ಹೊನ್ನಾಳಿ:
ಯುವಕರು ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಐಟಿಐ ಕಾಲೇಜಿನ ಪ್ರಾಂಶುಪಾಲ ಜಗದೀಶ್ ಎಸ್. ಮೋತಿ ಹೇಳಿದರು.ಇಲ್ಲಿನ ಚನ್ನಮಲ್ಲಿಕಾರ್ಜುನ ಸ್ವಾಮಿ ಸಂಸ್ಕøತ ಮಹಾವಿದ್ಯಾಲಯದ ವತಿಯಿಂದ ಹಿರೇಕಲ್ಮಠದಲ್ಲಿ ಹಮ್ಮಿಕೊಂಡ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರದ ಕೊನೆಯ ದಿನವಾದ ಬುಧವಾರ ಅವರು ಸಮಾರೋಪ ಭಾಷಣ ಮಾಡಿದರು.
ದೇಶ ನನಗೆ ಏನು ಕೊಟ್ಟಿದೆ ಎಂಬುದರ ಬಗ್ಗೆ ಚಿಂತಿಸಬಾರದು. ಅದರ ಬದಲಾಗಿ ನಾನು ದೇಶಕ್ಕೆ ಏನು ಕೊಡುಗೆ ನೀಡಿದ್ದೇನೆ ಎಂದು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು ಎಂದು ತಿಳಿಸಿದರು.ಸ್ವಚ್ಛತೆಯ ಬಗ್ಗೆ ಎಲ್ಲರಲ್ಲೂ ಅರಿವು ಮೂಡಿಸುವುದು, ಶ್ರಮದಾನ ಶಿಬಿರಾರ್ಥಿಗಳ ಕರ್ತವ್ಯ ಆಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ವಿವರಿಸಿದರು.
ಹಿರೇಕಲ್ಮಠದ ಚನ್ನಮಲ್ಲಿಕಾರ್ಜುನ ಸ್ವಾಮಿ ಸಂಸ್ಕøತ ಮಹಾವಿದ್ಯಾಲಯದ ಪ್ರಾಚಾರ್ಯ ಎಚ್.ಎಂ. ಶ್ರೀಗುರುಪ್ರಕಾಶ್ ಮಾತನಾಡಿ, ಎನ್ನೆಸ್ಸೆಸ್ನಿಂದ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ಬೆಳೆಯುತ್ತದೆ. ಹಳ್ಳಿಗಾಡಿನ ಪರಿಸರದ ಪರಿಚಯ ವಿದ್ಯಾರ್ಥಿಗಳಿಗೆ ಆಗುತ್ತದೆ ಎಂದು ಹೇಳಿದರು.
ಎನ್ನೆಸ್ಸೆಸ್ ಶಿಬಿರಾಧಿಕಾರಿ ಎಚ್.ಎಂ. ಮಂಜುನಾಥ್, ಶಿಬಿರಾರ್ಥಿ ಚನ್ನೇಶ್ ಎಂ. ಜಕ್ಕಾಳಿ ಮತ್ತಿತರರು ಮಾತನಾಡಿದರು.
ಉಪನ್ಯಾಸಕರಾದ ರಾಮಚಂದ್ರ ಕಡೇಮನಿ, ನವೀನ್, ಸಿಬ್ಬಂದಿ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.