ತುರುವೇಕೆರೆ
ಗುಡ್ಡೇನಹಳ್ಳಿ ಗ್ರಾಮದ ಹೆಸರನ್ನು ಮುಂದಿಟ್ಟುಕೊಂಡು ಹಾಲಿ ಮತ್ತು ಮಾಜಿ ಶಾಸಕರಿಬ್ಬರೂ ಪ್ರತಿಭಟನೆ ಮಾಡುವ ಅಗತ್ಯವಿಲ್ಲವೆಂದು ಗ್ರಾಮದ ಮುಖಂಡ ಹಾಗೂ ಎಪಿಎಂಸಿ ನಿರ್ದೇಶಕ ಕಾಂತರಾಜು ಸ್ಪಷ್ಟಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಗುಡ್ಡೇನಹಳ್ಳ ಗ್ರಾಮಸ್ಥರೊಡಗೂಡಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಗ್ರಾಮದಲ್ಲಿರುವ ಸಾಗುವಳಿ ಭೂಮಿಯನ್ನು ಎಲ್ಲರೂ ಪಕ್ಷಾತೀತವಾಗಿ ಸಮನಾಗಿ ಹಂಚಿಕೊಂಡು ಉಳುಮೆ ಮಾಡುತ್ತಿದ್ದು, ಮಂಜೂರಿಗಾಗಿ ಕಾಯುತ್ತಿದ್ದೇವೆಯಷ್ಟೆ. ಗ್ರಾಮದ ಸಾಗುವಳಿಯಲ್ಲಿ ನೆಟ್ಟಿದ ತೆಂಗಿನ ಸಸಿಗಳನ್ನು ಹಾಲಿ ಶಾಸಕರ ಕುಮ್ಮಕ್ಕಿಂದ ಕೀಳಿಸಲಾಗಿಲ್ಲ. ಸರ್ಕಾರಿ ಅಧಿಕಾರಿಗಳೆ ಬಂದು ಕಿತ್ತಿದ್ದಾರೆ.
ಶಾಸಕ ಮಸಾಲ ಜಯರಾಂ ಅವರಿಗೆ ನಮ್ಮೂರಿನಲ್ಲಿರುವ ಸಾಗುವಳಿ ಭೂಮಿ ಗೊತ್ತೆ ಇಲ್ಲ. ಭೂಮಿ ಹೊಡೆಯುವ ಆಸೆಯೂ ಅವರಿಗಿಲ್ಲ. ಗ್ರಾಮಸ್ಥರೆಲ್ಲ ಇಲ್ಲಿನ ಭೂಮಿ ಮಂಜೂರು ಮಾಡಿಕೊಡುವಂತೆ ಕೇಳಿದ್ದು ಇದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ 3 ಬಾರಿ ಶಾಸಕರಾಗಿದ್ದ ವೇಳೆ ಈ ಸಾಗುವಳಿ ಭೂಮಿ ಮಂಜೂರು ಸಮಸ್ಯೆಯನ್ನು ಬಗೆಹರಿಸಬಹುದಿತ್ತು. ಈ ಸಣ್ಣ ಸಮಸ್ಯೆಯನ್ನು ಅವರೆ ದೊಡ್ಡದು ಮಾಡಿದ್ದಾರೆ. ನಮ್ಮೂರಿನಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಪ್ರತಿಭಟನೆ ಏನೂ ಬೇಡ.
ಸುಮ್ಮನೆ ಗ್ರಾಮದಲ್ಲಿ ಶಾಂತಿ ಕದಡುವುದು ಬೇಡವೆಂದು ಸಾಗುವಳಿ ರೈತರೆಲ್ಲ ಮಾಜಿ ಶಾಸಕರನ್ನು ಕೇಳಿಕೊಂಡರೂ ನೀವ್ಯಾರು ಬರಬೇಡಿ, ನಾನೊಬ್ಬನೆ ಪ್ರತಿಭಟನೆ ಮಾಡುತ್ತೇನೆ ಎಂದಿದ್ದಾರೆ. ಹಾಗಾಗಿ ಗುಡ್ಡೇನಹಳ್ಳಿ ಗ್ರಾಮದ ರೈತರು 31 ರ ಪ್ರತಿಭಟನೆಯಲ್ಲಿ ಭಾಗವಹಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸುದ್ದಿ ಗೋಷ್ಠಿಯಲ್ಲಿ ರೈತರಾದ ಗುಡಿಗೌಡ, ನಾಗರಾಜು, ನಂಜಪ್ಪ, ಮುನಿಯಪ್ಪ, ನಂಜಾಮರಿ, ನಟರಾಜು, ಮುನಿಹುಚ್ಚಯ್ಯ ಸೇರಿದಂತೆ ಹಲವು ಗ್ರಾಮಸ್ಥರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
