ಅಧಿಕಾರಿಗಳು ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು- ಮಂಜುಳಾ

ಜಗಳೂರು :

      ತಾಲೂಕಿನಲ್ಲಿ ಮಳೆ ಬಾರದೇ ನೀರಿನ ಸಮಸ್ಯೆಯಾಗಲಿದ್ದು , ಅಧಿಕಾರಿಗಳು ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.

      ಗ್ರಾಮೀಣ ಪ್ರದೇಶಗಳಲ್ಲಿ ಈಗಾಗಲೇ ಮಳೆಬಾರದೇ ಇರುವುದರಿಂದ ಕೆರೆ ಕಟ್ಟೆಗಳಲ್ಲಿ ನೀರಿಲ್ಲದೇ ಅಂತರ್ಜಲ ಕುಸಿತಕೊಂಡಿದೆ. 50 ಹೆಚ್ಚು ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಇನ್ನೊಂದು ತಿಂಗಳು ಕಳೆದರೆ ನೀರು ಅಭಾವ ಹೆಚ್ಚಾಗಲಿದ್ದು ಅಧಿಕಾರಿಗಳೂ ಈಗಲೇ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದರು.

      ಅಧ್ಯಕ್ಷರಿಗೆ ಸದಸ್ಯರ ತರಾಟೆ:- ತಿಂಗಳಿಗೊಂದು ನಡೆಯುವ ಸಭೆಗೆ ಮಾತ್ರ ಬರುತ್ತೀರಿ ಮತ್ತೆ ತಿಂಗಳಾದ ನಂತರ ಸಭೆಗೆ ಹಾಜರಾಗುತ್ತಿರಿ, ನೀವು ಈ ರೀತಿ ಮಾಡುವುದರಿಂದ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡದೇ ಅಭಿವೃದ್ದಿ ಕೆಲಸಗಳು ಕುಂಟಿತವಾಗುತ್ತವೆ. ಹಿಂದಿನ ಸಭೆಯಲ್ಲಿ ನಡೆದ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಉತ್ತರ ನೀಡದೆ ಬರೀ ಸಭೆಗೆ ಬಂದು ಹೊಗುವುದರಿಂದ ಗ್ರಾಮಿಣ ಪ್ರದೇಶಗಳಲ್ಲಿನ ತೊಂದರೆಗಳನ್ನು ಯಾರು ಬಗೆಹರಿಸುತ್ತಾರೆ ಎಂದು ತಿಮ್ಮೇಶ್ ಪ್ರಶ್ನಿಸಿದರು.

       ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡಬೇಕೆಂದು ಅಧ್ಯಕ್ಷರು ಅಧಿಕಾರಿಗಳಿಗೆ ಸೂಚನೆ ನೀಡಿ, ಮುಂದಿನ ದಿನಗಳಲ್ಲಿ ನಾನೆ ಗ್ರಾಮಿಣ ಪ್ರದೇಶಗಳಿಗೆ ಬೇಟಿ ನೀಡುತ್ತೇನೆ ಎಂದು ಅಧ್ಯಕ್ಷೆ ಮಂಜುಳಾ ಸದಸ್ಯರಿಗೆ ಉತ್ತರಿಸಿದರು.

       ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಕೆ.ಟಿ. ಬಸಣ್ಣ ವರದಿ ಮಂಡಿಸಿ ರಾಜ್ಯ ಸರ್ಕಾರವು ಈಗಾಗಲೇ 86 ತಾಲೂಕುಗಳನ್ನು ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದ್ದು, ಅದರಲ್ಲಿ ಜಗಳೂರು ತಾಲೂಕು ಬಿಟ್ಟು ಹೋಗಿದೆ. ಪ್ರಥಮ ಹಂತದಲ್ಲೆ ತಾಲೂಕು ಬರ ಪೀಡಿತ ಪ್ರದೇಶದ ಪಟ್ಟಿಯಲ್ಲಿ ಸೇರಬೇಕಾಗಿತ್ತು, ಆದರೆ ಆಗಸ್ಟ್ ಮಾಹೆಯಲ್ಲಿ ವಾಡಿಗಿಂತ ಶೇ 80 ರಷ್ಟು ಹೆಚ್ಚು ಮಳೆಯಾಗಿದ್ದು, ಸೆಪ್ಟಂಬರ್ ಮಾಹೆಯಲ್ಲಿ ಶೇ. 90 ರಷ್ಟು ಮಳೆ ಕೊರತೆಯಾಗಿದ್ದು ಕಾಳು ಕಟ್ಟುವ ಹಂತದಲ್ಲಿ ಬೆಳೆ ಒಣಗುತ್ತಿವೆ. ಇವುಗಳ ಪರಿಸ್ಥಿತಿಯನ್ನು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದು ಎರಡನೇ ಪಟ್ಟಿಯಲ್ಲಿ ತಾಲೂಕು ಸೇರ್ಪಡೆಯಾಗುವ ನಿರೀಕ್ಷೆ ಇದೆ ಎಂದು ಸಭೆಗೆ ಮಾಹಿತಿ ನೀಡಿದರು.

      ಬೆಸ್ಕಾಂನ ಎಇಇ ಪ್ರವೀಣ್ ವರದಿ ಮಂಡಿಸಲು ಮುಂದಾದಾಗ ಹನುಮಂತಾಪುರ ತಾಲೂಕು ಪಂಚಾಯ್ತಿ ಸದಸ್ಯೆ ಶಿಲ್ಪಾ ಮಂಜುನಾಥ್ ಮಾತನಾಡಿ ಹನುಮಂತಪುರ ಗೊಲ್ಲರಹಟ್ಟಿ ಗ್ರಾಮದಲ್ಲಿ ವಾಸಿಸುವ ಗ್ರಾಮಸ್ಥರಿಗೆ ವಿದ್ಯುತ್ ಸಂಪರ್ಕವಿಲ್ಲ, ಸಮರ್ಪಕ ವಿದ್ಯುತ್ ಸಂಪರ್ಕ ನೀಡುವಂತೆ ನಿಮಗೆ ಹಲವಾರು ಬಾರಿ ಸೂಚನೆ ನೀಡಿದರು ಸಹ ಸ್ಪಂದಿಸಿಲ್ಲ ಸುಟ್ಟುಹೋದ ಮೀಟರ್ ಬದಲಾಯಿಸಲು ನಿಮ್ಮ ಸಿಬ್ಬಂದಿಗಳು 3 ಸಾವಿರಕ್ಕೂ ಅಧಿಕ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದಾಗ ಬೆಸ್ಕಾ ಎಇಇ ಪ್ರವೀಣ್ ಪ್ರತಿಕ್ರಿಯಿಸಿ ಗುಡಿಸಲುಗಳಿಗೆ ವಿದ್ಯುತ್ ಸಂಪರ್ಕ ನೀಡಲು ¨ರುವುದಿಲ್ಲ ಮಿಟರ್ ಸುಟ್ಟರೆ ಅದಕ್ಕೆ 1400 ರೂ. ನಿಗಧಿತ ಶುಲ್ಕವಿದ್ದು, ನಿಗದಿತ ಶುಲ್ಕಕಿಂತ ಹೆಚ್ಚು ಹಣ ವಸೂಲಿ ಮಾಡಿದರೆ ನನ್ನ ಗಮನಕ್ಕೆ ತನ್ನ ಎಂದು ಹೇಳಿದರು.

       ತೊರೆಸಾಲು ಭಾಗದ ನವ ಗ್ರಾಮಗಳಾದ ಮಲ್ಲಾಪುರ, ಸಿದ್ದಿಹಳ್ಳಿ, ಸೇರಿದಂತೆ ಇತರೆ ಗ್ರಾಮಗಳಲ್ಲಿ ಅಂಬೇಡ್ಕರ್ ಯೋಜನೆಯಡಿ ನಿರ್ಮಿಸಿಕೊಂಡವರಿಗೂ ಸಹ ವಿದ್ಯುತ್ ಸಂಪರ್ಕ ನೀಡಿಲ್ಲ ಎಂದು ಸದಸ್ಯ ತಿಮ್ಮೇಶ್ ಪ್ರಶ್ನಿಸಿದರೆ ಅದನ್ನು ಪರಿಶೀಲನೆ ನಡೆಸುತ್ತೆನೆ ಎಂದರು.
ಲೋಕೊಪಯೋಗಿ ಇಲಾಖೆಯ ಎಇ ಸತ್ಯಪ್ಪ ವರದಿ ಮಂಡಿಸಿ ಪ್ರಸಕ್ತ ಸಾಲಿಗೆ ಯಾವುದೆ ಅನುದಾನ ಬಿಡುಗಡೆಯಾಗಿಲ್ಲ ಪಟ್ಟಣದ ಪ್ರಮುಖ ರಸ್ತೆಗಳ 100 ಮೀಟರ್ ರಸ್ತೆ ಅಭಿವೃದ್ದಿಗೆ ಅನುದಾನ ಬಿಡುಗಡೆಯಾಗಿದ್ದು, ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.

     ಜಿಲ್ಲಾ ಪಂಚಾಯ್ತಿ ಪ್ರಭಾರಿ ಎಇಇ ದಯಾನಂದ ಸ್ವಾಮಿ ವರದಿ ಮಂಡಿಸಿ ತಾಲೂಕಿನ ವಿವಿಧ ಗಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಿವ್ರವಾಗಿದ್ದು ಈಗಾಗಲೇ 40ಕ್ಕೂ ಅಧಿಕ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಹೇಳಿದರು

     ಈ ವೇಳೆ ಸಮಾಜ ಕಲ್ಯಾಣ ಇಲಾಖೆ ಅಶೋಕ್, ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರಚಂದ್ರ, ಸಿಡಿಪಿಓ ಭಾರತಿ ಬಣಕಾರ್, ಪಶುವೈದ್ಯಾಧಿಕಾರಿ ರಂಗಪ್ಪ, ಭೂಸೇನ ನೀಗಮದ ಎಇಇ ವೀರಯ್ಯ ವರದಿ ಮಂಡಿಸಿದರು.ಈ ಸಂಧರ್ಭದಲ್ಲಿ ತಾಲ್ಲೂಕು ಕಾರ್ಯನಿರ್ವಾಹಕಾಧಿಕಾರಿ ಜಾನಿಕಿರಾಮ್, ಉಪಾಧ್ಯಕ್ಷ ಮುದೇಗೌಡ್ರು ಬಸವರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪೇಸ್ವಾಮಿ, ಸರ್ವ ಸದಸ್ಯರು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link