವ ಆಚರಣೆಗಳು ವಾರಗಟ್ಟಲೆ ನಡೆಯುತ್ತಿದ್ದ ಸಂದರ್ಭಗಳಲ್ಲಿ ನಗರಸಭಾ ಸದಸ್ಯರು ಮುತುವರ್ಜಿ ವಹಿಸಿ ಕೆಲಸ ಕಾರ್ಯ ಮಾಡಿಸಿಕೊಡುತ್ತಿದ್ದರು. ಧನ ಸಹಾಯವನ್ನೂ ಮಾಡುತ್ತಿದ್ದರು. ಕಾರ್ಯಕ್ರಮಗಳಲ್ಲಿ ಮುಂಚೂಣಿ ಪಾತ್ರ ವಹಿಸುತ್ತಿದ್ದರು. ಈಗ ಕಾರ್ಯಕ್ರಮಗಳಿಗೆ ಭಾಗವಹಿಸಲು ಹಿಂದೆ ಮುಂದೆ ನೋಡುವಂತಾಗಿದೆ.
ಆರ್ಥಿಕ ಸಮಸ್ಯೆ ಮಾತ್ರವಲ್ಲ, ಇತರೆ ಸಮಸ್ಯೆಗಳೂ ಸಹ ಗಣೇಶೋತ್ಸವಕ್ಕೆ ಅಡಚಣೆವೊಡ್ಡುತ್ತಿವೆ. ಒಂದು ಕಡೆ ಗಣೇಶನನ್ನು ಪ್ರತಿಷ್ಠಾಪಿಸಬೇಕೆಂದರೆ ಕಾನೂನಿನ ತೊಡಕುಗಳು ಎದುರಾಗುತ್ತವೆ. ಅಂದರೆ ಇವೆಲ್ಲ ತಪ್ಪು ಎಂದು ಅರ್ಥವಲ್ಲ. ಹೊಣೆಗಾರಿಕೆ ಇರಲಿ, ಅವಘಡಗಳು ಸಂಭವಿಸದಿರಲಿ ಎಂಬ ಮುನ್ನೆಚ್ಚರಿಕಾ ಕ್ರಮವಾಗಿ ಲೈಸೆನ್ಸ್, ಇತ್ಯಾದಿ ಪ್ರಕ್ರಿಯೆಗಳನ್ನು ಕಠಿಣಗೊಳಿಸಲಾಗಿದೆ. ಆದರೆ ಇವುಗಳ ಪಾಲನೆ ಸಂಘಟನೆಗಳಿಗೆ ಸವಾಲೆನ್ನಿಸಿದೆ. ಹೀಗಾಗಿ ಗಣೇಶೋತ್ಸವವೇ ಬೇಡ ಎಂಬ ತೀರ್ಮಾನಕ್ಕೂ ಬಂದಿದ್ದಾರೆ.
ಗೌರಿ ಗಣೇಶ ಹಬ್ಬ ಬಂದಿತೆಂದರೆ 15 ದಿನಗಳ ಮುನ್ನವೇ ಸಿದ್ಧತೆಗಳು ಆರಂಭವಾಗುತ್ತಿದ್ದವು. ನೆಲ ಸಮತಟ್ಟು ಮಾಡುವುದರಿಂದ ಹಿಡಿದು ಇಡೀ ಬಡಾವಣೆಯ ಜನತೆ ಅತ್ತ ಗಮನ ಹರಿಸುತ್ತಿದ್ದರು. ಪ್ರತಿದಿನ ಸಿಹಿ ತಿಂಡಿ, ಸಾರ್ವಜನಿಕ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರ ಗಮನ ಸೆಳೆಯುತ್ತಿದ್ದವು. ಈಗ ಇಡೀ ಪರಿಸ್ಥತಿ ಭಿನ್ನವಾಗಿದೆ. ಗಣಪತಿ ಕಾರ್ಯಕ್ರಮಗಳಿಗೆ ಜನ ಕಡಿಮೆಯಾಗುತ್ತಿದ್ದಾರೆ.
ಉದಾರವಾಗಿ ಧನ ಸಹಾಯ ಮಾಡುತ್ತಿಲ್ಲ. ಕಾರ್ಯಕ್ರಮ ಆಯೋಜಕರು ಹಣದ ಪರಿಸ್ಥಿತಿ ಅವಲಂಬಿಸಿ ಕಾರ್ಯಕ್ರಮಗಳನ್ನು ಇತಿಮಿತಿಗೆ ಸೀಮಿತಗೊಳಿಸುತ್ತಿದ್ದಾರೆ. ಆರ್ಥಿಕ ಸಮಸ್ಯೆ, ಜನರ ಸ್ಪಂದನೆ ಅಷ್ಟಾಗಿ ಇಲ್ಲದಿರುವುದು ಇವೆಲ್ಲವೂ ಸೇರಿಕೊಂಡು ವೈಭವದ ಗಣೇಶೋತ್ಸವಗಳು ಕಣ್ಮರೆಯಾಗುತ್ತಿವೆ. ಸಂಪೂರ್ಣ ಅಲ್ಲದೆ ಹೋದರೂ ನೋಟು ಅಮಾನ್ಯೀಕರಣ, ತೆರಿಗೆ ಭಾರ, ಜಿ.ಎಸ್.ಟಿ.ಯಂತಹ ನೀತಿಗಳು ಆರ್ಥಿಕ ಹಿಂಜರಿತ ಇವೆಲ್ಲವೂ ಒಂದಕ್ಕೊಂದಕ್ಕೆ ಪೂರಕವಾಗಿ ಈ ಅಂಶಗಳು ಗಣೇಶೋತ್ಸವಕ್ಕೂ ಪರಿಣಾಮ ಬೀರುತ್ತಿವೆ ಎಂಬ ಹೇಳಿಕೆಯಲ್ಲಿ ಸತ್ಯವಂತೂ ಇದೆ.
ಇನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಬರ ತಾಂಡವವಾಡುತ್ತಿದ್ದು, ಗಣೇಶೋತ್ಸವದ ಆಚರಣೆಗಳಿಗೆ ತೊಡಕಾಗದಿದ್ದರೂ ವೈಭವದ ಆಚರಣೆಗಳು ಅಷ್ಟಾಗಿ ಕಂಡುಬರಲಿಲ್ಲ. ಹಿಂದೆಲ್ಲ ರಸ್ತೆ ಮಧ್ಯೆ ಪ್ರಯಾಣಿಕರನ್ನು ಅಡ್ಡಗಟ್ಟಿ ಹಣ ವಸೂಲಿ ಮಾಡುವ ಪಡೆಗಳು ಹುಟ್ಟಿಕೊಂಡಿದ್ದವು. ನಂತರದ ದಿನಗಳಲ್ಲಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿ ಈ ತರಹದ ವಸೂಲಿ ಕಂಡುಬಂದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದ ಹಿನ್ನೆಲೆಯಲ್ಲಿ ಸ್ವಲ್ಪ ಮಟ್ಟಿಗೆ ಕಡಿವಾಣ ಬಿದ್ದಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಆದರೂ ಗ್ರಾಮೀಣ ಪ್ರದೇಶಗಳಲ್ಲಿ ಈ ವಸೂಲಿ ಬಾಜಿ ಇನ್ನೂ ನಿಂತಿಲ್ಲ. ಸಾರ್ವಜನಿಕರನ್ನು ಅಡ್ಡಗಟ್ಟಿ ಹಣ ಕೇಳುವ ಪ್ರವೃತ್ತಿ ಮುಂದುವರಿದೇ ಇದೆ. ಇದ್ದವರು ಕೊಟ್ಟು ಹೋದರೆ, ಇದ್ದೂ ಇಷ್ಟವಿಲ್ಲದವರು ಯಾವುದೋ ನೆಪಹೇಳಿ ಕೊಂಡು ಹೋಗುತ್ತಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ನಂತರ ಅದನ್ನು ಬಿಡುವ ತನಕವೂ ಯುವಕ ತಂಡಗಳು ತಮ್ಮ ಜವಾಬ್ದಾರಿಯನ್ನು ಮೆರೆಯುತ್ತಿವೆ. ಗಣೇಶನ ಬಿಟ್ಟ ನಂತರ ಹಾರವನ್ನು ಹರಾಜು ಹಾಕುವುದು, ಅದರಿಂದ ಬಂದ ಹಣದಿಂದ ಊರಿನವರಿಗೆ ಬಡ್ಡಿಗೆ ನೀಡುವುದು. ಹಣ ಬೆಳೆದ ಮೇಲೆ ನಂತರದ ವರ್ಷಗಳಲ್ಲಿ ಅದನ್ನು ಬಳಸಿಕೊಂಡು ಹೋಗುವುದು ಈ ರೀತಿಯಿಂದಲೇ ಸಾಕಷ್ಟು ಯುವಕ ಸಂಘಗಳು ಗ್ರಾಮಾಂತರ ಪ್ರದೇಶದಲ್ಲಿ ಮನೆ ಮನೆಗಳಿಗೆ ಹೋಗಿ ಹಣ ವಸೂಲಿ ಮಾಡದೇ ಬಡ್ಡಿ ಹಣದಿಂದಲೇ ಗಣೇಶೋತ್ಸವನ ಉತ್ಸವವನ್ನು ಅದ್ಧೂರಿಯಾಗಿ ನಡೆಸುತ್ತಿರುವುದೂ ಅಲ್ಲಲ್ಲಿ ಕಂಡುಬರುತ್ತಿದೆ.ಬರಗಾಲ ಎನ್ನಿಸಿದರೂ ಗಣೇಶೋತ್ಸವ ಆಚರಣೆಗಳಿಗೆ ಕುಂದಂತೂ ಉಂಟಾಗಿಲ್ಲ. ಆದರೆ ಅದ್ಧೂರಿ ಕಾರ್ಯಕ್ರಮಗಳಿಗೆ ಕಡಿವಾಣ ಬಿದ್ದಿರುವುದಂತೂ ಸತ್ಯ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
