ಅದ್ಯಾರನ್ನ ಸಸ್ಪೆಂಡ್ ಮಾಡ್ತಾರೆ ನೋಡ್ತಿನಿ : ಎಂಪಿಆರ್

ದಾವಣಗೆರೆ:

    ನಾನು ಇನ್ನೂ 15 ಬಸ್ ಓಡಿಸುತ್ತೇನೆ. ಅದ್ಯಾರನ್ನ ಸಸ್ಪೆಂಡ್ ಮಾಡುತ್ತಾರೆ ನಾನು ನೋಡ್ತಿನಿ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.

    ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬೇಡ ಅಂದರೂ ಕೇಸ್ ಹುಡುಕಿಕೊಂಡು ಬರುತ್ತವೆ. ಒಂದಲ್ಲ ಇನ್ನೂ ಇಂತಹ 15 ಬಸ್ಸುಗಳನ್ನು ನಾನೇ ಓಡಿಸುತ್ತೇನೆ. ಯಾರು ನನ್ನನ್ನು ತಡೆಯುತ್ತಾರೆ. ಯಾರನ್ನು ಸಸ್ಪೆಂಡ್ ಮಾಡುತ್ತಾರೆ ಎಂಬುದನ್ನು ನಾನೂ ನೋಡುತ್ತೇನೆ. ಶಿವಮೊಗ್ಗ ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನೋಟೀಸ್ ಜಾರಿ ಮಾಡಿರುವುದು ಸರಿಯಲ್ಲ ಎಂದರು.

    ನನ್ನ ಬಳಿ ಭಾರೀ ವಾಹನಗಳ ಡ್ರೈವಿಂಗ್ ಲೈಸೆನ್ಸ್ ಇಲ್ಲ. ಕಾನೂನು ಪ್ರಕಾರ ಹೆವಿ ವೆಹಿಕಲ್ ಡ್ರೈವಿಂಗ್ ಲೈಸೆನ್ಸ್ ಇಲ್ಲದ ನಾನು ಬಸ್ಸು ಚಾಲನೆ ಮಾಡಿದ್ದು ತಪ್ಪು. ಆದರೆ, ನನ್ನ ಬಳಿ ಆತ್ಮವಿಶ್ವಾಸವಿದೆ ಎಂದು ಹೇಳಿದರು.ದೇಶದೆಲ್ಲೆಡೆ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಚರ್ಚೆಯಾಗುತ್ತಿದ್ದು, ದೇಶದ್ರೋಹಿಗಳು ಇಂತಹದೊಂದು ಮಹತ್ವದ ಕಾಯ್ದೆಯನ್ನು ವಿರೋಧಿಸುತ್ತಿದ್ದಾರಷ್ಟೇ.

    ಮತ ಬ್ಯಾಂಕ್‍ಗಾಗಿ ರಾಜಕಾರಣಿಗಳು ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಪೌರತ್ವ ವಿರೋಧಿಯಾಗಿ ನಡೆಯುವ ರ್ಯಾಲಿಗಳು ಕಾಂಗ್ರೆಸ್ ಪಕ್ಷದ ಕೃಪಾಪೋಷಿತವಾಗಿವೆಯಷ್ಟೇ ಎಂದು ಆರೋಪಿಸಿದರು.ಕಾಂಗ್ರೆಸ್ಸಿನವರಿಗೆ ಓಟು ಬೇಕು. ಓಟಿಗಾಗಿ ಭಾರತ ದೇಶವನ್ನೇ ಮಾರಾಟ ಮಾಡುವುದಕ್ಕೂ ಕಾಂಗ್ರೆಸ್ಸಿನವರು ಸಿದ್ಧರಿದ್ದಾರೆ. ದೇಶವೇನು ಕಾಂಗ್ರೆಸ್ಸಿನವರಿಗೆ ಮಾವನ ಮನೆಯಾ? ಎಂದು ಪ್ರಶ್ನಿಸಿದರು.

    ಮಂಗಳೂರಲ್ಲಿ ಪೊಲೀಸ್ ಗೋಲಿಬಾರ್‍ನಲ್ಲಿ ಮೃತಪಟ್ಟವರಿಗೆ ಪರಿಹಾರ ನೀಡುವಂತೆ ಕೆಲವರು ಹೇಳುತ್ತಿದ್ದಾರೆ. ಪರಿಹಾರದ ಹಣ ಅಂತಹವರ ಅಪ್ಪನ ಮನೆಯ ಆಸ್ತಿಯೇ? ಇಡೀ ಕರಾವಳಿ ಜಿಲ್ಲೆಯ ಗಲಭೆಗೆ ಕಾಂಗ್ರೆಸ್ಸಿನ ಶಾಸಕ, ಮಾಜಿ ಸಚಿವ ಯು.ಟಿ. ಖಾದರ್ ನೇರ ಕಾರಣವಾಗಿದ್ದಾರೆ. ಕಾಂಗ್ರೆಸ್ ಪಕ್ಷದ ರಾಜ್ಯ, ರಾಷ್ಟ್ರದ ನಾಯಕರಿಗೆ ನಿಜವಾಗಲೂ ತಾಕತ್ತಿದ್ದರೆ ಪಾಕಿಸ್ತಾನಕ್ಕೆ ಹೋಗಿ ಹಿಂದುಗಳ ಪರವಾಗಿ ಹೋರಾಟ ಮಾಡಲಿ ನೋಡೋಣ ಎಂದು ಸವಾಲು ಎಸೆದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ