ದಾವಣಗೆರೆ:
ಕಾಂಗ್ರೆಸ್‍ನ ನಿಜ ಬಣ್ಣ ಅರಿತು ಹಿಂದುಳಿದವರು, ದಲಿತರು ಬಿಜೆಪಿಯನ್ನು ಅಪ್ಪಿಕೊಂಡಿದ್ದಾರೆಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೆಚ್.ಎನ್. ಶಿವಕುಮಾರ್ ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಜಿಲ್ಲಾ ಬಿಜೆಪಿ ಎಸ್.ಸಿ. ಮೋರ್ಚಾದ ವಿಶೇಷ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಕಾಂಗ್ರೆಸ್ ಸುಮಾರು 40 ವರ್ಷ ದೇಶದ ಆಡಳಿತ ಚುಕ್ಕಾಣಿ ಹಿಡಿಯಲು ಹಿಂದುಳಿದವರು ಹಾಗೂ ದಲಿತರೇ ಕಾರಣ. ಆದರೆ, ಆ ಪಕ್ಷ ಈ ವರ್ಗಗಳನ್ನು ಬರೀ ಮತ ಬ್ಯಾಂಕ್ ಆಗಿ ಬಳಿಸಿಕೊಂಡು, ಇವರನ್ನು ಕಡೆಗಣಿಸಿದೆ. ಹೀಗಾಗಿ ಇತ್ತೀಚೆಗೆ ಕಾಂಗ್ರೆಸ್‍ನ ನಿಜ ಬಣ್ಣವನ್ನು ಅರಿತು ಈ ವರ್ಗದ ಜನರು ಬಿಜೆಪಿಯ ಕಡೆ ಮುಖ ಮಾಡಿದ್ದಾರೆಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾದ ನಂತರ ಹಿಂದುಳಿದ ವರ್ಗ ಹಾಗೂ ದಲಿತರ ಅಭಿವೃದ್ಧಿಗಾಗಿ ಜಲವು ಜನಪರ ಕಾರ್ಯಕ್ರಮಗಳನ್ನು ರೂಪಿಸಿದೆ. ಹೀಗಾಗಿ ಈ ವರ್ಗಗಳ ಜನತೆ ನಮ್ಮ ಪಕ್ಷವನ್ನು ಅಪ್ಪಿಕೊಳ್ಳುತ್ತಿದ್ದಾರೆ ಎಂದ ಅವರು, ಲೋಕಸಭೆಯ 547 ಸ್ಥಾನಗಳ ಪೈಕಿ, ಪರಿಶಿಷ್ಟ ಜಾತಿಗೆ ಮೀಸಲಾಗಿರುವ 87 ಕ್ಷೇತ್ರಗಳಲ್ಲಿ 40 ಜನರು ಬಿಜೆಪಿಯಿಂದ ಆಯ್ಕೆಯಾಗಿದ್ದು, ದಲಿತರಿಗೆ ಸೌಲಭ್ಯ ಕೊಡುವುದರ ಜತೆಗೆ ರಾಜಕೀಯ ಸ್ಥಾನಮಾನಗಳನ್ನು ಬಿಜೆಪಿ ನೀಡಿದೆ. ಹೀಗಾಗಿ ಬಿಜೆಪಿ ದಲಿತ ವಿರೋಧಿ ಎಂದು ಭಾವಿಸಿ ದೂರ ಉಳಿದಿದ್ದ ಪರಿಶಿಷ್ಟ ಜಾತಿಯವರು ಮೋದಿ ಅವರ ಕಾರ್ಯಶೈಲಿಯನ್ನು ಮೆಚ್ಚಿದ್ದಾರೆ ಎಂದರು.
ಬಿಜೆಪಿ ದಲಿತ ವಿರೋಧಿ ಎಂಬುದಾಗಿ ಅಪಪ್ರಚಾರ ಮಾಡುತ್ತಿರುವ ಕಾಂಗ್ರೆಸ್‍ಗೆ ಪಕ್ಷದ ಕಾರ್ಯಕರ್ತರು ತಕ್ಕ ಉತ್ತರ ನೀಡಬೇಕು. ಅಲ್ಲದೆ, ನಮ್ಮ ಸರ್ಕಾರಗಳು ಆ ವರ್ಗಕ್ಕಾಗಿ ಮಾಡಿರುವ ಜನಪರ ಕಾರ್ಯಕ್ರಮಗಳನ್ನು ಮನವರಿಕೆ ಮಾಡಿಕೊಡುವುದರ ಜೊತೆಗೆ ಕಾಂಗ್ರೆಸ್‍ನಿಂದ ಆಗಿರುವ ಅನ್ಯಾಯವನ್ನು ಅರ್ಥ ಮಾಡಿಸುವುದರಲ್ಲಿ ತೊಡಗಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಜಿಲ್ಲಾ ಪಂಚಾಯತ್‍ನ ಮಾಜಿ ಅಧ್ಯಕ್ಷೆ ಸಹನಾ ರವಿ ಮಾತನಾಡಿ, ನಮ್ಮ ಪಕ್ಷವು ಹಿಂದೂ ಧರ್ಮ ಹಾಗೂ ಜಾತಿಗಳನ್ನು ರಕ್ಷಿಸುತ್ತಿದ್ದರೆ, ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವೀರಶೈವ-ಲಿಂಗಾಯತ ಧರ್ಮವನ್ನು ಒಡೆದು, ಸಮಾಜದಲ್ಲಿ ಗೊಂದಲ ಸೃಷ್ಟಿಸಿತು ಎಂದು ಆರೋಪಿಸಿದರು.
ರಾಜ್ಯದಲ್ಲಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವು ಕುಂಟ-ಕುರುಡರಂತೆ ಆಡಳಿತ ನಡೆಸುತ್ತಿದೆ. ಈ ಸರ್ಕಾರಕ್ಕೆ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವ ಅಧಿಕಾರವೂ ಇಲ್ಲವಾಗಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನಿರ್ಣಯ ತೆಗೆದುಕೊಳ್ಳಲು ಇನ್ನೊಬ್ಬರ ನಿರ್ಧಾರ ಪಡೆದುಕೊಳ್ಳಬೇಕಾದ ವ್ಯವಸ್ಥೆ ಇದ್ದು, ಈ ಸರ್ಕಾರಕ್ಕೆ ಹೆಚ್ಚು ದಿನ ಭವಿಷ್ಯವಿಲ್ಲ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ರಮೇಶ್ ನಾಯ್ಕ ಮಾತನಾಡಿ, ಇನ್ನೂ ಕೆಲವೇ ತಿಂಗಳಲ್ಲಿ ಲೋಕಸಭೆ ಹಾಗೂ ಪಾಲಿಕೆಗೆ ಚುನಾವಣೆ ನಡೆಯಲಿದ್ದು, ಕಳೆದ ಪಾಲಿಕೆ ಚುನಾವಣೆಯಲ್ಲಿ ಅಧಿಕಾರ ಹಿಡಿಯಲಾಗಲಿಲ್ಲ. ಆದರೆ, ಈಗ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರು ಒಂದೊಂದು ವಾರ್ಡ್‍ಗಳಲ್ಲಿ ತಲಾ 300 ಜನ ಹೊಸ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಿ, ನಮ್ಮ ಪಕ್ಷದೆಡೆಗೆ ಸೆಳೆದರೆ ಪಾಲಿಕೆಯಲ್ಲಿ ಅಧಿಕಾರ ಹಿಡಿಲು ಸಹಕಾರಿಯಾಗಲಿದೆ. ಆದ್ದರಿಂದ ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕೆಂದು ಸಲಹೆ ನೀಡಿದರು.
ಬಿಜೆಪಿ ಜಿಲ್ಲಾ ಎಸ್.ಸಿ. ಮೋರ್ಚಾ ಅಧ್ಯಕ್ಷ ಎಲ್.ಡಿ. ಗೋಣೆಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರಾಜಶೇಖರ್, ಗೌಳಿ ಲಿಂಗರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.