ಚಿತ್ರದುರ್ಗ
ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಬರಪೀಡಿತ ಎಂದು ಘೋಷಣೆಯಾಗಿದ್ದು ಜನರು ಉದ್ಯೋಗಕ್ಕಾಗಿ ವಲಸೆ ಹೋಗದಂತೆ ತಕ್ಷಣವೆ ಉದ್ಯೋಗ ಖಾತರಿಯಡಿ ಹೂಳೆತ್ತುವ ಕಾಮಗಾರಿ ತೆಗೆದುಕೊಂಡು ಜನರಿಗೆ ಉದ್ಯೋಗ ನೀಡಲು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವೆಂಕಟರಮಣಪ್ಪನವರು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬರ ಸ್ಥಿತಿಗತಿಯ ಬಗ್ಗೆ ಪ್ರಗತಿ ಪರಿಶೀಲನೆಯನ್ನು ನಡೆಸಿ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಉದ್ಯೋಗ ಖಾತರಿಯಡಿ ಇಲ್ಲಿಯವರೆಗೆ ಶೇ 45 ರಷ್ಟು ಪ್ರಗತಿಯನ್ನು ಮಾತ್ರ ಸಾಧನೆ ಮಾಡಲಾಗಿದೆ. ಆದರೆ ಜನರಿಗೆ ಉದ್ಯೋಗ ಖಾತರಿಯಡಿ ಕೆಲಸವನ್ನೆ ಆರಂಭಿಸದ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು. ಕೆಲಸ ಮಾಡದಿದ್ದಲ್ಲಿ ಅಂತಹ ಅಧಿಕಾರಿಯನ್ನು ಬೇರೆಡೆ ವರ್ಗಾಯಿಸಿ ಅಥವಾ ಅಗತ್ಯವಿದ್ದಲ್ಲಿ ಅಮಾನತು ಮಾಡಿ ಎಂದು ಸೂಚನೆ ನೀಡಿದರು.
ಬರಗಾಲದ ಪರಿಸ್ಥಿತಿಯಲ್ಲಿ ಜನರಿಗೆ ಉದ್ಯೋಗ, ಕುಡಿಯುವ ನೀರು ಹಾಗೂ ಮೇವು ಒದಗಿಸುವುದು ಆದ್ಯ ಕರ್ತವ್ಯವಾಗಿದೆ. ಉದ್ಯೋಗ ಖಾತರಿಯಲ್ಲಿ ಅತ್ಯಂತ ಕಡಿಮೆ ಸಾಧನೆ ಮಾಡಿದ್ದು ಇದಕ್ಕೆ ಚುನಾವಣೆಯ ನೆಪವೊಡ್ಡುವುದು ತಪ್ಪಾಗುತ್ತದೆ. ಚುನಾವಣೆ ನಡೆದು ಆರು ತಿಂಗಳಾಗುತ್ತಿದೆ, ಆದರೆ ಚುನಾವಣೆ ನೆಪ ಸಹಿಸಲಾಗದು ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗೆ ಸೂಚನೆ ನೀಡಿದರು.
ಸಿ.ಇ.ಓ. ಸೇರಿದಂತೆ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಗತಿ ಕುರಿತಂತೆ ಪರಿಶೀಲನೆ ನಡೆಸಿ ಉದ್ಯೋಗ ಖಾತರಿಡಯಿ ಪ್ರಗತಿಯಾಗುವಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿದೆ.
ಬರಗಾಲ ಇರುವುದರಿಂದ ಜಿಲ್ಲೆಯಲ್ಲಿನ ಬಹುತೇಕ ಕೆರೆಗಳಲ್ಲಿ ನೀರಿರುವುದಿಲ್ಲ. ಆದ್ದರಿಂದ ಹೂಳೆತ್ತಲು ಇದು ಸಕಾಲವಾಗಿದ್ದು ಕೆರೆಗಳ ಹೂಳೆತ್ತಿದಲ್ಲಿ ರೈತರೇ ತಮ್ಮ ಟ್ರ್ಯಾಕ್ಟರ್‍ಗಳನ್ನು ತಂದು ಮಣ್ಣು ತುಂಬಿಕೊಂಡು ಹೋಗುತ್ತಾರೆ. ಖಾತರಿಯಡಿ ತುಂಬಿ ಕೊಡುವ ಕೆಲಸವನ್ನು ತಕ್ಷಣವೇ ಆರಂಭಿಸಲು ಸೂಚನೆ ನೀಡಿದರು.
ಕೃಷಿ ಹೊಂಡಗಳಿಂದ ರೈತರಿಗೆ ಅನುಕೂಲವಾಗಲಿದ್ದು ಉದ್ಯೋಗ ಖಾತರಿಯಡಿ ಎಷ್ಟು ಹೊಂಡಗಳನ್ನು ನಿರ್ಮಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರನ್ನು ಕೇಳಿದಾಗ ಹೊಳಲ್ಕೆರೆಯಲ್ಲಿ ಖಾತರಿಯಡಿ ಕೇವಲ 4 ನಿರ್ಮಿಸಲಾಗಿದೆ ಎಂದಾಗ ನೀವು ಎ.ಸಿ.ಕೊಠಡಿಯಲ್ಲಿ ಕುಳಿತುಕೊಳ್ಳಲಿಕ್ಕಾ ಇರುವುದು, ಪರಿಶೀಲನೆಯನ್ನು ಏಕೆ ನಡೆಸಲಿಲ್ಲ. ಮುಂದಿನ ದಿನಗಳಲ್ಲಿ ಎಲ್ಲಾ ಕೃಷಿ ಹೊಂಡಗಳನ್ನು ಪರಿಶೀಲನೆ ನಡೆಸಲಾಗುತ್ತದೆ.
ಅವು ಉದ್ಯೋಗ ಖಾತರಿಯಲ್ಲಾಗಿರಲಿ ಅಥವಾ ಕೃಷಿ ಭಾಗ್ಯದಲ್ಲಾಗಿರಲಿ ಸ್ಥಳ ತನಿಖೆ ಮಾಡಲಾಗುತ್ತದೆ ಎಂದರು. ಕುಡಿಯುವ ನೀರು ಪೂರೈಕೆ; ಕಳೆದ ವರ್ಷ ಟ್ಯಾಂಕರ್‍ನಲ್ಲಿ ನೀರು ಪೂರೈಕೆ ಮಾಡಿದ ಹಣವನ್ನೆ ಪಾವತಿ ಮಾಡಿಲ್ಲ ಎಂದು ಶಾಸಕರಾದ ಜಿ . ಹೆಚ್ . ತಿಪ್ಪಾರೆಡ್ಡಿಯವರು ತಿಳಿಸಿದಾಗ ಬಾಕಿ ಉಳಿದ ಒಂದು ಕೋಟಿಯಲ್ಲಿ ರೂ.57 ಲಕ್ಷ ಪಾವತಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಕುಡಿಯುವ ನೀರು ಪೂರೈಕೆ ಮಾಡಿದ ಟ್ಯಾಂಕರ್‍ಗಳ ಬಿಲ್ಲನ್ನು ಇಟ್ಟುಕೊಳ್ಳದೆ ಪಾವತಿಸಲು ಸಚಿವರು ಸೂಚನೆ ನೀಡಿದರು.
ಹೊಳಲ್ಕೆರೆ ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು ಬೋರ್ ಕೊರೆದರೂ ಒಂದೆರೆಡು ದಿನ ನೀರು ಬಂದು ನಿಲ್ಲುತ್ತದೆ. ಇಂತಹ ಸ್ಥಿತಿ ತಾಲ್ಲೂಕಿನಲ್ಲಿದ್ದು ಅಧಿಕಾರಿಗಳು ಅತ್ಯುತ್ತಮ ಕೆಲಸ ಮಾಡಬೇಕು. ಹೊಳಲ್ಕೆರೆಗೆ ನದಿ ಮೂಲದಿಂದ ನೀರು ಬರುತ್ತಿಲ್ಲವಾಗಿರುವುದರಿಂದ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕೆಂದು ಶಾಸಕರಾದ ಎಂ.ಚಂದ್ರಪ್ಪನವರು ಮನವಿ ಮಾಡಿದರು. ಬರಗಾಲ ಈಗ ಆರಂಭವಾಗುತ್ತಿದೆ, ಆದ್ದರಿಂದ ಮುಂದೆ ಬರಬಹುದಾದ ಸಮಸ್ಯೆಗಳನ್ನು ಅಧ್ಯಯನ ಮಾಡಿ ಯೋಜನೆ ರೂಪಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದರು.
ಹೊಳಲ್ಕೆರೆ ತಾಲ್ಲೂಕಿನಲ್ಲಿ 160 ಕೊಳವೆಬಾವಿ ಕೊರೆಯಲು ಯೋಜಿಸಿದ್ದು ರೂ.4 ಕೋಟಿಗಳಿಗೆ ಯೋಜನೆ ರೂಪಿಸಲಾಗಿದೆ. ಬಿಡುಗಡೆಯಾದ 11.70 ಕೋಟಿಯಲ್ಲಿ 3.38 ಕೋಟಿ ಲಭ್ಯವಿದೆ. ಟಾಸ್ಕ್ ಪೋರ್ಸ್‍ನಿಂದ 50 ಲಕ್ಷ ಬಿಡುಗಡೆಯಾಗಿದೆ ಎಂದು ಕುಡಿಯುವ ನೀರು ಪೂರೈಕೆ ಸಹಾಯಕ ಇಂಜಿನಿಯರ್ ಸಭೆಗೆ ಮಾಹಿತಿ ನೀಡಿದರು.
ಚಿತ್ರದುರ್ಗ ತಾಲ್ಲೂಕಿನ ಸಿಂಗಾಪುರ ಕಾಲೋನಿಗೆ ನೀರು ಲಬ್ಯವಾಗದ ಕಾರಣ ಸ್ವಲ್ಪ ದೂರದಲ್ಲಿ ಕೊಳವೆಬಾವಿ ಕೊರೆಯಲಾಗಿದೆ ಎಂದು ಶಾಸಕರಾದ ತಿಪ್ಪಾರೆಡ್ಡಿಯುವರು ಪ್ರಸ್ತಾಪಿಸಿದರು. ಪೈಪ್‍ಲೈನ್ ಕಾಮಗಾರಿಗೆ ಅರಣ್ಯ ಇಲಾಖೆ ಭೂಮಿ ಬರುವುದರಿಂದ ಇದಕ್ಕೆ ಯಾವುದೇ ಅಡ್ಡಿಪಡಿಸದಂತೆ ಉಪ ಅರಣ ಸಂರಕ್ಷಣಾಧಿಕಾರಿಗೆ ಸಚಿವರು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್‍ನಲ್ಲಿ ಹೊರಗುತ್ತಿಗೆಯಡಿ ಕೆಲಸ ಮಾಡುವವರಿಗೆ ಕಳೆದ 11 ತಿಂಗಳಿನಿಂದ ವೇತನ ಪಾವತಿಸಿರುವುದಿಲ್ಲ. ಆದರೆ ಕಳೆದ 10 ವರ್ಷಗಳಿಂದ ಇದೇ ಏಜೆನ್ಸಿಗೆ ಹೊರಗುತ್ತಿಗೆ ನೀಡುವ ಅಗತ್ಯವೇನಿದೆ. ಪ್ರತಿ ತಿಂಗಳೂ ಸಿಬ್ಬಂದಿಗೆ ವೇತನ ಪಾವತಿ ಮಾಡಬೇಕಾಗಿದ್ದು ಆಯಾ ಸಂಸ್ಥೆಯ ಜವಾಬ್ದಾರಿಯಾಗಿದ್ದರೂ ಈ ಸಂಸ್ಥೆಯನ್ನು ಏಕೆ ಇಟ್ಟುಕೊಳ್ಳಲಾಗಿದೆ ಎಂದು ಶಾಸಕರಾದ ಗೂಳಿಹಟ್ಟಿ ಡಿ.ಶೇಖರ್, ಎಂ.ಚಂದ್ರಪ್ಪ, ಜಿ.ಹೆಚ್.ತಿಪ್ಪಾರೆಡ್ಡಿಯವರು ಪ್ರಶ್ನಿಸಿದರು. ಈ ಬಗ್ಗೆ ಮಾರ್ಗಸೂಚಿಗಾಗಿ ಸರ್ಕಾರಕ್ಕೆ ಪತ್ರ ಬರೆಯಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಸಚಿವರು ಸೂಚಿಸಿದರು.
ಸಮಸ್ಯಾತ್ಮಕ ಗ್ರಾಮಗಳ ವಿವರವನ್ನು ಶಾಸಕರುಗಳಿಂದ ಪಟ್ಟಿ ಬಂದಲ್ಲಿ ಇದಕ್ಕೆ ಬೇಕಾದ ಟೆಂಡರ್ ಕರೆಯಲು ಅನುಕೂಲವಾಗುತ್ತದೆ. ಐದು ಲಕ್ಷದೊಳಗಿನ ಕಾಮಗಾರಿಯನ್ನು ಗುತ್ತಿದಾರರೊಂದಿಗೆ ಒಪ್ಪಂದ ಮಾಡಿಕೊಂಡು, ಹೆಚ್ಚಿದ್ದಲ್ಲಿ ಡಿಸೆಂಬರ್ 15 ರೊಳಗಾಗಿ ಟೆಂಡರ್ ಕರೆಯಲಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದರು.
ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ 14 ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾದ ಅನುದಾನವನ್ನು ಮನಸು ಇಚ್ಚೆ ವೆಚ್ಚ ಮಾಡಿದ್ದಾರೆ. ಬೀದಿದೀಪಗಳ ಖರೀದಿ, ಲಕ್ಷಗಟ್ಟಲೆ ಕಂಪ್ಯೂಟರ್ ದುರಸ್ಥಿ ಮಾಡಿಸಲಾಗಿದೆ ಎಂದು ಗೂಳಿಹಟ್ಟಿ ಡಿ. ಶೇಖರ್, ಎಂ.ಚಂದ್ರಪ್ಪನವರು ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಪ್ರಸ್ತಾಪಿಸಿದರು.
ಸಚಿವರು ಮಾರ್ಗಸೂಚಿ ಉಲ್ಲಂಘನೆ ಮಾಡಿದವರಿಗೆ ನೋಟೀಸ್ ನೀಡಿ ಈ ಬಗ್ಗೆ ತನಿಖೆ ಮಾಡಲು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಿ.ಇ.ಓ.ಪತ್ರ ಕಳುಹಿಸಲು ಸೂಚನೆ ನೀಡಿದರು.
ಬರಗಾಲ ಆರಂಭವಾಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರವಹಿಸಬೇಕು. ಜಿಲ್ಲಾಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ ಆಯಾ ತಾಲ್ಲೂಕಿನ ತಹಶೀಲ್ದಾರ್, ಗ್ರಾಮೀಣ ಕುಡಿಯುವ ನೀರು ಪೂರೈಕೆ ವಿಭಾಗದ ಇಂಜಿನಿಯರ್‍ಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಯಾರು ಸಹ ತಮ್ಮ ಕರ್ತವ್ಯದಲ್ಲಿ ನಿರ್ಲಕ್ಷ್ಯತೆ ತೋರಬಾರದೆಂದು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಸಭೆಯಲ್ಲಿ ಸಂಸದರಾದ ಬಿ.ಎನ್.ಚಂದ್ರಪ್ಪ, ಶಾಸಕರಾದ ಟಿ.ರಘುಮೂರ್ತಿ, ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಪಂಕಜ್‍ಕುಮಾರ್ ಪಾಂಡೆಯವರು ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
