ಬಳ್ಳಾರಿ
ಇಂದಿನ ದಿನಗಳಲ್ಲಿ ಪತ್ರಿಕೋದ್ಯಮ ನಡೆಸುವುದು ಅಷ್ಟು ಸುಲಭದ ಕೆಲಸವಲ್ಲ. ಆದರೂ ಬಳ್ಳಾರಿಯ ಯುವಕ ಯಾಳ್ಪಿ ವಲಿಬಾಷಾ ಕಳೆದ ನಾಲ್ಕು ವರ್ಷಗಳಿಂದ ಅತ್ಯಂತ ಶ್ರದ್ಧೆಯಿಂದ ಪತ್ರಿಕೆಯನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರು ಹಾಗೂ ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಹೇಳಿದರು.
ಇಲ್ಲಿನ ಅಗಡಿ ಮಾರೆಪ್ಪ ಕಾಂಪೌಂಡ್ನ ಬಾಲಾಜಿ ಕಟ್ಟಡದಲ್ಲಿ ಜಾಗೃತಿ ಕಿರಣ ಹಾಗೂ ಜೆಕೆ ನ್ಯೂಸ್ ನ ನೂತನ ಕಚೇರಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ನಾನು ಜಾಗೃತಿ ಕಿರಣ ಪತ್ರಿಕೆ ಆರಂಭಿಸುವಾಗ ಯಾಳ್ಪಿ ವಲಿಬಾಷಾ ಅವರಿಗೆ ಒಂದು ಮಾತು ಹೇಳಿದ್ದೆ. ಪತ್ರಿಕೆ ನಡೆಸುವುದು ಸುಲಭದ ಕೆಲಸವಲ್ಲ ಅಂತ. ಇದನ್ನು ಸವಾಲಾಗಿ ಸ್ವೀಕರಿಸಿದ ವಲಿಬಾಷಾ ಸತತ ನಾಲ್ಕು ವರ್ಷಗಳಿಂದ ಪತ್ರಿಕೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಅವರ ಶ್ರದ್ಧೆ ಮತ್ತು ಶ್ರಮ ನಿಜಕ್ಕೂ ಅನುಕರಣನೀಯವಾಗಿದೆ. ಹುಟ್ಟು ಹೋರಾಟಗಾರರಾದ ಯಾಳ್ಪಿ ಅವರು ಸಮಾಜಮುಖಿಯಾಗಿ ಕೆಲಸ ಮಾಡುತ್ತ ಶ್ರಮಿಕರು, ಕಾರ್ಮಿಕರು, ರೈತರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಕಾರ್ಮಿಕ ದಿನಾಚರಣೆಯಂದೇ ನೂತನ ಕಚೇರಿ ಆರಂಭಿಸುತ್ತಿರುವ ಅವರಿಗೆ ಎಲ್ಲ ರೀತಿಯಿಂದಲೂ ಸಹಕಾರ ನೀಡುತ್ತೇನೆ ಎಂದರು.
ಪತ್ರಿಕೆಯೊಂದಿಗೆ ವಲಿಬಾಷಾ ಅವರು ರಾಜ್ಯಮಟ್ಟದ ಸುದ್ದಿ ವಾಹಿನಿಯನ್ನೂ ಕೂಡ ನಡೆಸುವಂತಾಗಲಿ. ಸಮಾಜದಲ್ಲಿನ ಹುಳುಕುಗಳನ್ನು ಪತ್ತೆ ಹಚ್ಚಿ ವೃತ್ತಿನಿರತ ಪತ್ರಕರ್ತನಂತೆ ಗುರುತಿಸಿಕೊಂಡು ಉನ್ನತವಾದ ಸ್ಥಾನವನ್ನು ಪಡೆಯಲಿ ಎಂದು ಆಶಿಸಿದರಲ್ಲದೆ, ತಮ್ಮ ಕಚೇರಿಯಲ್ಲಿ ಯುವತಿಯರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿರುವುದು ಅವರಲ್ಲಿನ ಮಹಿಳಾ ಕಾಳಜಿ ತೋರುತ್ತದೆ. ಕಚೇರಿಯ ಸಿಬ್ಬಂದಿಯವರು ಸಹ ಕಷ್ಟಪಟ್ಟು ಕೆಲಸ ಮಾಡಿದಲ್ಲಿ ಪತ್ರಿಕೆ ಮತ್ತು ಸಂಪಾದಕ ಬೆಳೆಯಲು ಸಾಧ್ಯವೆಂದು ಕಿವಿ ಮಾತು ಹೇಳಿದರು.
ಜಾಗೃತಿ ಕಿರಣ ಸಂಪಾದಕ ಯಾಳ್ಪಿ ವಲಿಬಾಷಾ ಅವರ ಪುತ್ರಿ ಆಲಿಯಾರೊಂದಿಗೆ ಕೇಕ್ ಕತ್ತರಿಸಿ ಶುಭ ಹಾರೈಸಿದ ಶ್ರೀರಾಮುಲು ಅವರು, ಕಚೇರಿಯ ಸಿಬ್ಬಂದಿಗಳಿಗೆ ಸಿಹಿ ಹಂಚಿ ಕಾರ್ಮಿಕ ದಿನಾಚರಣೆ ಶುಭಾಶಯಗಳನ್ನು ಹೇಳಿದರು. ಈ ಸಂದರ್ಭದಲ್ಲಿ ಗೌರವ ಸಂಪಾದಕ ರಾಣಿತೋಟ ವೀರೇಶ್ ಇ., ಪ್ರಸರಾಣಾಧಿಕಾರಿ ಯೂಸೂಫ್ ಖಾನ್, ಶ್ರೀರಾಮುಲು ಆಪ್ತರಾದ ಸಂಜಯ್ ಬೆಟಗೇರಿ, ಬಿಜೆಪಿ ಮುಖಂಡರಾದ ಗಾದಿ, ಫಾರೂಖ್, ಶಂಕರ್ ಇನ್ನಿತರರು ಇದ್ದರು.