ದಾವಣಗೆರೆ:
ಮಕ್ಕಳು ತಮ್ಮಲ್ಲಿರುವ ಕೀಳರಿಮೆಯನ್ನು ತೊರೆದು ಆತ್ಮವಿಶ್ವಾಸ ಮೈಗೂಡಿಸಿಕೊಂಡು, ಸಾಧನೆಯತ್ತ ಮುನ್ನುಗ್ಗಬೇಕೆಂದು ಸಿದ್ದಗಂಗಾ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಡಾ.ಜಯಂತ್ ಕರೆ ನೀಡಿದರು.
ಇಲ್ಲಿನ ದೇವರಾಜ ಅರಸು ಬಡಾವಣೆಯಲ್ಲಿರುವ ಬ್ರಹ್ಮಾಕುಮಾರೀಸ್‍ನ ‘ಶಿವಧ್ಯಾನ ಮಂದಿರ’ದಲ್ಲಿ ನಡೆದ ‘ಉಚಿತ ವ್ಯಕ್ತಿತ್ವ ವಿಕಸನ’ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಯಾವುದೇ ಮಗು ತನ್ನನ್ನು ತಾನು ಕೀಳೆಂದು ಭಾವಿಸಿಕೊಳ್ಳಬಾರದು. ತಮ್ಮ ಮನಸ್ಸಿನ ದೃಢತೆಯಿಂದ ಹಾಗೂ ಆತ್ಮವಿಶ್ವಾಸದಿಂದ ಮುಂದೆ ಬರಲು ಸಾಧ್ಯವಾಗಲಿದೆ ಎಂದರು.
ಮಕ್ಕಳು ತಮ್ಮನ್ನು ಬೇರೆಯವರೊಂದಿಗೆ ಹೋಲಿಸಿಕೊಂಡು, ಕೀಳರಿಮೆಯನ್ನು ಹೊಂದಬಾರದು. ತಮ್ಮಲ್ಲಿರುವ ವಿಭಿನ್ನತೆಯೇ ನಿಮ್ಮ ಶಕ್ತಿಯಾಗಿದ್ದು, ಇಂತಹ ಶಿಬಿರಗಳು ಮಕ್ಕಳಲ್ಲಿ ಅಡಗಿರುವ ಸುಪ್ತ ಶಕ್ತಿಗಳನ್ನು ಹೊರತರುವಂತಹ ಕೆಲಸವನ್ನು ಮಡಲಿವೆ ಎಂದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಹಾರುದ್ರಯ್ಯ ಮಾತನಾಡಿ, ಮಕ್ಕಳು 7 ದಿನಗಳ ಕಾಲ ಶಿಬಿರದಲ್ಲಿ ಪಾಲ್ಗೊಂಡು, ಸಕಾರಾತ್ಮಕ ಶಕ್ತಿಯನ್ನು ಪಡೆದುಕೊಂಡು ಹೋಗುತ್ತಿದ್ದೀರಿ. ಇದರಿಂದ ನಿಮ್ಮ ಜೀವನದಲ್ಲಿ ಹೊಸತನ ಮೂಡಲಿ ಎಂದು ಶುಭ ಹಾರೈಸಿದರು.
ಶಿಬಿರದ ಸಂಪನ್ಮೂಲ ವ್ಯಕ್ತಿ, ರಾಜ್ಯಪ್ರಶಸ್ತಿ ವಿಜೇತ ಶಿಕ್ಷಕ ಅಶೋಕ ಆರ್. ಉಚಿಡಿ ಮಾತನಾಡಿ, ಶಿಬಿರದಲ್ಲಿ ಮಕ್ಕಳಿಗೆ ಕೇವಲ ಧ್ಯಾನ-ಯೋಗಗಳನ್ನು ಅಷ್ಟೇ ಕಲಿಸಿಲ್ಲ, ಅವರಿಗೆ ಕೌಟುಂಬಿಕ ಮೌಲ್ಯಗಳನ್ನು ತಿಳಿಸಲಾಗಿದೆ, ಮೊಬೈಲ್ ದುವ್ರ್ಯಸನದ ಬಗ್ಗೆ ಜಾಗೃತಿಯನ್ನು ಮೂಡಿಸಲಾಗಿದೆ.
ಶುದ್ಧ-ಆಹಾರದ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಇದರಿಂದ ಮಕ್ಕಳಲ್ಲಿ ಜಾಗೃತಿ ಮೂಡಿರುವುದು ಸತ್ಯ ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಬ್ರಹ್ಮಾಕುಮಾರಿ ಲೀಲಾಜಿ ಮಾತನಾಡಿ, ಪ್ರತಿವರ್ಷ ಮಕ್ಕಳ 4ರಿಂದ 5 ಶಿಬಿರಗಳನ್ನು ಉಚಿತವಾಗಿ ಆಯೋಜಿಸಿಕೊಂಡು ಬಂದಿದ್ದೇವೆ. ಮಕ್ಕಳು ತಾವು ದೇಶದ ಉತ್ತಮ ಪ್ರಜೆಗಳಾಗಿ ತಮ್ಮ ತಂದೆ-ತಾಯಂದಿರನ್ನು ಚೆನ್ನಾಗಿ ನೋಡಿಕೊಳ್ಳುತ್ತಾ ಸಮಾಜ ಸೇವೆಯನ್ನೂ ಮಾಡಬೇಕು. ಇದಕ್ಕಾಗಿ ಈಶ್ವರೀಯ ವಿಶ್ವ ವಿದ್ಯಾಲಯವು ಅನೇಕ ಸೇವಾಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ ಸಮಾಜಮುಖಿ ಸೇವೆಯನ್ನು ಸಲ್ಲಿಸುತ್ತಿದೆ ಎಂದರು.
ಶಿಬಿರದ ಖರ್ಚುವೆಚ್ಚಗಳನ್ನು ಸಂಸ್ಥೆಗೆ ಬರುವಂತಹ ಸಹೋದರ-ಸಹೋದರಿಯರೇ ಭರಿಸಿದ್ದಾರೆ. ಇದೇರೀತಿ ಸರ್ವರ ಸಹಕಾರದಿಂದ ಸುಖಮಯ ಜಗತ್ತನ್ನು ನಿರ್ಮಾಣ ಮಾಡಬೇಕಾದ ಅನಿವಾರ್ಯತೆ ಇದೆ. ಸೇವಾಕಾರ್ಯಗಳು ಒಬ್ಬರಿಂದ ಸಾಗುವುದಿಲ್ಲ, ಎಲ್ಲರೂ ಕೈಜೋಡಿಸುವುದರಿಂದ ಇಂತಹ ಬೃಹತ್ ಕಾರ್ಯಗಳನ್ನು ಮಾಡಬಹುದಾಗಿದೆ ಎಂದು ನುಡಿದರು.ಏಳು ದಿನಗಳ ಕಾಲ ನಡೆದ ಶಿಬಿರದ ಬಗ್ಗ ಶಿಬಿರಾರ್ಥಿಗಳು ಸಮಾರೋಪ ಸಮಾರಂಭದಲ್ಲಿ ಮಕ್ಕಳು ತಮ್ಮ ಅನಸಿಕೆಗಳನ್ನು ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಅನೇಕ ಸಾಂಸ್ಕತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಪೋಷಕರೂ ತಮ್ಮ ಅನುಭವಗಳನ್ನು ಹಂಚಿಕೊಂಡರು. ಮಕ್ಕಳು ತಮ್ಮ ಸಾಂಸ್ಕತಿಕ ಕಾರ್ಯಕ್ರಮಗಳಿಂದ ಸರ್ವರನ್ನು ರಂಜಿಸಿದರು. ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಮಾಣಪತ್ರ ವಿತರಿಸಲಾಯಿತು.ಬ್ರಹ್ಮಾಕುಮಾರಿ ಗೀತಕ್ಕ ನಿರೂಪಿಸಿದರು. ಬ್ರಹ್ಮಾಕುಮಾರಿ ಗೌರಕ್ಕ ಸ್ವಾಗತಿಸಿದರು. ರಾಜು ವಂದಿಸಿದರು.