ನ್ಯೂನ್ಯತೆಯುಳ್ಳ ಮಕ್ಕಳ ಹಾಗೂ ಪಾಲಕರ ವಸತಿಯುತ ತರಬೇತಿ ಶಿಬಿರ

ಹಾನಗಲ್ಲ :

     ಮಕ್ಕಳು ಜನಿಸಿದ ಕೂಡಲೇ ಮೂರು ತಿಂಗಳವರೆಗೆ ಅವುಗಳ ಚಟುವಟಿಕೆಗಳನ್ನು ಗಮನಿಸಿ ಆರೋಗ್ಯದತ್ತ ಲಕ್ಷವಹಿಸಿದರೆ ಶಿಶು ಆವಸ್ಥೆಯಲ್ಲಿಯೇ ನ್ಯೂನ್ಯತೆಗಳನ್ನು ಸರಿಪಡಿಸಲು ಸಾಧ್ಯ ಎಂದು ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ಸಿ.ಡಿಂಪಲ್ ಡಿಸೋಜಾ ಕರೆ ನೀಡಿದರು.

     ಹಾನಗಲ್ಲಿನಲ್ಲಿ ರೋಶನಿ ಸಮಾಜ ಸೇವಾ ಸಂಸ್ಥೆ, ಬೆಂಗಳೂರಿನ ಅಸೋಶಿಯೇಶನ್ ಆಫ್ ಪೀಪಲ್ ವಿಥ್ ಡಿಸ್ಸೆಬೆಲಿಟಿ ಸಂಸ್ಥೆಯ ಸಹಯೋಗದಲ್ಲಿ ನ್ಯೂನ್ಯತೆಯುಳ್ಳ ಮಕ್ಕಳ ಹಾಗೂ ಪಾಲಕರ ವಸತಿಯುತ ತರಬೇತಿ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪಾಲಕರು ಮಕ್ಕಳು ಹುಟ್ಟಿದ ಸಂಭ್ರಮವನ್ನು ಅನುಭವಿಸುವುದರ ಜೊತೆಗೆ ಹುಟ್ಟಿದ ಮಕ್ಕಳ ಅಂಗ ಆರೋಗ್ಯದ ಬಗ್ಗೆ ಲಕ್ಷವಹಿಸಬೇಕು. ನ್ಯೂನ್ಯತೆಗಳಿದ್ದಲ್ಲಿ ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸಿ ನ್ಯೂನ್ಯತೆಯನ್ನು ಸರಿಪಡಿಸಿಕೊಳ್ಳಲು ಮುಂದಾಗಬೇಕು. ಸರಕಾರ ಹಾಗೂ ಹತ್ತು ಹಲವು ಸಂಘ ಸಂಸ್ಥೆಗಳು ಈಗ ಇಂತಹ ನ್ಯೂನ್ಯತೆಯುಳ್ಳ ಬಡವರ ಸೇವೆಗೆ ಬದ್ಧವಾಗಿವೆ. ಇದರ ಸದುಪಯೋಗ ಪಡೆಯುವಲ್ಲಿ ಪಾಲಕರು ಆಸಕ್ತಿವಹಿಸಬೇಕು ಎಂದರು.

       ಶಿಬಿರ ಉದ್ಘಾಟಿಸಿ ಮಾತನಾಡಿದ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ನಿಲಯ ಪಾಲಕಿ ಕವಿತಾ ಪಾಟೀಲ, ಮಕ್ಕಳ ಚಟುವಟಿಕೆಗಳನ್ನು ಸರಿಯಾಗಿ ಗಮನಿಸುವ ಮೂಲಕ ಮಕ್ಕಳ ಆರೋಗ್ಯದತ್ತ ಗಮನ ಕೊಡುವುದು ತಂದೆ ತಾಯಿಯರ ಮೊದಲ ಆದ್ಯತೆಯಾಗಲಿ. ತಾಯಿಗೆ ತಾಳ್ಮೆ ಅತ್ಯಂತ ಮುಖ್ಯ. ಮಕ್ಕಳು ಅಂಗನ್ಯೂನ್ಯತೆ ಹೊಂದಿದ್ದರೆ ಇಂದಿನ ವೈಜ್ಞಾನಿಕ ಯುಗದಲ್ಲಿ ಎಲ್ಲವನ್ನೂ ಸರಿಪಡಿಸಲು ಸಾಧ್ಯ.

     ಆದರೆ ತಂದೆ-ತಾಯಿ-ಪಾಲಕರ ನಿರ್ಲಕ್ಷದಿಂದ ಮಕ್ಕಳು ಜೀವನವಿಡಿ ಅಂಗನ್ಯೂನ್ಯತೆಯಿಂದ ಬಳಲಿ ಹಿಂಸೆ ಅನುಭವಿಸಿದಂತಾಗುತ್ತದೆ. ಮಕ್ಕಳೊಂದಿಗೆ ಭಾವನಾತ್ಮಕ ಸಂಬಂಧದಷ್ಟೆ ಆರೋಗ್ಯದ ಕಾಳಜಿಯೂ ಮುಖ್ಯ ಎಂದು ಎಚ್ಚರಿಸಿದರು.ಬೆಂಗಳೂರಿನ ಅಸೋಶಿಯೇಶನ್ ಆಫ್ ಪೀಪಲ್ ವಿಥ್ ಡಿಸ್ಸೆಬೆಲಿಟಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ಡಾ.ನಿರಾಕರ ದೇವದಾಸ್ ಮಾತನಾಡಿ, ವೈದ್ಯ ದೇವರಿದ್ದಂತೆ. ಆದರೆ ಬಡವರು ತಮ್ಮ ನ್ಯೂನ್ಯತೆಯುಳ್ಳ, ಅನಾರೋಗ್ಯದ ಮಕ್ಕಳನ್ನು ದೇವರಿಗೆ ಸಮಾನರಾದ ವೈದ್ಯರಲ್ಲಿ ಚಿಕಿತ್ಸೆಗೆ ಕರೆದುಕೊಂಡು ಹೋಗಬೇಕು. ಹಾಗೂ ವೈದ್ಯರಲ್ಲಿ ವಿಶ್ವಾಸವನ್ನಿಡಬೇಕು. ವೈದ್ಯರ ಸಲಹೆಯಂತೆ ಸರಿಯಾದ ಔಷಧೋಪಚಾರ ನೀಡಿದರೆ ಮಕ್ಕಳು ರೋಗಮುಕ್ತರಾಗಿ ಎಲ್ಲ ಮಕ್ಕಳಂತೆ ಚಂದದಿಂದ ಬದುಕಲು ಸಾಧ್ಯ ಎಂದರು. ಬೆಂಗಳೂರಿನ ಅಸೋಶಿಯೇಶನ್ ಆಫ್ ಪೀಪಲ್ ವಿಥ್ ಡಿಸ್ಸೆಬೆಲಿಟಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ನರೇನ್ ಮಾತನಾಡಿದರು.

      ನಾಲ್ಕುದಿನಗಳ ಕಾಲ ನಡೆಯುವ ನ್ಯೂನ್ಯತೆಯುಳ್ಳ ಮಕ್ಕಳ ಪಾಲಕರ ವಸತಿಯುತ ಶಿಬಿರದಲ್ಲಿ 36 ಪಾಲಕರು ಮಕ್ಕಳು ಪಾಲ್ಗೊಂಡಿದ್ದಾರೆ. 6 ವರ್ಷದೊಳಗಿನ ಬುದ್ಧಿಮಾಂದ್ಯ, ಮಿದುಳು ಜ್ವರ, ಬಹುವಿಧ ಅಂಗವಿಕಲತೆಯುಳ್ಳ ಮಕ್ಕಳಿಗೆ ಇಬ್ಬರು ತಜ್ಞ ಸಂಪನ್ಮೂಲ ವ್ಯಕ್ತಿಗಳು ತರಬೇತಿ ಹಾಗೂ ಚಿಕಿತ್ಸೆ ನೀಡುತ್ತಿದ್ದಾರೆ. ಫಿಜಿಯೋಥೆರೆಪಿ, ಮಕ್ಕಳಿಗೆ ಚಟುವಟಿಕೆ ನೀಡುವುದು, ಮಗುವಿನ ಆರೈಕೆ, ಮಗುವಿಗೆ ಏಕಾಗ್ರತೆ ತರುವುದು, ಹಾಗೂ ನ್ಯೂನ್ಯತೆಯುಳ್ಳ ಮಕ್ಕಳಿಗೆ ಸಾಮಾಜಿಕ ಭದ್ರತೆ ಯೋಜನೆಗಳು ತಿಳುವಳಿಕೆ ಹಾಗೂ ತರಬೇತಿ ನೀಡಲಾಗುತ್ತಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link